Monday, 12th May 2025

Viral Video: ‘ಚಲ್ತೆ ಚಲ್ತೆ’ ಹಾಡಿನ ಬಳಿಕ ‘ಕಹೋ ನಾ ಪ್ಯಾರ್ ಹೈ’ ಮೂಲಕ ಎಲ್ಲರನ್ನೂ ರಂಜಿಸಿದ ಇಂಡೋನೇಷ್ಯಾದ ಅಣ್ಣ-ತಂಗಿ ಜೋಡಿ

Viral Video

ಜಕಾರ್ತಾ: ಸಂಗೀತವೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಮನಸ್ಸಿಗೆ ಖುಷಿಯಾದಾಗ ಅಥವಾ ಬೇಸರವಾದಾಗ ಸಂಗೀತ ಕೇಳಿದಾಗ ಸಿಗುವ ಖುಷಿಯೇ ಬೇರೆ. ಹೊಸದೊಂದು ಲೋಕಕ್ಕೆ ಸಂಗೀತ ನಮ್ಮನ್ನು ಕರೆದೊಯ್ಯುತ್ತದೆ. ಭಾಷೆ, ದೇಶದ ಹಂಗಿಲ್ಲದೇ ಸಂಗೀತವೂ ಎಲ್ಲರೊಳಗೆ ಒಂದಾಗುತ್ತದೆ. ಅದರಲ್ಲೂ ಚಿಕ್ಕಮಕ್ಕಳು ಹಾಡಿದರಂತೂ ಎದೆತುಂಬಿ ಬರುತ್ತದೆ. ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿರುವುದು ಈ ಅಣ್ಣ- ತಂಗಿಯರಿಬ್ಬರ ಸಂಗೀತದ ಜುಗಲ್‌ ಬಂದಿ. ಇಂಡೋನೇಷ್ಯಾದ ಅಣ್ಣ-ತಂಗಿ ಈ ಹಿಂದೆ ಬಾಲಿವುಡ್‌ನ  ‘ಚಲ್ತೆ ಚಲ್ತೆ’ ಹಾಡು ಹಾಡುತ್ತಾ ಕುಣಿದಿದ್ದರು. ಇದೀಗ ಅವರು ಮತ್ತೊಂದು ಬಾಲಿವುಡ್ ಹಾಡಿಗೆ  ಪ್ರದರ್ಶನ ನೀಡಿದ್ದಾರೆ. ಈ ಬಾರಿ ಅವರು ಕ್ಲಾಸಿಕ್ ಹಿಟ್ ‘ಕಹೋ ನಾ ಪ್ಯಾರ್ ಹೈ’ ಹಾಡನ್ನು ಹಾಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಇಂಡೋನೇಷ್ಯಾದ ಅಣ್ಣ-ತಂಗಿ ಇಬ್ಬರು  ತಮ್ಮ ಮನೆಯಲ್ಲಿ ಬಾಲಿವುಡ್ ಹಾಡನ್ನು ಹಾಡುತ್ತಾ ಆನಂದಿಸಿದ್ದಾರೆ.  ಅವರು ಹೃತಿಕ್ ರೋಷನ್ ಚಿತ್ರದ ‘ಕಹೋ ನಾ ಪ್ಯಾರ್ ಹೈ’ ಚಿತ್ರದ ಟೈಟಲ್ ಹಾಡಿಗೆ ಟ್ಯೂನ್ ಮಾಡಿದ್ದಾರೆ. ವೈರಲ್ ವಿಡಿಯೊದಲ್ಲಿ ಸಹೋದರ ಗಿಟಾರ್ ನುಡಿಸುತ್ತಾ ಸುಂದರವಾದ ಹಾಡಿನ ಸಾಹಿತ್ಯವನ್ನು ಹಾಡಿದರೆ, ಸಹೋದರಿ  ಸಂಗೀತದ ರೀತಿಯಲ್ಲಿ ತನ್ನ ಬಾಯಿಂದ ಸಂಗೀತ ನಾದಗಳನ್ನು ನುಡಿಸುತ್ತ ಸಹೋದರನಿಗೆ ಸಾಥ್ ನೀಡಿದ್ದಾಳೆ. ಈ ವಿಡಿಯೊ ಈಗಾಗಲೇ ವೈರಲ್ ಆಗಿದ್ದು, ಇನ್‌ಸ್ಟಾಗ್ರಾಂನಲ್ಲಿ 4 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.

ಇಂಡೋನೇಷ್ಯಾದ ಈ ಇಬ್ಬರು ಅಣ್ಣ-ತಂಗಿ ಈ ಹಿಂದೆ ಶಾರುಖ್ ಖಾನ್ ಮತ್ತು ಐಶ್ವರ್ಯಾ ರೈ ಬಚ್ಚನ್‌ ಅಭಿನಯದ ‘ಮೊಹಬ್ಬತೇನ್’ ಚಿತ್ರದ ‘ಚಲ್ತೆ ಚಲ್ತೆ’ ಹಾಡಿಗೆ ಟ್ಯೂನ್ ಮಾಡಿದ್ದು, ಈ ವಿಡಿಯೊ ವೈರಲ್ ಆಗಿತ್ತು.

ಇದನ್ನೂ ಓದಿ:ಪ್ಯಾರಿಸ್‍ನಲ್ಲಿ ಮಹಿಳೆಯರ ‘ಟಾಪ್‌ಲೆಸ್‌’ ಪ್ರತಿಭಟನೆ; ಕಾರಣವೇನು?

ಇದರಲ್ಲಿ ಸಹೋದರನು ಗಿಟಾರ್ ನುಡಿಸುತ್ತ ಹಾಡಿದರೆ ಸಹೋದರಿ ಆ ಹಾಡಿಗೆ ನೃತ್ಯ ಮಾಡಿದ್ದಾಳೆ. ಇವರಿಬ್ಬರ ಈ ವಿಡಿಯೊ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿತ್ತು. ಇದನ್ನು ಅ. 31ರಂದು ಸೋಶಿಯಲ್ ಮೀಡಿಯಾ ಪ್ಲಾಟ್‍ಫಾರ್ಮ್‍ನಲ್ಲಿ ಅಪ್‌ಲೋಡ್‌ ಮಾಡಲಾಗಿತ್ತು. ಇದು  8 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 55,000 ಲೈಕ್‌ಗಳನ್ನು ಗಳಿಸಿತ್ತು.