ಬೀಜಿಂಗ್: ಚೀನಾ(China) ತನ್ನ ಭವಿಷ್ಯದ ಭದ್ರತೆಗಾಗಿ ಪ್ರಮುಖ ಸಂಪನ್ಮೂಲಗಳ ಸಾಕಷ್ಟು ಸಂಶೋಧನೆಯಲ್ಲಿ ತೊಡಗಿದೆ. ಇದೀಗ ಮಹತ್ವದ ಬೆಳವಣಿಗೆಯೊಂದರಲ್ಲಿ ಬಹುದೊಡ್ಡ ಚಿನ್ನದ ಅದಿರು ನಿಧಿಯನ್ನು ಚೀನಾ ಪತ್ತೆ ಹಚ್ಚಿದೆ. ಈ ಆವಿಷ್ಕಾರವು ಚೀನಾದ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ (World’s Largest Gold)
ಚೀನಾದಲ್ಲಿ ಜಗತ್ತಿನ ಅತೀ ದೊಡ್ದದಾದ ಚಿನ್ನದ ನಿಕ್ಷೇಪವನ್ನು ಪತ್ತೆ ಹಚ್ಚಲಾಗಿದೆ. ಇಲ್ಲಿ ಅಪಾರ ಪ್ರಮಾಣದ ಚಿನ್ನದ ಅದಿರು ಇದೆ ಎನ್ನಲಾಗಿದೆ. ಒಂದು ಅಂದಾಜಿನ ಪ್ರಕಾರ ಗಣಿಯಲ್ಲಿ 1,000 ಟನ್‌ಗಿಂತಲೂ ಹೆಚ್ಚು ಚಿನ್ನ ಅಡಗಿದೆ ಎನ್ನಲಾಗಿದೆ. ಸೌತ್ ಚೈನಾ ಮಾರ್ನಿಂಗ್ (South China Morning) ಪೋಸ್ಟ್ ಪ್ರಕಾರ, ಈ ಚಿನ್ನದ ಒಟ್ಟು ಮೌಲ್ಯ ಸುಮಾರು 600 ಬಿಲಿಯನ್ ಯುವಾನ್ ಎಂದು ಅಂದಾಜಿಸಲಾಗಿದ.
ಮಣ್ಣಿನ ಕಣ ಕಣದಲ್ಲೂ ಚಿನ್ನ; 7 ಲಕ್ಷ ಕೋಟಿ ರೂ. ಮೌಲ್ಯ
ಚೀನಾದ ಹುನಾನ್ ಪ್ರಾಂತ್ಯದಲ್ಲಿರುವ ಪಿಂಗ್‌ಜಿಯಾಂಗ್ (Pingjiang) ಕೌಂಟಿಯಲ್ಲಿರುವ ವಾಂಗು ಗಣಿಯಲ್ಲಿ ಈ ಬೃಹತ್ ಚಿನ್ನದ ನಿಕ್ಷೇಪವನ್ನು ಕಂಡುಹಿಡಿಯಲಾಗಿದೆ. ಭೂಗರ್ಭಶಾಸ್ತ್ರಜ್ಞರು ಅಂದಾಜಿಸಿರುವ ಪ್ರಕಾರ ಇಲ್ಲಿ 1 ಸಾವಿರ ಮೆಟ್ರಿಕ್ ಟನ್ ಚಿನ್ನ ಅತ್ಯುತ್ತಮ ಗುಣಮಟ್ಟದ ಬಂಗಾರವಿದೆಯಂತೆ. ಈ ಶೋಧನೆಯ ಪ್ರಕಾರ ಇಲ್ಲಿ ಸುಮಾರು US $83 ಶತಕೋಟಿ ಮೌಲ್ಯದ ಅಂದರೆ ಬರೋಬ್ಬರಿ 7 ಲಕ್ಷ ಕೋಟಿ ರೂ. ಮೌಲ್ಯದ ಚಿನ್ನದ ಅದಿರು ಇದೆ ಎನ್ನಲಾಗಿದೆ. ಇದು ಇದುವರೆಗೆ ಜಗತ್ತಿನಲ್ಲಿ ಪತ್ತೆ ಹಚ್ಚಿರುವುದರಲ್ಲೇ ಅತಿದೊಡ್ಡ ಚಿನ್ನದ ನಿಕ್ಷೇಪ ಎನಿಸಿಕೊಂಡಿದೆ.
🚨#BREAKING : China found the world’s largest gold reserve, worth ₹6 Lakh Croe ($83 Billion) , in Hunan province. #China #Gold #GoldRush pic.twitter.com/qgt3mw7K6B
— Amitabh Chaudhary (@MithilaWaala) November 29, 2024
1,000 ಮೆಟ್ರಿಕ್ ಟನ್‌ಗಿಂತಲೂ ಹೆಚ್ಚಿನ ಚಿನ್ನ ಇಲ್ಲಿ ಅಡಗಿರುವುದರಿಂದ 900 ಮೆಟ್ರಿಕ್ ಟನ್ ಚಿನ್ನದ ಅದಿರು ಹೊಂದಿರುವ ಆಫ್ರಿಕಾದ ಸೌತ್ ಡೀಪ್ ಗಣಿಯನ್ನು ಚೀನಾ ಹಿಂದಿಕ್ಕಿ ವಿಶ್ವದ ನಂ.1 ಸ್ಥಾನಕ್ಕೆ ಏರಿದೆ. ಹುನಾನ್ ಪ್ರಾಂತ್ಯದ ಭೂವೈಜ್ಞಾನಿಕ ಬ್ಯೂರೋ ಈ ನಿಕ್ಷೇಪವು ಪಿಂಗ್ಜಿಯಾಂಗ್ ಕೌಂಟಿಯಲ್ಲಿದೆ ಎಂದು ಹೇಳಿದ್ದು, ಅಲ್ಲಿ ಭೂ ವಿಜ್ಞಾನಿಗಳು ಭೂಮಿಯ ಮೇಲ್ಮೈ ಯಿಂದ 2 ಕಿಲೋಮೀಟರ್ ಆಳದಲ್ಲಿ 40 ಚಿನ್ನದ ಶಿಲೆಗಳನ್ನು ಗುರುತಿಸಿದ್ದಾರೆ. ಇಲ್ಲಿ ಪ್ರಾಥಮಿಕವಾಗಿ 300 ಟನ್ ಅದಿರು ಇದೆ. ಆದರೆ 3 ಕಿ.ಮೀ.ವರೆಗೆ ಆಳಕ್ಕೆ ಸಾಗಿದರೆ 1,000 ಟನ್ ಚಿನ್ನದ ಅದಿರು ದೊರೆಯಬಹುದು. ಅಲ್ಲದೇ ಇಲ್ಲಿ 138 ಗ್ರಾಂ ಅತ್ಯುತ್ತಮ ಗುಣಮಟ್ಟದ ಚಿನ್ನ ದೊರೆಯಬಹುದು ಎಂದು ಭೂಗರ್ಭ ಶಾಸ್ತ್ರಜ್ಞರು ತಿಳಿಸಿದ್ದಾರೆ. ವಿಶ್ವದಲ್ಲಿ ಸದ್ಯಕ್ಕೆ ಪ್ರತಿ ಟನ್ ಅದಿರಿಗೆ 8 ಗ್ರಾಂ ಅತ್ಯುತ್ತಮ ಗುಣಮಟ್ಟದ ಬಂಗಾರ ದೊರೆತರೆ ಅದನ್ನು ಹೈಗ್ರೇಡ್ ಎಂದು ವಿಂಗಡಿಸಲಾಗುತ್ತದೆ.
ಏನಿದು ಬಂಗಾರದ ನಿಕ್ಷೇಪ?
ಚಿನ್ನದ ನಿಕ್ಷೇಪಗಳು ವಿವಿಧ ಭೌಗೋಳಿಕ ಪ್ರಕ್ರಿಯೆಗಳ ಮೂಲಕ ರೂಪುಗೊಳ್ಳುತ್ತವೆ. ಭೂಮಿಯ ಆಳದಲ್ಲಿ ಬಿಸಿಯಾದ ಮತ್ತು ಖನಿಜಗಳಿಂದ ಕೂಡಿದ ದ್ರವಗಳು ಬಂಡೆಗಳಲ್ಲಿನ ಬಿರುಕುಗಳ ಮೂಲಕ ಚಲಿಸುತ್ತವೆ. ಈ ದ್ರವಗಳು ತಮ್ಮೊಂದಿಗೆ ಚಿನ್ನವನ್ನು ಕರಗಿಸಿಕೊಂಡು ಬಂದು, ಭೂಮಿಯ ಮೇಲೆ ಬಂದಾಗ ತಣ್ಣಗಾದಾಗ ಚಿನ್ನವನ್ನು ಬಿಟ್ಟುಬಿಡುತ್ತವೆ. ಈ ರೀತಿಯಾಗಿ ಬಹಳ ಕಾಲದಲ್ಲಿ ಚಿನ್ನದ ನಿಕ್ಷೇಪಗಳು ರೂಪುಗೊಳ್ಳುತ್ತವೆ. ಇದಕ್ಕೆ ಲಕ್ಷಾಂತರ ವರ್ಷಗಳು ಬೇಕಾಗುತ್ತದೆ. ತಾಪಮಾನದ ಕುಸಿತಗಳು ಅಥವಾ ಒತ್ತಡದ ಬದಲಾವಣೆಗಳಂತಹ ಪರಿಸ್ಥಿತಿಗಳಿಂದ ಈ ರೀತಿಯ ಪ್ರಕ್ರಿಯೆ ನಡೆಯುತ್ತದೆ.
ಚೀನಾ ಈಗಾಗಲೇ ವಿಶ್ವದಲ್ಲೇ ಅತಿ ಹೆಚ್ಚು ಚಿನ್ನವನ್ನು ಉತ್ಪಾದಿಸುವ ದೇಶಗಳಲ್ಲಿ ಒಂದು. ಹೂನಾನ್ ಪ್ರಾಂತ್ಯದಲ್ಲಿ ಸಿಕ್ಕಿರುವ ಹೊಸ ಚಿನ್ನದ ಗಣಿಯಿಂದಾಗಿ ಚೀನಾ ಇನ್ನಷ್ಟು ಚಿನ್ನವನ್ನು ಉತ್ಪಾದಿಸಬಹುದು. ಚೀನಾ ಜಗತ್ತಿನಲ್ಲಿ ಕಂಡುಬರುವ ಚಿನ್ನದಲ್ಲಿ ಸುಮಾರು 10% ಭಾಗವನ್ನು ಉತ್ಪಾದಿಸುತ್ತದೆ. 2024ರಲ್ಲಿ ಚೀನಾ ಬಳಿ 2,000 ಟನ್‌ಗಿಂತಲೂ ಹೆಚ್ಚು ಚಿನ್ನ ಇದೆ ಎಂದು ಅಂದಾಜಿಸಲಾಗಿದೆ.
ಜಗತ್ತಿನ ಈವರೆಗಿನ ಅತಿದೊಡ್ಡ ಚಿನ್ನದ ನಿಕ್ಷೇಪಗಳು
ಚೀನಾದಲ್ಲಿನ ಚಿನ್ನದ ನಿಕ್ಷೇಪಕ್ಕೂ ಮೊದಲು ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಚಿನ್ನದ ನಿಕ್ಷೇಪಗಳನ್ನು ಪತ್ತೆ ಹಚ್ಚಲಾಗಿದೆ. ಜಗತ್ತಿನ ದೊಡ್ಡ ಬಂಗಾರದ ನಿಕ್ಷೇಪಗಳ ಪಟ್ಟಿ ಇಲ್ಲಿದೆ.
- ಸೌತ್ ಡೀಪ್ ಗೋಲ್ಡ್ ಮೈನ್ – ಸೌತ್ ಆಫ್ರಿಕಾ
- ಗ್ರಾಸ್ಬರ್ಗ್ ಗೋಲ್ಡ್ ಮೈನ್ – ಇಂಡೋನೇಷ್ಯಾ
- ಲಿಹಿರ್ ಗೋಲ್ಡ್ ಮೈನ್ – ಪಪುವಾ ನ್ಯೂ ಗಿನಿಯಾ
- ನಾರ್ಟೆ ಅಬಿಯರ್ಟೊ ಗೋಲ್ಡ್ ಮೈನ್ – ಚಿಲಿ
- ಕಾರ್ಲಿನ್ ಟ್ರೆಂಡ್ ಗೋಲ್ಡ್ ಮೈನ್ – ಅಮೆರಿಕ
- ಒಲಿಂಪಿಯಾಡಾ ಗೋಲ್ಡ್ ಮೈನ್ – ರಷ್ಯಾ
- ಬೋಡಿಂಗ್ಟನ್ ಗೋಲ್ಡ್ ಮೈನ್ – ಪಶ್ಚಿಮ ಆಸ್ಟ್ರೇಲಿಯಾ
- ಎಂಪೊನೆಂಗ್ ಗೋಲ್ಡ್ ಮೈನ್ – ದಕ್ಷಿಣ ಆಫ್ರಿಕಾ
- ಪ್ಯೂಬ್ಲೊ ವಿಜೊ ಗೋಲ್ಡ್ ಮೈನ್ – ಡೊಮಿನಿಕನ್ ರಿಪಬ್ಲಿಕ್
- ಕಾರ್ಟೆಜ್ ಗೋಲ್ಡ್ ಮೈನ್ – ಅಮೆರಿಕ
ಈ ಚಿನ್ನದ ಗಣಿಗಳು ಪ್ರಪಂಚದಾದ್ಯಂತ ಇಲ್ಲಿಯವರೆಗೆ ಗುರುತಿಸಲಾದ ಅತ್ಯಂತ ಮಹತ್ವದ ಪ್ರಾಕೃತಿಕ ಚಿನ್ನದ ನಿಕ್ಷೇಪಗಳಾಗಿವೆ.
ಜನರು ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಭಾವಿಸುತ್ತಾರೆ. ಭವಿಷ್ಯಕ್ಕಾಗಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಆರ್ಥಿಕವಾಗಿ ಸಮಸ್ಯೆಗಳು ಎದುರಾದಾಗ ಚಿನ್ನವು ಉಪಯೋಗಕ್ಕೆ ಬರಲಿದ್ದು, ಕಷ್ಟದಲ್ಲಿ ನೆರವಾಗುತ್ತದೆ ಎಂದು ಜನರು ನಂಬಿದ್ದಾರೆ. ಹೀಗಾಗಿ ಚೀನಾದ ಈ ಹೊಸ ಆವಿಷ್ಕಾರದಿಂದಾಗಿ ಚಿನ್ನದ ಬೇಡಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಈ ಸುದ್ದಿಯನ್ನೂ ಓದಿ: Gold Watch: 700 ಟೈಟಾನಿಕ್ ಪ್ರಯಾಣಿಕರನ್ನು ರಕ್ಷಿಸಿದ ಕ್ಯಾಪ್ಟನ್‍ಗೆ ನೀಡಿದ್ದ ಚಿನ್ನದ ವಾಚ್ ದಾಖಲೆ ಮೊತ್ತಕ್ಕೆ ಹರಾಜು!