ಈ ಸುದ್ದಿಯನ್ನು ಓದಿದ ಮೇಲಂತೂ ನೀವು ಖಂಡಿತಾ ‘ಈ ಲೋಕದಲ್ಲಿ ಎಂಥೆಂತಾ ಜನರಿರ್ತಾರಪ್ಪ..’ ಎಂದು ನೀವು ಅಂದುಕೊಳ್ಳುತ್ತೀರಿ. ಯಾಕೆಂದರೆ ಈ ಸುದ್ದಿ ಹಾಗೆ ಇದೆ! ತನ್ನ ಮಗುವಿಗೆ ಎದೆ ಹಾಲುಣಿಸುತ್ತಿರುವ ಸಂದರ್ಭದಲ್ಲೇ ಮಹಿಳೆಯೊಬ್ಬಳು ಇನ್ನೊಂದು ಕೈಯಲ್ಲಿ ಬಿಯರ್ ಬಾಟಲ್ ಹಿಡಿದುಕೊಂಡು ಅದನ್ನು ಕುಡಿಯುತ್ತಿರುವ ಫೊಟೋ ಒಂದನ್ನು ಲಿಂಕ್ಡ್ ಇನ್‌ನಲ್ಲಿ (LinkedIn) ಪೋಸ್ಟ್ ಮಾಡಲಾಗಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ (Viral Post) ಆಗಿದೆ. ಅಂದ ಹಾಗೆ ಬೀಚ್‌ನಲ್ಲಿ ಕುಳಿತು ಈ ರೀತಿಯಾಗಿ ಎಂಜಾಯ್ ಮಾಡುತ್ತಿರುವ ಈ ಮಹಿಳೆ ಸೈಕಾಲಜಿಸ್ಟ್ (Psychologist) ಎನ್ನುವುದು ಇನ್ನೂ ಆಶ್ಚರ್ಯಕರ ಸಂಗತಿ.
ಈ ವಿಚಿತ್ರ ಲಿಂಕ್ಡ್ ಇನ್ ಪೋಸ್ಟ್ ನೋಡಿದ ರೆಡ್ಡಿಟ್ (Reddit) ಬಳಕೆದಾರರೊಬ್ಬರು ‘ಲಿಂಕ್ಡ್ ಇನ್ ಲ್ಯುನಾಟಿಕ್ಸ್’ (LinkedIn Lunatics) ಕಮ್ಯುನಿಟಿ ಗ್ರೂಪ್‌ನಲ್ಲಿ ಇದನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಇದಕ್ಕೆ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಈಕೆಯ ಈ ವರ್ತನೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ತಲೆಕೆಡಿಸಿಕೊಂಡಿದ್ದರೆ, ಇನ್ನು ಕೆಲವರು ಈ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದರ ಔಚಿತ್ಯವನ್ನು ಪ್ರಶ್ನಿಸುತ್ತಿದ್ದಾರೆ.
ಓಲ್ಗಾ ವ್ಲಚೆಂನ್ಸ್ಕ ಎಂಬ ಸೈಕಾಲಜಿಸ್ಟ್ ಮಹಿಳೆ, 10 ವರ್ಷಗಳ ಹಿಂದೆ ತಾನು ಥಾಯ್ಲೆಂಡ್‌ನ (Thailand) ಬೀಚ್ ಒಂದರಲ್ಲಿ ರಜಾದ ಮಜವನ್ನು ಅನುಭವಿಸುತ್ತಿರುವುದರ ಫೋಟೊವನ್ನು ಹೊಸ ವರ್ಷದ ರೆಸಲ್ಯೂಷನ್ ಎಂಬಂತೆ ಲಿಂಕ್ಡ್ ಇನ್‌ನಲ್ಲಿ ಪೋಸ್ಟ್ ಮಾಡಿದ್ದಳು. ಈ ಪೋಸ್ಟ್‌ನೊಂದಿಗೆ 12 ವರ್ಷಗಳ ಬಳಿಕ ಇದೀಗ ಏಕಾಂಗಿಯಾಗಿ ರಜಾಕಾಲವನ್ನು ಕಳೆಯಲು ತೆರಳುತ್ತಿರುವುದಾಗಿ ಮತ್ತು ತನ್ನ ಕುಟುಂಬ ಸದಸ್ಯರಿಂದ 14 ದಿನಗಳ ಕಾಲ ಬೇರೆಯಾಗಿರುವುದಾಗಿ ಬರೆದುಕೊಂಡಿದ್ದಳು.
ಕಳೆದ ದಶಕದ ನೆನಪನ್ನು ಮರುಕಳಿಸಿಕೊಂಡು ವೋಲ್ಗಾ ತನ್ನ ಹಾಸ್ಯಮಯ ಅನುಭವವನ್ನು ಹೀಗೆ ಹಂಚಿಕೊಂಡಿದ್ದಾಳೆ: 18 ತಿಂಗಳ ಬಾಣಂತನ ಮತ್ತು 71 ತಿಂಗಳ ಎದೆ ಹಾಲುಣಿಸುವಿಕೆ. ಆದರೆ ಸಂತಾನೋತ್ಪತ್ತಿ ಚಾಪ್ಟರ್ ಇದೀಗ ಮುಕ್ತಾಯಗೊಂಡಿದೆ ಎಂದು ಆಕೆ ಬರೆದುಕೊಂಡಿದ್ದಾಳೆ. ‘ಇನ್ನು ಏನಿದ್ದರೂ ಬುದ್ದಿವಂತಿಕೆಯ ಬಳಕೆ ಮತ್ತು ಅದರಿಂದ ನೋಟುಗಳ ಮಳೆ ಸುರಿಸುವುದಾಗಿದೆ’ ಎಂದು ಆಕೆ ಖುಷಿಯಿಂದ ಬರೆದುಕೊಂಡಿದ್ದಾಳೆ.
ಇದನ್ನೂ ಓದಿ: Covid Like Virus: ಚೀನಾದಲ್ಲಿ ಹೊಸ ವೈರಸ್ ಪತ್ತೆ; ಭಾರತದಲ್ಲೂ ಮುನ್ನೆಚ್ಚರಿಕೆ ಕ್ರಮ
ಈ ಲಿಂಕ್ಡ್ ಇನ್ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಒಬ್ಬರು ಹೀಗೆ ಬರೆದಿದ್ದಾರೆ. ‘ನಿಜವಾಗಿ ಹೇಳಬೇಕಂದ್ರೆ, ಮಗುವಿಗೆ ಹಾಲುಣಿಸುವ ಸಂದರ್ಭದಲ್ಲಿ ನೀವು ಕುಡಿಯಬೇಕಂದ್ರೆ ತೊಂದ್ರೆ ಇಲ್ಲ, ಯಾಕಂದ್ರೆ ಆಲ್ಕೋಹಾಲ್ ಹಾಲನ್ನು ಸೇರುವುದಕ್ಕೆ ಸಮಯವನ್ನು ತೆಗೆದುಕೊಳ್ಳುತ್ತದೆ. ಮತ್ತು ಅದು ರಕ್ತದೊಂದಿಗೆ ಬೇಗೆ ಸೇರಿಕೊಳ್ಳುವುದಿಲ್ಲ. ಹಾಗೆಂದು ನಾನಿದನ್ನು ಎಲ್ಲಿಯೂ ಮುಕ್ತವಾಗಿ ಹೇಳಿಕೊಳ್ಳುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.
‘ಯಾರಿಗೆ ಮಕ್ಕಳು ಇಲ್ಲವೋ ಬಹುಶಃ ಅವರಿಗೆ ಇದು ಗೊತ್ತಿರಲಿಕ್ಕಿಲ್ಲ, ಆದರೆ ವಿಷ್ಯ ಏನಂದ್ರೆ, ಈ ಮಹಿಳೆ ಆಲ್ಕೋಹಾಲ್ ಸೇವನೆಯ ಸುರಕ್ಷಿತ ವಿಧಾನವನ್ನೇ ಅನುಸರಿಸುತ್ತಿದ್ದಾರೆ. ಆದರೆ ಇದನ್ನು ಲಿಂಕ್ಡ್ ಇನ್‌ನಲ್ಲಿ ಆಕೆ ಪೋಸ್ಟ್ ಮಾಡಿರುವುದ ಮಾತ್ರ ಆಕೆಯ ಹುಚ್ಚುತನದ ಪರಮಾವಧಿ’ ಎಂದು ಇನ್ನೊಬ್ಬ ರೆಡ್ಡಿಟ್ ಬಳಕೆದಾರರು ಬರೆದುಕೊಂಡಿದ್ದಾರೆ.
‘ಇದೊಂದು ನಿಜವಾಗ್ಲೂ ಕೂಲ್ ಫೋಟೊ ಮತ್ತು ಎದೆ ಹಾಲುಣಿಸುವಿಕೆಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇದು 0.25 ಅಥವಾ 0.33ಯಷ್ಟು ಲೈಟ್ ಆಗಿರುವ ಬಿಯರ್. ಹಾಗಾಗಿ ಇದು ಖಂಡಿತವಾಗಿಯೂ ಹಾನಿಕರವಲ್ಲ’ ಎಂದು ಇನ್ನೊಬ್ಬರು ಈಕೆಯ ಈ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ.