Saturday, 10th May 2025

Viral Video: ಏಳು ಖಂಡಕ್ಕೆ ಪ್ರವಾಸ; 102ನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ ಮಹಿಳೆ!

Viral Video

ಸ್ಯಾನ್ ಫ್ರಾನ್ಸಿಸ್ಕೊ: ಪ್ರತಿಯೊಬ್ಬರ ಜೀವನದಲ್ಲೂ ಹಲವಾರು ಕನಸುಗಳಿರುತ್ತವೆ. ಇದರಲ್ಲಿ ದೇಶ, ವಿದೇಶಗಳಿಗೆ ಪ್ರವಾಸ ಮಾಡುವ ಕನಸು ಸಾಕಷ್ಟು ಮಂದಿಯದ್ದಾಗಿರುತ್ತದೆ. ಆದರೆ ಎಲ್ಲರಿಗೂ ಇದನ್ನು ನನಸು ಮಾಡುವ ಯೋಗ ಇರುವುದಿಲ್ಲ. ಅವಕಾಶವಿದ್ದಾಗ ದುಡಿಮೆ, ಸಂಸಾರ ಎಂದು ಕಾಲ ಕಳೆಯುವ ನಾವು ವಯಸ್ಸಾದ ಮೇಲೆ ಇನ್ನು ನಮ್ಮಿಂದ ಆಗದು ಎಂದುಕೊಳ್ಳುವವರೇ ಅಧಿಕ. ಆದರೆ ತಮ್ಮ 102ನೇ ವಯಸ್ಸಿನಲ್ಲಿ ಮಹಿಳೆಯೊಬ್ಬರು ವಿಶ್ವದ ಏಳು ಖಂಡಗಳನ್ನು ಸುತ್ತಬೇಕು ಎನ್ನುವ ತಮ್ಮ ಬಯಕೆಯನ್ನು ಈಡೇರಿಸಿಕೊಂಡಿದ್ದಾರೆ. ಇದರ ವಿಡಿಯೋ (Viral Video) ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.

ಸ್ಯಾನ್ ಫ್ರಾನ್ಸಿಸ್ಕೊ ​(San Francisco) ಗ್ರಾಮವೊಂದರಲ್ಲಿ ವಾಸಿಸುವ 102 ವರ್ಷದ ಡೊರೊಥಿ ಸ್ಮಿತ್ (Dorothy Smith) ಎಂಬವರು ವಿಶ್ವದ ಏಳು ಖಂಡಗಳನ್ನು ಸುತ್ತಿ ಇದೀಗ ತಮ್ಮ ಕೊನೆಯ ಗಮ್ಯಸ್ಥಾನವನ್ನು ತಲುಪಲು ಆಸ್ಟ್ರೇಲಿಯಾದ ಸಿಡ್ನಿ ತಲುಪಿದ್ದಾರೆ. ಇಬ್ಬರು ಯುವಕರು ಅವರ ಪ್ರಯಾಣ ಪ್ರೀತಿಯನ್ನು ಪುನರುಜ್ಜೀವನಗೊಳಿಸಲು ಸಹಕರಿಸಿದ್ದಾರೆ.

ಕನಸನ್ನು ನನಸು ಮಾಡಬೇಕು ಎನ್ನುವ ಗುರಿಯೊಂದಿಗೆ ದೃಢವಾದ ವಿಶ್ವಾಸವಿದ್ದರೆ ಯಾವಾಗ ಬೇಕಾದರೂ ಅದನ್ನು ನನಸು ಮಾಡಿಕೊಳ್ಳಬಹುದು ಎಂಬುದಕ್ಕೆ ಸಾಕ್ಷಿ ಈ ಮಹಿಳೆ. ಪ್ರಯಾಣದ ಉತ್ಸಾಹಿಗಳು ತಮ್ಮ ಬ್ಯಾಗ್‌ಗಳನ್ನು ಯಾವಾಗ ಬೇಕಾದರೂ ಪ್ಯಾಕ್ ಮಾಡಬಹುದು ಮತ್ತು ಹೊಸ ಪ್ರವಾಸಕ್ಕೆ ಹೋಗಬಹುದು. ಪ್ರಪಂಚದಾದ್ಯಂತ ವಿವಿಧ ಭೂದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಇದಕ್ಕೆ ಬೇಕಾಗಿರುವುದು ವಿಶ್ವಾಸ ಮತ್ತು ಗುರಿ. ಇಲ್ಲಿ ವಯಸ್ಸು ಅಪ್ರಸ್ತುತ.

ಡೊರೊಥಿ ಸ್ಮಿತ್ ಇತ್ತೀಚೆಗೆ ತಾವು ಪ್ರವಾಸ ಮಾಡಬೇಕಾದ ತಾಣಗಳ ಪಟ್ಟಿಯಲ್ಲಿದ್ದ ಕೊನೆಯ ಗಮ್ಯಸ್ಥಾನಕ್ಕೆ ತಲುಪಲು ಆಸ್ಟ್ರೇಲಿಯಾದ ಸಿಡ್ನಿಗೆ ಪ್ರಯಾಣಿಸಿದರು. ಈ ಮೂಲಕ ಅವರು ವಿಶ್ವದ ಎಲ್ಲ ಖಂಡಗಳನ್ನೂ ಸುತ್ತಿ ಬಂದ ಹಿರಿಯ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಡೊರೊಥಿ ಅವರು ತಮ್ಮ ನಿವಾಸದಲ್ಲಿ ಸಾಮಾನ್ಯರಂತೆ ಬದುಕುತ್ತಿದ್ದರು. ಆಗಲೇ ಅವರಲ್ಲಿ ಈ ಕನಸೊಂದು ಚಿಗುರೊಡೆದಿತ್ತು. ಇಬ್ಬರು ಯುವಕರು ಅವರ ಕನಸಿಗೆ ರೆಕ್ಕೆ ಕಟ್ಟಿದ್ದಾರೆ. ಆ ಯುವಕರು ಬೇರೆ ಯಾರೂ ಅಲ್ಲ “ಯೆಸ್ ಥಿಯರಿ” ಚಾನೆಲ್‌ನ ಯೂಟ್ಯೂಬರ್‌ಗಳಾದ ಅಮ್ಮರ್ ಕಂಡಿಲ್ ಮತ್ತು ಸ್ಟಾಫನ್ ಟೇಲರ್. ಇವರಿಬ್ಬರು ಆಸ್ಟ್ರೇಲಿಯ ಪ್ರವಾಸದಲ್ಲಿ ತಮ್ಮೊಂದಿಗೆ ಡೊರೊಥಿ ಅವರನ್ನು ಸೇರಿಸಿಕೊಳ್ಳಲು ನಿರ್ಧರಿಸಿ ಅವರನ್ನು ಭೇಟಿಯಾದರು. ಮೊದಲು ಇದನ್ನು ಹಗರಣ ಎಂದು ಡೊರೊಥಿ ಭಾವಿಸಿದ್ದರು. ಆದರೆ ಬಳಿಕ ಅವರನ್ನು ಆಕೆ ನಂಬಿದರು.

ಆಸ್ಟ್ರೇಲಿಯಾ ಪ್ರವಾಸ ಹೇಗೆ ನಿಜವಾಯಿತು?

ಆಸ್ಟ್ರೇಲಿಯಾ ಪ್ರವಾಸದಲ್ಲಿ ತಮ್ಮನ್ನು ಕರೆದುಕೊಂಡು ಹೋಗುವಂತೆ ಡೊರೊಥಿ ಯೂಟ್ಯೂಬರ್ ಗಳಲ್ಲಿ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಯೂಟ್ಯೂಬರ್‌ಗಳು ಡೊರೊಥಿ ಅವರ ಭರವಸೆಗೆ ತಕ್ಕಂತೆ ನಡೆದುಕೊಂಡಿದ್ದಾರೆ. ಮಹಿಳೆಯ ಪ್ರವಾಸ ಪಟ್ಟಿಯಲ್ಲಿದ್ದ ಕೊನೆಯ ಖಂಡಕ್ಕೆ ಮೂವರ ಪ್ರವಾಸದ ಸಂಪೂರ್ಣ ಪ್ರಯಾಣದ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಆಸ್ಟ್ರೇಲಿಯದ ಪ್ರವಾಸ ತಾಣಗಳಿಗೆ ಭೇಟಿ ನೀಡಲು ಅವರು ಆಕೆಗೆ ಗಾಲಿಕುರ್ಚಿಯನ್ನು ನೀಡಿ ಸಹಾಯ ಮಾಡಿದ್ದಾರೆ.

ಡೊರೊಥಿ ಅವರು 102 ವರ್ಷ ವಯಸ್ಸಿನವರು. ಈಗ ಎಲ್ಲಾ 7 ಖಂಡಗಳಲ್ಲಿ ಪ್ರಯಾಣಿಸಿದ್ದಾರೆ. ಅವರು ತುಂಬಾ ಶಕ್ತಿಶಾಲಿ ಎಂದು ಯೂಟ್ಯೂಬರ್‌ಗಳು ಹೇಳಿದರು.

Viral Video: ಪ್ರವಾಹದಲ್ಲೇ ಸಾಗಿ ಬೆಕ್ಕಿನ ಮರಿಗಳನ್ನು ಕಾಪಾಡಿದ ಪುಟ್ಟ ಬಾಲಕ – ಈತನ ಮಾನವೀಯತೆಗೆ ನೆಟ್ಟಿಗರಿಂದ ಬಹುಪರಾಕ್‌!

ಡೊರೊಥಿ ಅವರು ಏಷ್ಯಾ, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಅಂಟಾರ್ಕ್ಟಿಕಾ ಮತ್ತು ಯುರೋಪ್ ಗೆ ಭೇಟಿ ನೀಡಿದ್ದರು. ಆದರೆ ಆಸ್ಟ್ರೇಲಿಯಾಕ್ಕೆ ಹೋಗಿರಲಿಲ್ಲ. ಇದೀಗ ಆಸ್ಟ್ರೇಲಿಯಾಕ್ಕೆ ವಿಮಾನದಲ್ಲಿ ತೆರಳುವ ಮೂಲಕ ಅವರು ಎಲ್ಲಾ ಖಂಡಗಳಿಗೆ ಪ್ರಯಾಣಿಸುವ ತಮ್ಮ ಆಸೆಯನ್ನು ಈಡೇರಿಸಿಕೊಂಡಿದ್ದಾರೆ.