Monday, 12th May 2025

ಓದುಗರ ಓಣಿ: ಬಿಜೆಪಿ ಮತ್ತೊಮ್ಮೆ ಕಾರ್ಯಕರ್ತರ ಪಕ್ಷವಾಗಲಿ

ಈ ಮೊದಲು ಕಾಂಗ್ರೆಸ್, ಜೆಡಿಎಸ್‌ನಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಆಗುತ್ತಿದ್ದ ಅನ್ಯಾಯವೀಗ ಬಿಜೆಪಿಯಲ್ಲೂ ಪ್ರಾರಂಭ ವಾಗಿದೆ. ಈ ಮೊದಲು ಕಾರ್ಯಕರ್ತರ ಪಕ್ಷವೆಂದು ಕರೆಸಿಕೊಳ್ಳುವ ಪಕ್ಷವಾಗಿದ್ದ ಬಿಜೆಪಿ ಕುಟುಂಬ ರಾಜಕಾರಣಕ್ಕೆ ಅಡಿಯಾಗುತ್ತಿದೆ.

ಅನಂತ ಕುಮಾರ್ ನಿಧನದ ನಂತರ ಅವರ ಸ್ಪರ್ಧೆಮಾಡುತ್ತಿದ್ದ ಬೆಂಗಳೂರು ದಕ್ಷಿಣಕ್ಕೆ ಅವರ ಪತ್ನಿ ತೇಜಸ್ವಿ ಅನಂತರ ಕುಮಾರ್‌ಗೆ ಟಿಕೆಟ್ ನೀಡುವಂತೆ, ಅನುಕಂಪ ಆಧಾರದ ಮೇಲೆ ಹಾಗೂ ಅವರ ಮಾಡುವ ಸಾಮಾಜಿಕ ಕೆಲಸಗಳ ಮೇಲೆ ಗೆಲ್ಲುತ್ತಾರೆ ಎಂಬ ಮಾತುಗಳು ಕೇಳಿಬಂದವು. ಸ್ವತಃ ಯಡಿಯೂರಪ್ಪನವರೂ ತೇಜಸ್ವಿ ಅನಂತ ಕುಮಾರ್ ಪರ ವಕಾಲತ್ತು ಮಾಡಿದರು. ಇದ್ಯಾವುದಕ್ಕೂ ಸೊಪ್ಪಾಕದ ಬಿಜೆಪಿ ಹೈಕಮಾಂಡ್ ತೇಜಸ್ವಿ ಸೂರ್ಯ ಎಂಬ ಯುವನಾಯಕನಿಗೆ ಟಿಕೆಟ್ ನೀಡುವ ಮೂಲಕ ಅಚ್ಚರಿ ಉಂಟುಮಾಡಿತ್ತು ಮತ್ತು ಬಿಜೆಪಿ ಕುಟುಂಬ ರಾಜಕಾರಣ ಮಾಡೋಲ್ಲ ಎಂದು ಪ್ರಶಂಸೆಗೂ ಪಾತ್ರವಾಗಿತ್ತು. ಈಗ ಸುರೇಶ ಅಂಗಡಿ ನಿಧನವಾದ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದ್ದು ಬಿಜೆಪಿ ನಿಷ್ಠಾವಂತ ಕಾರ್ಯಕರ್ತರು ಆಕಾಂಕ್ಷಿಗಳಾಗಿದ್ದರು.

ಹಿಂದುತ್ವಕ್ಕಾಗಿ ಜೀವನವನ್ನೇ ಮುಡಿಪಿಟ್ಟ ಪ್ರಮೋದ ಮುತಾಲಿಕರು ಆಕಾಂಕ್ಷೆ ಪಟ್ಟಿಯಲ್ಲಿ ಪ್ರಮುಖರಾಗಿದ್ದವರು.
ಎಲ್ಲರನ್ನು ಕಡೆಗಣಿಸಿ ರಾಜಕೀಯ ಅಘೋಷಿತ ಹಳೆ ಪದ್ಧತಿಯಂತೆ ಸುರೇಶ ಅಂಗಡಿಯವರ ಪತ್ನಿಗೆ ಟಿಕೆಟ್ ನೀಡುವ ಮೂಲಕ ಮತ್ತೆ ಅಚ್ಚರಿ ಉಂಟುಮಾಡಿದ್ದಾರೆ. ಈ ಮೂಲಕ ಕಾರ್ಯಕರ್ತರಿಗೆ ಅಸಮಾಧಾನ ಉಂಟುಮಾಡಿದ್ದಾರೆ. ಒಂದು ರೀತಿಯಲ್ಲಿ ತೇಜಸ್ವಿ ಅನಂತ ಕುಮಾರ್ ಅವರಿಗೂ ಮೋಸ ಮಾಡಿದಂತಾಗುತ್ತದೆ. ಬಿಜೆಪಿ ಮತ್ತೆ ಕಾರ್ಯಕರ್ತರ ಪಕ್ಷವಾಗಲಿ, ಕುಟುಂಬ ರಾಜಕಾರಣದ ಕಳೆ ತೊಲಗಲಿ ಎಂಬುದು ಜನಸಾಮಾನ್ಯರ ಆಶಯ.

-ಶ್ರೀರಂಗ ಪುರಾಣಿಕ

***

ಹೆಲ್ಮೆಟ್‌ ಕಡ್ಡಾಯಕ್ಕೆ ವಿನಾಯಿತಿ ನೀಡಿ

ಈಗಾಗಲೇ ಬೇಸಿಗೆ ಪ್ರಾರಂಭವಾಗಿ ದಿನದಿಂದ ದಿನಕ್ಕೆ ರಾಜ್ಯದಾದ್ಯಂತ ರಣಬಿಸಿಲು ಏರುತ್ತಿದ್ದು ಬಿಸಿಲಿನ ತಾಪಕ್ಕೆ ಇಡೀ ಕರುನಾಡೆ ಕಾದ ಕಾವಲಿಯಂತಾಗಿದೆ. ಜನರು ಆಗಸದತ್ತ ಮುಖ ಮಾಡಿ ಯಾವಾಗಪ್ಪ ಮಳೆಗಾಲ ಶುರುವಾಗುತ್ತದೆ ಎಂದು ಹಪ ಹಪಿಸುತ್ತಿದ್ದಾರೆ.

ಇನ್ನೊಂದೆಡೆ ದ್ವಿಚಕ್ರ ವಾಹನ ಸವಾರರ ಸುರಕ್ಷತಾ ದೃಷ್ಟಿಯಿಂದ ಚಾಲಕ ಹಾಗೂ ಹಿಂಬದಿ ಸವಾರರಿಗೆ ಕಡ್ಡಾಯವಾಗಿ ಹೆಲ್ಮೆಟ್
ಧರಿಸಬೇಕು ಎಂಬ ನಿಯಮವನ್ನು ಸರಕಾರ ಕಡ್ಡಾಯ ಮಾಡಿದೆ. ತಪ್ಪಿದರೆ ದಂಡ ತೆರಬೇಕಾಗುತ್ತದೆ. ಕಳೆದೊಂದು ವರ್ಷದಿಂದ ಮಾಸ್ಕ್‌ ಧರಿಸುವುದನ್ನು ಸರಕಾರ ಕಡ್ಡಾಾಯ ಮಾಡಿರುವುದರಿಂದ ಬೇಸಿಗೆಯ ಸುಡುಬಿಸಿಲಿನಲ್ಲಿ ಮಾಸ್ಕ್‌ ಜತೆಗೆ ಹೆಲ್ಮೆಟ್ ಧರಿಸುವುದು ಬಹಳ ಕಷ್ಟಕರ. ಬಿಸಿಲಿನ ತಾಪಕ್ಕೆ ಚರ್ಮ ಸಂಬಂಧಿ ಕಾಯಿಲೆಗಳು, ಉಸಿರಾಟದ ತೊಂದರೆ ಮತ್ತಷ್ಟು ಉಲ್ಬಣ ವಾಗುವ ಜತೆಗೆ ಅತಿಹೆಚ್ಚಿನ ಉಷ್ಣತೆಯಿಂದ ತಲೆಯ ಕೂದಲುಗಳು ಉದುರಲು ಪ್ರಾರಂಭವಾಗುತ್ತವೆ.

ಬೇಸಿಗೆ ಪ್ರಾರಂಭವಾಯಿತೆಂದರೆ ಬಹುತೇಕ ಮಂದಿಗೆ ಕೂದಲು ಉದುರುವ ಸಮಸ್ಯೆ ಪ್ರಾರಂಭವಾಗುತ್ತದೆ. ತಲೆಗೂದಲೇ
ಮನುಷ್ಯನ ಅಂದವನ್ನು ಹೆಚ್ಚಿಸುವ ಒಂದು ಭಾಗ. ಅಂಥದ್ದರಲ್ಲಿ ತಲೆಗೂದಲೇ ಇಲ್ಲದಿದ್ದರೆ ಹೇಗೆ? ಇನ್ನೂ ಅವಿವಾಹಿತರಾದರೆ ಕ್ರಮೇಣ ಹೀಗೆಯೇ ತಲೆಗೂದಲು ಉದುರುತ್ತಿದ್ದರೆ ಸಂಪೂರ್ಣವಾಗಿ ಬೋಳು ತಲೆಯಾಗಿ ಭವಿಷ್ಯದಲ್ಲಿ ಹೆಣ್ಣು ಸಿಗುವುದೇ ಕಷ್ಟವಾಗುತ್ತದೆ. ಈಗಿನ ಕಾಲದಲ್ಲಿ ಆಸ್ತಿಪಾಸ್ತಿ ಎಲ್ಲಾ ಇದ್ದು ಹೆಣ್ಣು ಕೊಡುವುದೇ ಕಷ್ಟ. ಇನ್ನು ತಲೆಗೂದಲಿಲ್ಲವೆಂದರೆ ಎಲ್ಲೂ ಹೆಣ್ಣು ಸಿಗದೆ ಜೀವನ ಪರ್ಯಂತ ಬ್ರಹ್ಮಚಾರಿಯಾಗಬೇಕಾಗುತ್ತದೆ.

ರಾಜ್ಯದ ಮುಖ್ಯಮಂತ್ರಿ, ಸಚಿವರುಸೇರಿದಂತೆ ಜನಪ್ರತಿನಿಧಿಗಳು ಎ.ಸಿ. ಕಾರಿನಲ್ಲಿಯೇ ಸಂಚರಿಸುವುದರಿಂದ ಜನಸಾಮಾನ್ಯರ ಕಷ್ಟಗಳನ್ನು ಹೇಗೆ ತಾನೆ ತಿಳಿಯಲು ಸಾಧ್ಯ? ಜನಪ್ರತಿಧಿಗಳಾದವರು ಕನಿಷ್ಠ ಒಂದು ದಿನವಾದರೂ ಜನಸಾಮಾನ್ಯರೊಂದಿಗೆ
ಬೆರೆತು ಜೀವನ ನಡೆಸಿದರೆ ಕಷ್ಟ ಏನೆಂಬುದನ್ನು ಅರಿಯಲು ಸಾಧ್ಯ. ರಾಜ್ಯ ಸರಕಾರ ತುರ್ತಾಗಿ ಇತ್ತ ವಿಶೇಷವಾಗಿ ಗಮನ ಹರಿಸಿ ಕನಿಷ್ಠ ಮೂರ್ನಾಲ್ಕು ತಿಂಗಳುಗಳ ಕಾಲ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆೆಟ್ ನಿಂದ ವಿನಾಯಿತಿ ನೀಡಬೇಕಾಗಿದೆ.

-ಮುರುಗೇಶ ಡಿ.

Leave a Reply

Your email address will not be published. Required fields are marked *