ಅಭಿಮತ
ಆದರ್ಶ್ ಶೆಟ್ಟಿ, ಉಪ್ಪಿನಂಗಡಿ
ದಕ್ಷ ಐಎಎಸ್ ಅಧಿಕಾರಿಗಳ ಮೇಲೆ ರಾಜಕಾರಣದ ಬ್ರಹ್ಮಾಸ್ತ್ರ ಪ್ರಯೋಗ ಎಂಬುದು ನಿತ್ಯನಿರಂತರವಾಗಿಯೇ ಇದೆ.
ರಾಜಕಾರಣದ ಕಿರುಕುಳ ಸೇರಿದಂತೆ ಇನ್ನಿತರ ವಿಚಾರಗಳಿಗೆ ಮನನೊಂದು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ, ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಗಳ ಪಟ್ಟಿ ರಾಜ್ಯದಲ್ಲಿ ಬಹುದೊಡ್ಡದೇ ಇದೆ. ಪ್ರಸ್ತುತ ಮಹಿಳಾ ಅಧಿಕಾರಿಗಳು ತುಸು ಹೆಚ್ಚೇ ಇದರ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.
ಹಾಸನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಎಂಬ ಅಧಿಕಾರಿಯನ್ನು ಕಳೆದ ಮೈತ್ರಿ ಸರಕಾರದ ಅವಧಿಯಲ್ಲಿ ತನ್ನ ಮಾತು ಕೇಳುತ್ತಿಲ್ಲವೆಂಬ ಕಾರಣಕ್ಕೆ ಆಗಿನ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಕೊಡಬಾರದ ತೊಂದರೆ ಕೊಟ್ಟು, ಸಾರ್ವಜನಿಕ ಸಭೆಗಳಲ್ಲಿ ನಿಂದಿಸಿ, ತರಾಟೆಗೆ ತೆಗೆದುಕೊಂಡು ಅವಮಾನಿಸಿದ್ದು ಸಾಲದೆಂಬಂತೆ ಕೊನೆಗೆ ವರ್ಗಾವಣೆಗೆ ಪ್ರಯ ತ್ನಿಸಿ, ಕೋರ್ಟ್ ಈ ಪ್ರಯತ್ನಕ್ಕೆ ತಡೆಯಾಜ್ಞೆ ತಂದು ಡಿಸಿಗೆ ಜಯ ಲಭಿಸಿ ರೇವಣ್ಣಗೆ ಹಿನ್ನಡೆಯಾಗಿತ್ತು. ಅಸಲಿಗೆ ಹಾಸನ ಜಿಲ್ಲಾಧಿಕಾರಿಯಾಗಿ
ಸಾಕಷ್ಟು ಜನಮೆಚ್ಚುಗೆಯ ಕಾರ್ಯ ಮಾಡಿದ್ದ ಸಿಂಧೂರಿ, ಸಕಲೇಶಪುರ ಹಾಸನ ಹೆದ್ದಾರಿ ಅಗಲೀಕರಣ ಸಂದರ್ಭ ಕಟ್ಟಡ ತೆರವಿನ ಖಡಕ್ ನಿರ್ಧಾರಗಳು, ಗ್ರಾಮ ಭೇಟಿ ಮೂಲಕ ಜನಸ್ನೇಹಿಯಾಗಿರುವುದು, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ೭ನೇ ಸ್ಥಾನದಲ್ಲಿದ್ದ ಜಿ ಪ್ರಥಮ ಸ್ಥಾನಕ್ಕೆ ಬಂದು ದಾಖಲೆ ಬರೆದಿತ್ತು.
ಇದರ ಶ್ರೇಯಸ್ಸು ಜಿಲ್ಲಾಧಿಕಾರಿಗೆ ಸಲ್ಲಬೇಕಿತ್ತು. ಇಲ್ಲೂ ಸಚಿವ ರೇವಣ್ಣ ತನ್ನ ಪತ್ನಿಯಿಂದಾಗಿ ಜಿಲ್ಲೆ ಫಲಿತಾಂಶದಲ್ಲಿ ಉನ್ನತ ಶ್ರೇಣಿಗೆ ಬಂದಿದೆಯೆಂಬ ಹೇಳಿಕೆ ನೀಡಿದ್ದರು. ಇದೀಗ ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕವೂ ಶಾಸಕ ಸಾ.ರಾ ಮಹೇಶ್, ಮಂಜುನಾಥ್ ಹಾಗೂ ರೋಹಿಣಿ ಸಿಂಧೂರಿ ನಡುವಣ ಶಾಸಕಾಂಗ, ಕಾರ್ಯಾಂಗ ಸಂಘರ್ಷ ಮುಂದು ವರಿದಿದೆ.
ಇಲ್ಲಿ ಶಾಸಕರಿಗಿರುವ ಜಿದ್ದೆಂದರೆ ತಮ್ಮ ಅಪ್ಪಣೆಯಿಲ್ಲದೆ ಡಿಸಿಯವರು ತಮ್ಮ ಕ್ಷೇತ್ರಕ್ಕೆ ಕಾಲಿಡಕೂಡದು. ಎಲ್ಲಾ ಕ್ರೆಡಿಟ್‌ಗಳು ತಮಗೆ ಲಭಿಸಬೇಕು. ಕರೋನಾ ಸಂದರ್ಭ ಸಾಕಷ್ಟು ಸೋಂಕಿತರನ್ನು ಹೊಂದಿದ್ದ ಮೈಸೂರು ರೋಹಿಣಿ ಸಿಂಧೂರಿ ಅಧಿಕಾರ ವಹಿಸಿಕೊಂಡ ಬಳಿಕ ಸಾಕಷ್ಟು ನಿಯಂತ್ರಣಕ್ಕೆ ಬಂದಿರುವುದು, ಜನರ ಬಳಿ,ಜನರ ಸಂಕಷ್ಟಗಳಿಗೆ ಸ್ಪಂದಿಸುವ ಸಿಂಧೂರಿ ನಡೆ ಯಿಂದ ತಮ್ಮ ವರ್ಚಸ್ಸಿಗೆ ಕುಂದಾಗುವುದು,ತಮ್ಮ ಬೇಳೆ ಬೇಯದಿರುವುದೇ ಅಸಲಿಗೆ ಈ ಶಾಸಕರ ಒಳ ಬೇಗುದಿಗೆ ಮೂಲ ಕಾರಣ.
ಮತ್ತೊಂದೆಡೆ ನಿರ್ಭಯಾ ಸೇಫ್ ಸಿಟಿ ಟೆಂಡರ್ ಹಗರಣದಲ್ಲಿ ರಾಜ್ಯದಲ್ಲಿ ಪೋಲಿಸ್ ಅಧಿಕಾರಿಯೊಬ್ಬರ ಪಾತ್ರದ ಬಗ್ಗೆ ಗಂಭೀರ ಆರೋಪ ಮಾಡಿರುವ ರಾಜ್ಯದ ಗೃಹ ಇಲಾಖೆ ಕಾರ್ಯದರ್ಶಿಯಾಗಿದ್ದ ರೂಪಾ ಮೌದ್ಗೀಲ್ ಎಂಬ ಖಡಕ್ ಪೋಲಿಸ್ ಅಧಿಕಾರಿ ಯ ಮಾತನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಗೃಹ ಇಲಾಖೆಯ ಹಲವಾರು ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿರುವ ರೂಪಾ ಮೌದ್ಗೀಲ್ ಎಂಬ ಅಧಿಕಾರಿಯನ್ನು ಸ್ವತಂತ್ರವಾಗಿ ಕರ್ತವ್ಯ ನಿರ್ವಹಿಸಲು ರಾಜಕಾರಣಿಗಳು ಬಿಡುತ್ತಿಲ್ಲ.
ಈ ಕಾರಣಕ್ಕೆ 35 ಕ್ಕೂ ಅಧಿಕ ಬಾರಿ ಈ ಅಧಿಕಾರಿ ವರ್ಗಾವಣೆಗೊಂಡಿದ್ದಾರೆಂದರೆ ಅಚ್ಚರಿಯಾಗಬಹುದು. ಬಂಧೀಖಾನೆ ಡಿಐಜಿ ಯಾಗಿ ನೇರ ಕಾರಾಗೃಹಗಳಿಗೆ ದಾಳಿ ನಡೆಸಿ ಸುದ್ದಿಯಾಗಿದ್ದ, ಬಳಿಕ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾಗೆ ರಾಜಾತಿಥ್ಯ ನೀಡಿರುವುದನ್ನು ಬಹಿರಂಗ ಪಡಿಸಿದ್ದಕ್ಕೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ರಸ್ತೆ ಸುರಕ್ಷತಾ ಹುದ್ದೆಗೆ ಎತ್ತಂಗಡಿ ಮಾಡಿತ್ತು.
ಇದೀಗ ಹೇಮಂತ್ ನಿಂಬಾಳ್ಕರ್ ಮೇಲಿನ ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹುದ್ದೆ ತೋರಿಸಿರುವುದು ಮೂರಕ್ಷರ ಕಲಿತು 5-10 ವರ್ಷ ಆಳ್ವಿಕೆ ನಡೆಸಿ ಮೂಲೆಗುಂಪಾಗುವ ರಾಜಕಾರಣಿಗಳು, 60 ವರ್ಷಗಳ ಕಾಲ ಆಡಳಿತ ನಡೆಸುವ ಐಎಎಸ್, ಐಪಿಎಸ್ ಪರೀಕ್ಷೆ ಬರೆದ ಪ್ರಾಮಾಣಿಕ ಅಧಿಕಾರಿಗಳಿಗೆ ನೀಡುವ ಗೌರವ ಕಂಡಾಗ ನಿಜಕ್ಕೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುವ ಅಪಚಾರವೇ ಸರಿ.