ಕಳೆದ ಎಂಟು ದಿನಗಳಿಂದ ಬೇಡಿಕೆ ಈಡೇರಿಕೆಗಾಗಿ ನಡೆಯುತ್ತಿರುವ ಕೆಎಸ್ಆರ್ಟಿಸಿ ನೌಕರರ ಪ್ರತಿಭಟನೆ ಯಾವುದೇ ರೀತಿ ಯಿಂದಲೂ ಬಗೆಹರಿಯುವ ಲಕ್ಷಣ ಕಾಣಿಸುತ್ತಿಲ್ಲ. ಇದಕ್ಕೆ ಪ್ರತಿಯಾಗಿ ಹಟಕ್ಕೆ ಬಿದ್ದಂತೆ ಸರಕಾರ ಆರ್ಥಿಕ ಸಂಕಷ್ಟದಲ್ಲಿದೆ. ಯಾವುದೇ ಕಾರಣಕ್ಕೂ ನಿಮ್ಮ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದು ಖಡಕ್ಕಾಗಿ ಅಸಹಾಯಕತೆಯನ್ನು ವ್ಯಕ್ತಪಡಿಸಿದೆ.
ನಿಜ ಹೇಳಬೇಕೆಂದರೆ ಕೆಎಸ್ಆರ್ಟಿಸಿ ರಾಜ್ಯದ ಅತ್ಯಂತ ಲಾಭದಾಯಕ ಸಂಸ್ಥೆ ಆಗಿರುವುದರ ಜತೆಗೆ ರಾಷ್ಟ್ರಮಟ್ಟದಲ್ಲೂ
ತನ್ನದೇ ಆದ ಛಾಪು ಮೂಡಿಸಿ, ಹಲವಾರು ಸೇವಾ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಕೆಎಸ್ಆರ್ಟಿಸಿ ನೌಕರರಿಗೆ ಆರನೇ ವೇತನ ನೀಡಲು ನಿಜವಾಗಿಯೂ ಸರಕಾರಕ್ಕೆ ಆದಾಯದ ಕೊರತೆ ಇದ್ದರೆ ಸಚಿವರು ಶಾಸಕರುಗಳು ನಿಗಮ-ಮಂಡಳಿಗಳ ಅಧ್ಯಕ್ಷರುಗಳಿಗೆ ಅನಗತ್ಯವಾಗಿ ನೀಡುತ್ತಿರುವ ಭತ್ಯೆೆಯನ್ನು ಕಡಿತಗೊಳಿಸಿ, ಮಠ-ಮಾನ್ಯಗಳಿಗೆ ನೀಡುವ ಕೋಟ್ಯಂತರ ರುಪಾಯಿ ಅನುದಾನ ಸ್ಥಗಿತಗೊಳಿಸಿ, ಕೇಂದ್ರ ಸರಕಾರದಿಂದ ಬರುವ ಬಾಕಿ ತೆರಿಗೆ ಹಣವನ್ನು ತರಿಸಿಕೊಂಡಾದರೂ ಸರಿ
ದೂಗಿಸಬಹುದಲ್ಲವೇ? ಹಬ್ಬ-ಹರಿ ದಿನಗಳೆನ್ನದೆ ತಮ್ಮ ಜೀವನವನ್ನೇ ಸವೆಸಿ, ವಾರಗಟ್ಟಲೆ ಕುಟುಂಬವನ್ನು ತೊರೆದು
ನಮಗಾಗಿ ಶ್ರಮಿಸುತ್ತಿರುವ ನೌಕರರಿಗೆ ರಾಜ್ಯ ಸರಕಾರ ಇನ್ನು ಮುಂದೆಯಾದರೂ ಸೌಹಾರ್ದ ಮಾತುಕತೆಯ ಮೂಲಕ ಬಗೆಹರಿಸಿ ಬೇಡಿಕೆ ಈಡೇರಿಸಬೇಕಾಗಿದೆ.
ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಸರಕಾರ ಮತ್ತು ಕೆಎಸ್ಆರ್ಟಿಸಿ ನೌಕರರ ಜಗಳದ ಮಧ್ಯೆ
ಜನಸಾಮಾನ್ಯರು ಪರದಾಡುವಂತಹ ಸ್ಥಿತಿ ಬಂದೊದಗಿದೆ.
– ಮುರುಗೇಶ.ಡಿ ದಾವಣಗೆರೆ