ಸುತ್ತಲೂ ನೂರಾರು ವೀಕ್ಷಕರು. ಒಂದೆಡೆ ಮೂವರು ತೀರ್ಪುಗಾರ ಸೆಲೆಬ್ರಿಟಿಗಳು. ಎದುರಿಗೆ ವಿಶಾಲ ವೇದಿಕೆ. ಇಬ್ಬರು ಸ್ಪರ್ಧಿಗಳು ಒಂದು ಗಂಡು ಒಂದು ಹೆಣ್ಣು ಆಗಮಿಸಿ ವಂದಿಸಿ. ತಮ್ಮ ಪರಿಚಯ ಮಾಡಿಸಿ ನರ್ತನ ಆರಂಭಿಸುತ್ತಾರೆ.
ಹಿನ್ನಲೆಯ ಗೀತೆ ಶೋಕದ್ದಿರಲಿ, ಪ್ರೇಮದ್ದಿರಲಿ, ಟಪಾಂಗುಚ್ಚಿಯಾಗಿರಲಿ ಇಬ್ಬರೂ ಹಾರಿ, ಬಿದ್ದು, ಎದ್ದು, ಲಾಗ ಹಾಕಿ
ನರ್ತಿಸುತ್ತಾರೆ. ಗಂಡು ಹೆಣ್ಣನ್ನು ತೂರಿ ತೂರಿ ಹಿಡಿಯುತ್ತಾನೆ. ತೀರ್ಪುಗಾರರು ಒಮ್ಮೆ ‘ವ್ಹಾವ್!’ ಮಗದೊಮ್ಮೆ ‘ಭೀಭತ್ಸ!’ ಮತ್ತೊಮ್ಮೆ ‘ಕರುಣೆ’ ರಸಗಳನ್ನು ತೋರುತ್ತಾ ಎದ್ದು ನಿಂತು ಚಪ್ಪಾಳೆ ಹೊಡೆಯುತ್ತಾರೆ.
ಇನ್ನೂ ಮುಂದುವರೆದು ಸೀಟು ಬಿಟ್ಟು ಹೋಗಿ ಸ್ಪರ್ಧಿಯನ್ನು ಅಪ್ಪಿಕೊಂಡು ಪ್ರಶಂಸಿಸುತ್ತಾರೆ. ಇದು ಇಂದಿನ ಬಹುತೇಕ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಕಾಣುವ ದೃಶ್ಯ! ಇತ್ತೀಚೆಗೆ ಡ್ಯಾನ್ಸ್‌ನ ಪರಿಕಲ್ಪನೆ ಬದಲಾಗಿಬಿಟ್ಟಿದೆ. ಜಿಮ್ನಾಸ್ಟಿಕ್ಸ್, ಸರ್ಕಸ್ ಒಳ ಹೊಕ್ಕು ಅದೇ ಮೂಲವಾಗಿದೆ. ಸ್ಪರ್ಧಿಗಳು ಅದೆಷ್ಟು ಬಾರಿ ಬಿದ್ದು ಮೂಳೆ ಮುರಿದುಕೊಳ್ಳುವರೋ ಭಗವಂತನೇ ಬಲ್ಲ. ಅಂತಹವರು ನಲವತ್ತಕ್ಕೇ ವೃದ್ಧಾಪ್ಯವನ್ನಪ್ಪುವುದು ಖಂಡಿತ.
ಜೀವಕ್ಕೆ ಅಪಾಯಕಾರಿಯಾದ ಈ ಮಾದರಿ ನರ್ತನಕ್ಕೆ ನಮ್ಮ ವಾಹಿನಿಗಳು ಪ್ರೋತ್ಸಾಹಿಸದೇ ಅಪ್ಪಟ ನೃತ್ಯಕ್ಕೆ ಅವಕಾಶ ಕೊಟ್ಟು ನಮ್ಮ ಸಂಸ್ಕೃತಿಯನ್ನು ಉಳಿಸಬಾರದೇಕೆ?
– ಕೆ. ಶ್ರೀನಿವಾಸರಾವ್ ಹರಪನಹಳ್ಳಿ