Sunday, 11th May 2025

ಸೇವೆ, ಸಮರ್ಪಣೆಯ ಸಂತ ಹೊಸಬಾಳೆ

ಅಭಿಮತ

ಆದರ್ಶ್‌ ಶೆಟ್ಟಿ, ಉಪ್ಪಿನಂಗಡಿ

ಶಿವಮೊಗ್ಗ ಜಿಲ್ಲೆಯ ಸೊರಬದಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟು ಅಭಾವಿಪದ ಪೂರ್ಣಾವಧಿ ಕಾರ್ಯಕರ್ತರಾಗಿ, ನಂತರ ಸಂಘದ ಶಾಖೆಗೆ ಆಕರ್ಷಿತರಾಗಿ ಸಂಘದ ಮುಖ್ಯ ಶಿಕ್ಷಕ್ ಜವಾಬ್ದಾರಿ ಯಿಂದ ಹಿಡಿದು ಹಂತ ಹಂತವಾಗಿ ಪ್ರಚಾರಕ ಜೀವನದಲ್ಲಿ ಸಾಗಿ ಪ್ರಸ್ತುತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅತ್ಯುನ್ನತ
ಜವಾಬ್ದಾರಿಯಾದ ಸರಕಾರ್ಯವಾಹ ಸ್ಥಾನಕ್ಕೆ ಏರಿದ ಎರಡನೇ ಕನ್ನಡಿಗ ದತ್ತಾತ್ರೇಯ ಹೊಸಬಾಳೆಯವರು.

ಅಂದಿನಿಂದ ಇಂದಿನವರೆಗೂ ಥೇಟ್ ಸಂತನಂತೆ ದೇಶದ ಉದ್ದಗಲಕ್ಕೂ ಸಂಚರಿಸಿದವರು. ಸ್ನಾತಕೋತ್ತರ ಪದವೀಧರರಾಗಿ ಅಂದಿನ ಕಾಲದಲ್ಲಿ ಉನ್ನತ ಹುದ್ದೆ ಪಡೆದು ಕೈ ತುಂಬಾ ಸಂಪಾದಿಸುವ ಅವಕಾಶಗಳಿದ್ದರೂ ಅವನ್ನೆ ಬದಿಗೊತ್ತಿ ತುರ್ತು ಪರಿಸ್ಥಿತಿಯ ಸಂದರ್ಭ ಆಂದೋಲನಕ್ಕೆ ಧುಮುಕಿ ಹೋರಾಟ, ಸತ್ಯಾಗ್ರಹ, ಜೈಲುವಾಸ, ವಿದ್ಯಾರ್ಥಿಗಳ ನಡುವೆ ಜಾಗೃತಿಯ ಮೂಲಕ ಗಮನ ಸೆಳೆದವರು ಇದೇ ಹೊಸಬಾಳೆ.

ಸಂಘದ ಪ್ರಚಾರದ ಮಧ್ಯೆ ಅಭಾವಿಪದ ಹೊಣೆಯನ್ನೂ ಜತೆ ಜತೆಗೆ ಹೆಗಲ ಮೇಲೇರಿಸಿಕೊಂಡು ಪ್ರಾಂತ, ಕ್ಷೇತ್ರೀಯ, ಅಖಿಲ
ಭಾರತ ಮಟ್ಟದಲ್ಲಿ ಯುವಸಮೂಹವನ್ನು ಸಂಘಟಿಸಿದರು. ತದ ನಂತರ ಸಂಘದ ಅಖಿಲ ಭಾರತ ಬೌದ್ಧಿಕ್ ಪ್ರಮುಖರಾಗಿ ಜವಾಬ್ದಾರಿ ಹೊತ್ತು ಉತ್ತರ ಭಾರತ, ಈಶಾನ್ಯ ರಾಜ್ಯಗಳಲ್ಲಿ ತನ್ನ ಸಂಘಟನಾ ಕಾರ್ಯವನ್ನು ವಿಸ್ತರಿಸಿದರು.

ಅಪಾರ ಜ್ಞಾನ, ತೀಕ್ಷ್ಣತೆ, ಕ್ರಿಯಾಶೀಲ ವ್ಯಕ್ತಿತ್ವ, ಭಾಷಾ ಜ್ಞಾನದ ಹಿಡಿತ, ಪ್ರಭಾವ ಶಾಲಿ ಭಾಷಣ, ಕನ್ನಡ, ಆಂಗ್ಲ ಭಾಷೆಯ ಲೇಖಕರಾಗಿ, ಸಂಪಾದಕರಾಗಿ ಪುಸ್ತಕ ಹೊತ್ತು ತಂದವರು ದತ್ತಾತ್ರೇಯ ಹೊಸಬಾಳೆಯವರು.ಬಹುಮುಖ ಪ್ರತಿಭೆ, ವಿವಿಧ ಹವ್ಯಾಸಗಳು, ಸಮಾಜದ ವಿವಿಧ ಲೇಖಕರು, ಸಾಹಿತಿಗಳು, ಚಿಂತಕರು, ಮಾಧ್ಯಮ ಪ್ರಮುಖರೊಂದಿಗೆ ವಿಶೇಷ ಒಡನಾಟ, ಸಂವಾದ ಕಾರ್ಯಕ್ರಮಗಳು, ಸಾಮಾಜಿಕ ಸಮಸ್ಯೆಗಳು ಸೇರಿದಂತೆ ಸಮಾಜದ ಅನಿಷ್ಠ ಪದ್ಧತಿಯ ವಿರುದ್ಧವೂ ತನ್ನ ಬಿಗಿ ನಿಲುವು ಹೊಂದಿದವರು.

ಶಿಕ್ಷಣ ಸಾಮಾಜಿಕ ಬದುಕಿನಲ್ಲಿ ಮತ್ತು ಹಲವು ಬಗೆಯ ಜೀವನಾಸಕ್ತಿಗಳ ವ್ಯಕ್ತಿತ್ವ, ವಿಶ್ವದ ಅತಿ ದೊಡ್ಡ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅತ್ಯುನ್ನತ ಜವಾಬ್ದಾರಿಯ ತನಕ ಹೊಸಬಾಳೆಯವರನ್ನು ತಂದು ನಿಲ್ಲಿಸಿದೆಯೆಂದರೆ
ತಪ್ಪಾಗಲಾರದು. ಸಂಘವು ಇಂದು ಸುಮಾರು ನಲವತ್ತಕ್ಕೂ ಹೆಚ್ಚು ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವುಗಳ ಪೈಕಿ ಕಾಡಿನ ಮಧ್ಯೆ ಜೀವಿಸುವ ವನವಾಸಿಗಳ ಕಲ್ಯಾಣ, ಅಲೆಮಾರಿ ಜನಾಂಗದ ಏಳಿಗೆ, ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾಭಾರತಿ, ಕೃಷಿಕರ ಮಧ್ಯೆ ಕಿಸಾನ್ ಸಂಘ, ಧರ್ಮ ಜಾಗರಣಾ, ಕುಟುಂಬ ಪ್ರಭೋಧನ್, ಗ್ರಾಮಗಳ ಅಭಿವೃದ್ಧಿ, ಸ್ವದೇಶಿ ಚಿಂತನೆಯ ದೃಷ್ಟಿಯಲ್ಲಿ ಗ್ರಾಮ ವಿಕಾಸ, ದೇಶದಲ್ಲಿ ಭೀಕರವಾಗಿ ತಲೆದೋರಿದ ಕ್ಷಾಮ, ಪ್ರಕೃತಿ ವಿಕೋಪ, ಕರೋನಾದಂಥ ರೋಗ ಗಳು ಜಗತ್ತಿನಲ್ಲಿ ಘಟಿಸಿದಾಗಲೂ ಜೀವದ ಹಂಗು ತೊರೆದು ಸಹಾಯಕ್ಕೆ ಧುಮುಕಿದ ಸೇವಾ ಭಾರತಿಯಂಥ ಸಂಘದ ಹಲವಾರು ಕವಲುಗಳಾಗಿ ದೇಶದ ಉದ್ದಗಲಕ್ಕೂ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮನೆ, ಮಠ ಬಂಧು ಬಳಗ ತೊರೆದು ಪೂರ್ಣಾವಧಿ ಕಾರ್ಯಕರ್ತರಾಗಿ ಸೇವಾ ಚಟುವಟಿಕೆಯಲ್ಲಿ ತೊಡಗಿರುವುದನ್ನು ಕಾಣಬಹುದು.

ಕಾಶ್ಮೀರದ ಸಮಸ್ಯೆ, ದೇಶದ ಗಡಿ ಸಮಸ್ಯೆ ಸೇರಿದಂತೆ ಸಾವಿರಾರು ಕೊಳೆಗೇರಿಗಳಲ್ಲಿ, ಪೂರ್ವಾಂಚಲ, ಈಶಾನ್ಯ ರಾಜ್ಯಗಳಲ್ಲಿನ ಬುಡಕಟ್ಟು ಜನಾಂಗಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಖುದ್ದು ವಾಸ್ತವ್ಯ ಹೂಡಿ ಸಂಘದ ಸ್ವಯಂ ಸೇವಕರು ತನ್ನ ಸೇವಾ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.

ವ್ಯಕ್ತಿ ನಿರ್ಮಾಣ, ಸಂಸ್ಕಾರದ ಕೇಂದ್ರ ಸ್ಥಾನವಾದ ಸಂಘದ ಶಾಖೆಗಳು ದತ್ತಾತ್ರೇಯ ಹೊಸಬಾಳೆಯವರಂಥ ಸಾವಿರಾರು ನಾಯಕರನ್ನು ಸಮಾಜಕ್ಕೆ ನೀಡಿದೆ. ಶಿವಮೊಗ್ಗದ ಸೊರಬದಂಥ ಗ್ರಾಮೀಣ ಪ್ರದೇಶದಿಂದ ಸಾರ್ವಜನಿಕ ಜೀವನಕ್ಕೆ ಬಂದು ಇಂದು ಅತ್ಯುನ್ನತ ಜವಾಬ್ದಾರಿಗೆ ಹೊಸಬಾಳೆಯವರು ನಿಯುಕ್ತರಾಗಬೇಕಾದರೆ ಇದರ ಹಿಂದೆ ತಪಸ್ವಿ ಗುಣ, ಸೇವೆ, ಸಮರ್ಪಣೆ, ತ್ಯಾಗ ಎಲ್ಲವೂ ಅಡಕವಾಗಿರುವುದನ್ನು ಕಾಣಬಹುದು.

Leave a Reply

Your email address will not be published. Required fields are marked *