‘ಪ್ರತಿಭಟನೆ- ಮುಷ್ಕರ-ಬಂದ್’ ಸಂಸ್ಥೆ, ಮಂಡಳಿ ಮುಂತಾದವುಗಳಿಗೆ ತಮ್ಮ ತೊಂದರೆಯನ್ನು ಸರಕಾರದ ಗಮನಕ್ಕೆ ತಂದು
ಮಾತುಕತೆಯ ಮೂಲಕ ಈಡೇರಿಸಿಕೊಳ್ಳುವ ಅಸ್ತ್ರವಾಗಬೇಕು.
ಹಠವಾಗಬಾರದು. ಜನರ ಗಮನ ಸೆಳೆದು ಸರಕಾರದ ಜಡತ್ವವನ್ನು ಅನಾವರಣಗೊಳಿಸಬೇಕು. ‘ನಾನೋ ನೀನೋ’ ಎಂದು ಸೆಡ್ಡು ಹೊಡೆದು ಸರಕಾರಕ್ಕೆ ಸವಾಲ್ ಹಾಕುವಂತಾಗಬಾರದು. ಸರಕಾರ ಹೆದರುವುದು ವೋಟ್ ಬ್ಯಾಂಕ್ ಅಸ್ತ್ರಕ್ಕೆ ಮಾತ್ರ.
ರೈತ ಚಳವಳಿ ಪ್ರತಿಭಟನೆ ದೆಹಲಿಯಲ್ಲಿ ಪಂಜಾಬ್ ರೈತರಿಂದ ಇನ್ನೂರು ದಿನಗಳಿಂದ ನಡೆದಿದೆ.
ಇದು ಸಾರಿಗೆ ಮುಷ್ಕರದಂತೆ ಸಾರ್ವಜನಿಕ ದಿನದ ಬದುಕಿನ ಮೇಲೆ ದುಷ್ಪರಿಣಾಮವನ್ನು ಬೀರಿಲ್ಲ. ಶಿಕ್ಷಕರು ಅಂಗನವಾಡಿ
ಕಾರ್ಯಕರ್ತರು ಪೋಷಕರ ಪ್ರತಿಭಟನೆಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿ ಸಾರ್ವಜನಿಕರ ಗಮನ ಸೆಳೆಯುವುದಕ್ಕೆ
ಸೀಮಿತವಾದವು. ಇತ್ತೀಚಿನ ಚಲನಚಿತ್ರ ನಟ ನಿರ್ಮಾಪಕರೂ ಸರಕಾರದೊಡನೆ ಮಾತು ನಡೆಸಿ ಕರೋನಾ ಸಂದರ್ಭ
ದಿಂದಾಗಿ ಪಟ್ಟು ಸಡಿಲಿಸಿ ನಾಲ್ಕು ದಿನದ ಶೇ 100ರ ಪ್ರದರ್ಶನಕ್ಕೆ ಒಪ್ಪಿ ಪ್ರತಿಭಟನೆ ಹಿಂಪಡೆದಿದ್ದು ಸ್ವಾಗತಾರ್ಹವಾಗಿತ್ತು.
ವಿದ್ಯುತ್ ಕಂಪನಿಗಳು ಮುಷ್ಕರ ಮಾಡಿದರೂ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ಜಾಗ್ರತೆ ವಹಿಸಿ ಜನರ ಸಹಕಾರ ಗಳಿಸುತ್ತಾರೆ. ಮುಷ್ಕರ ಎಂದರೆ ಇದು. ಕರ್ನಾಟಕದ ಸಾರಿಗೆ ನೌಕರರ ಮುಷ್ಕರ ಪ್ರತಿಭಟನೆ ನ್ಯಾಯಬದ್ದವಾಗಿರಬಹುದು ಆದರೆ ಅದು ಸಾರ್ವಜನಿಕರ ಬದುಕನ್ನು ಹೈರಾಣ ಮಾಡಿದೆ. ಹಬ್ಬದ ದಿನಗಳಲ್ಲಿ ಊರಿಗೆ ಮರಳಿ ತಮ್ಮ ಬಂಧುಬಾಂಧವರೊಡನೆ ನಲಿಯ ಬೇಕು ಸಿಹಿ ಹಂಚಿಕೊಳ್ಳಬೇಕು ಎನ್ನುವ ಸಂಭ್ರಮಕ್ಕೆ ಕಂಟಕವಾಗಿದೆ. ಬಸ್ ನಿಲ್ದಾಣಗಳಲ್ಲಿ ಕೈಗೂಸಿನ ಮಹಿಳೆಯರೂ ಬಸಿರು ಬಾಣಂತಿಯರು ವೃದ್ಧರ ಸ್ಥಿತಿ ಕರುಣಾಜನಕವಾಗಿದೆ. ಕರೋನಾ ನಿಯಮ ಪಾಲನೆ ಇಲ್ಲದ ಖಾಸಗಿ ಬಸ್ಸಿನ
ಜನಸಂದಣಿಯ ಪ್ರಯಾಣ ಸೋಂಕು ಹರಡುವಕ್ಕೆ ಹೇಳಿ ಮಾಡಿಸಿದ ವಾತಾವರಣ ಸೃಷ್ಟಿಸಿದೆ.
ಖಾಸಗಿ ವಾಹನ ಸಂಘ ಆಟೋ ಟ್ಯಾಕ್ಸಿ ಸಂಘಗಳೊಡನೆ ಚರ್ಚಿಸಿ ಅವರೂ ಸಹಕಾರ ನೀಡಿದ್ದರೆ ಸಂಚಾರ ಅವ್ಯವಸ್ಥೆಯಿಂದಗಿ ಸರಕಾರ ಮೃದು ಧೋರಣೆ ತಳೆಯುತ್ತಿತ್ತೇನೋ. ಮಣಿಯಲೇ ಬೇಕೆಂದರೆ ಎಲ್ಲರ ಸಹಕಾರ ಗಳಿಸಲು ಅದಕ್ಕೆ ಜನಪ್ರಿಯ
ನಾಯಕನ ನೇತೃತ್ವ ಬೇಕು. ರಾಜಕುಮಾರ ನಂತಹ ಮೇರು ನಟನ ಜನಪ್ರಿಯತೆಯಿಂದಾಗ ಗೋಕಾಕ್ ಚಳವಳಿ ಯಶಸ್ವಿ ಯಾಗಿತ್ತು.
ಆರನೇ ವೇತನ ಆಯೋಗದ ಅನುಷ್ಠಾನಕ್ಕೆ ಸರಕಾರ ಸಾರ ಸಗಟು ನಿರಾಕರಿಸಿ ಖಾಸಗಿ ವಾಹನ ಸಂಚಾರದ ಪರ್ಯಾಯ ವ್ಯವಸ್ಥೆ ಆಗಿರುವುದರಿಂದ ಇನ್ನು ಕೆಲವು ದಿನಗಳಲ್ಲಿ ಖಾಸಗಿ ಸಾರಿಗೆ ಜನಪ್ರಿಯವಾಗಿ ಖಾಸಗೀ ಕರಣಕ್ಕೆ ಜನ ಒಲುವು ತೋರಿಸಿದರೆ ಈ ಸಾರಿಗೆ ನೌಕರರ ಭವಿಷ್ಯವೇನು? ಪೋಷಕರಂತೆ ರೈತರಂತೆ ಇವರು ಸ್ವತಂತ್ರರಲ್ಲ. ವೇತನ ಪಡೆಯುವ ನೌಕರರು. ಇದೆಲ್ಲದರ
ಮುಂದಾಲೋಚನೆ, ಸಮಗ್ರ ವಿಶ್ಲೇಷಣೆ ಅಗತ್ಯ. ಈಗಲೂ ಕಾಲಮಿಂಚಿಲ್ಲ.
ಬೇಡಿಕೆ ಈಡೇರಿಕೆಗೆ ಹಟಹಿಡಿಯದೆ ಸಾರ್ವಜನಿಕರ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ನೌಕರರು ಮುಷ್ಕರ ಹಿಂಪಡದು ಕರ್ತವ್ಯಕ್ಕೆ ಹಾಜರಾಗಲಿ. ಇದು ಸೋಲಲ್ಲ. ಜನಪರ ಹೃದಯ ವಂತಿಕೆ ಮೆರೆದಂತಾಗುತ್ತದೆ.
– ಸತ್ಯಬೋಧ, ಬೆಂಗಳೂರು