Monday, 12th May 2025

Viral Video: ಕ್ಲಾಸ್ ರೂಂನಲ್ಲೇ ವಿದ್ಯಾರ್ಥಿಯನ್ನು ಹಿಡಿದು ನೆಲಕ್ಕೆ ಬಡಿದ ಶಿಕ್ಷಕ! ಬೆಚ್ಚಿ ಬೀಳಿಸುವಂತಿದೆ ಈ ಹಾರಿಬಲ್ ವಿಡಿಯೋ

ಜಾರ್ಜಿಯಾ: ವಿದ್ಯಾರ್ಥಿಯ ಮೇಲೆ ಶಿಕ್ಷಕನ ದೌರ್ಜನ್ಯ, ವಿದ್ಯಾರ್ಥಿಗಳಿಗೆ ರಕ್ತ ಬರುವಂತೆ ಹೊಡೆದ ಶಿಕ್ಷಕಿ.. ಇಂತಹ ಸುದ್ದಿಗಳು ನಮ್ಮಲ್ಲಿ ಮಾತ್ರ ನಡೆಯುವುದು ಅಂದ್ಕೊಂಡಿದ್ದೀರಾ..? ಇಲ್ಲ, ಇಂತಹ ಅಮಾನವೀಯ ಘಟನೆಗಳು ವಿದೇಶಗಳಲ್ಲೂ ಅದರಲ್ಲೂ ಅಮೆರಿಕಾದಂತಹ ದೇಶದಲ್ಲೂ ನಡೆಯುತ್ತದೆ ಎಂದರೆ ನಂಬಲೇಬೇಕು! ಅಷ್ಟಕ್ಕೂ ಅಲ್ಲಿರುವವರೂ ಮನುಷ್ಯರೇ ತಾನೆ..? ಅಂತದ್ದೇ ಸುದ್ದಿ ಮತ್ತು ಅದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ (Viral Video) ಆಗುತ್ತಿದೆ. ಶಿಕ್ಷಕನೊಬ್ಬ 11 ವರ್ಷ ಪ್ರಾಯದ ವಿದ್ಯಾರ್ಥಿಯ ಕೊರಳಪಟ್ಟಿ ಹಿಡಿದು ಆತನನ್ನು ತರಗತಿ ಕೋಣೆಯ ನೆಲಕ್ಕೆ ಅಪ್ಪಳಿಸಿದ ಘಟನೆ ಇದೀಗ ಸೋಷಿಯಲ್ ಮೀಡಿಯಾವನ್ನು ಬೆಚ್ಚಿ ಬೀಳಿಸಿದೆ (Disturbing footage).

ಜಾರ್ಜಿಯಾದಲ್ಲಿರುವ (Georgia) ಡಿ ರೆನ್ನೆ ಮಿಡಲ್ ಸ್ಕೂಲ್ ನಲ್ಲಿ (De Renne Middle School) ಡಿ.06ರಂದು ಈ ಘಟನೆ ನಡೆದಿದ್ದು, ಇಲ್ಲಿನ ಆರನೇ ಗ್ರೇಡ್ ವಿದ್ಯಾರ್ಥಿ ಈ ರೀತಿ ಶಿಕ್ಷಕನ ಸಿಟ್ಟಿನ ಭರಕ್ಕೆ ಏಟು ತಿಂದ ಬಾಲಕ. ಈ ಆಘಾತಕಾರಿ ವಿಡಿಯೋವನ್ನು ನ್ಯೂಯಾರ್ಕ್ ಪೋಸ್ಟ್ (New York Post) ಹಂಚಿಕೊಂಡಿದ್ದು, ತಕ್ಷಣವೇ ಇದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ.

ಲಭ್ಯ ಮಾಹಿತಿಗಳ ಪ್ರಕಾರ, ದಾಳಿಗೊಳಗಾದ ವಿದ್ಯಾರ್ಥಿಯ ತಾಯಿಯ ಕುರಿತಾಗಿ ಈ ಶಿಕ್ಷಕ ‘ಲೈಂಗಿಕ ಪ್ರಚೋದನೆಯ’ (Sexual remarks) ಹೇಳಿಕೆಗಳನ್ನು ನೀಡಿದ್ದು, ಇದರ ಕುರಿತು ಆ ವಿದ್ಯಾರ್ಥಿ ಶಿಕ್ಷಕನಲ್ಲಿ ಪ್ರಶ್ನಿಸಿದಾಗ, ಸಿಟ್ಟಿಗೆದ್ದ ಶಿಕ್ಷಕ ಈ ವಿದ್ಯಾರ್ಥಿಯ ಕೊರಳ ಪಟ್ಟಿಯನ್ನು ಹಿಡಿದು ನೆಲಕ್ಕೆ ದೂಡಿಹಾಕುವ ದೃಶ್ಯ ಈ ವಿಡಿಯೋದಲ್ಲಿ ದಾಖಲಾಗಿದೆ.

‘ನನ್ನ ಮಗನಿಗೆ ಕಿರಿಕಿರಿಯಾಗುವಂತಹ ಕೆಲವೊಂದು ಪದಗಳನ್ನು ಆ ವ್ಯಕ್ತಿ (ಶಿಕ್ಷಕ) ಬಳಸಿದ್ದಾನೆ ಮತ್ತು ನನ್ನ ಬಗ್ಗೆ ಆತ ಆಡಿದ ಮಾತುಗಳೂ ಸಹ ನನ್ನ ಮಗನಿಗೆ ಸಿಟ್ಟು ತರಿಸಿದೆ” ಎಂದು ವಿದ್ಯಾರ್ಥಿಯ ತಾಯಿ ಚೆ’ನೆಲ್ಲೆ ರಸೆಲ್ ಮಾಧ್ಯಮಗಳಿಗೆ ಮಾಹಿತಿ ನಿಡಿದ್ದಾರೆ.

ಈ ಘಟನೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಳಕೆದಾರರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದು, ಕೆಲವರು ಇದನ್ನು, ‘ಖಂಡಿತವಾಗಿಯೂ ಒಪ್ಪಲು ಸಾಧ್ಯವಿಲ್ಲ. ಖೇದಕರ ವಿಚಾರವೆಂದರೆ, ಇಂತಹ ಬೈಗುಳಗಳು ಹೊಸದೇನಲ್ಲ, ಆದರೆ, ಈಗ ಎಲ್ಲರ ಬಳಿಯೂ ಸ್ಮಾರ್ಟ್ ಫೋನ್ ಇರುವ ಕಾರಣ ಇಂತಹ ಘಟನೆಗಳು ರೆಕಾರ್ಡ್ ಆಗಿ ಹೊರ ಜಗತ್ತಿಗೆ ತಿಳಿಯುತ್ತದೆ. ಇದು ಒಳ್ಳೆಯ ವಿಚಾರವೇ..!’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಶಿಕ್ಷಕರ ಪರವಾಗಿ ಮಾತನಾಡಿದ್ದು, ‘ಈಗಿನ ಮಕ್ಕಳಿಗೆ ಗೌರವವೆಂಬುದೇ ಇಲ್ಲ. ತಾವು ಏನು ಬೇಕಾದ್ರೂ ಮಾತನಾಡಬಹುದು ಅಂದ್ಕೊಂಡಿದ್ದಾರೆ. ಪ್ರಾಯದವರೂ ಸಹ ತಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅಗತ್ಯ’ ಎಂದು ಬರೆದಿದ್ದಾರೆ. ಹೀಗೆ, ಈ ಘಟನೆಗೆ ಸಂಬಂದಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಕೆಲವರು ವಿದ್ಯಾರ್ಥಿಯ ಪರ ಸಹಾನುಭೂತಿ ತೋರಿಸಿದ್ದರೆ, ಇನ್ನು ಕೆಲವರು ಶಿಕ್ಷಕನ ಪರ ಬ್ಯಾಟ್ ಬೀಸಿದ್ದಾರೆ. ಆದರೆ ಇನ್ನು ಕೆಲವರು ತಟಸ್ಥ ಧೋರಣೆ ತಳೆದಿದ್ದು, ‘ಶಾಲೆಗಳಲ್ಲಿ ಇಂತಹ ಘಟನೆಗಳು ನಡೆಯುವುದು ಭಯಾನಕ’ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Bomb Threat : ನೀವು ಅಲ್ಲಾನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ… ದೆಹಲಿ ಶಾಲೆಗಳಿಗೆ ಮತ್ತೆ ಬಾಂಬ್‌ ಬೆದರಿಕೆ!

ಈ ಘಟನೆಗೆ ಸಮಬಂಧಿಸಿದಂತೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ. ಆದರೆ ಸಂತ್ರಸ್ತ ವಿದ್ಯಾರ್ಥಿಯ ತಾಯಿ ಕೇವಲ ಶಿಕ್ಷಕನ ರಾಜೀನಾಮೆಯಿಂದ ತೃಪ್ತರಾಗಿಲ್ಲ ಎಂದು ತಿಳಿದುಬಂದಿದ್ದು, ಮುಂದನ ಕಾನೂನು ಕ್ರಮಕ್ಕೆ ಮುಂದಾಗುವ ಸಾಧ್ಯತೆಗಳಿವೆ.

‘ಆತನನ್ನು ಜೈಲಿಗೆ ಹಾಕಬೇಕು. ಆತ ನನ್ನ ಮಗನಿಗೆ ನೋವು ಮಾಡಿದ್ದಾನೆ. ಇದು ನಮ್ಮನ್ನು ಘಾಸಿಗೊಳಿಸಿದೆ. ಯಾಕೆಂದರೆ ನಾನಾಗಲಿ ಅಥವಾ ಆತನ ತಂದೆಯಾಗಲಿ ಆತನೊಂದಿಗೆ ಎಂದೂ ಹೀಗೆ ವರ್ತಿಸಿಲ್ಲ. ಹಾಗಾಗಿ, ಈತನ ಈ ದುರ್ವರ್ತನೆಗೆ ತಕ್ಕ ಶಾಸ್ತಿಯಾಗಬೇಕು..’ ಎಂದು ವಿ‍ದ್ಯಾರ್ಥಿಯ ತಾಯಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.