Tuesday, 13th May 2025

Viral News: 14 ವರ್ಷಗಳ ಹಿಂದೆ ಕೋಳಿ, ಮೊಟ್ಟೆ ಕದ್ದು ಮರಣ ದಂಡನೆಗೊಳಗಾಗಿದ್ದವನಿಗೆ ಕೊನೆಗೂ ಸಿಕ್ಕಿತು ಜೀವದಾನ!

ನೈಜೀರಿಯಾದ (Nigeria) ಪ್ರಜೆಯೊಬ್ಬನಿಗೆ ಅಲ್ಲಿನ ಗವರ್ನರ್ ಜಿವದಾನವನ್ನು ನೀಡಿದ್ದಾರೆ. 14 ವರ್ಷಗಳ ಹಿಂದೆ ತನ್ನ ಸಹಚರನೊಂದಿಗೆ ಸೇರಿ ಪೊಲೀಸ್ ಅಧಿಕಾರಿಯ ಮನೆಗೆ ನುಗ್ಗಿ ಕೋಳಿ ಮತ್ತು ಮೊಟ್ಟೆ ಕದ್ದಿದ್ದ ಪ್ರಕರಣದಲ್ಲಿ ಈತನಿಗೆ ಹಾಗೂ ಈತನ ಸಹಚರನಿಗೆ ನ್ಯಾಯಾಲಯವು ಮರಣ ದಂಡನೆ ಶಿಕ್ಷೆಯನ್ನು (death by hanging) ವಿಧಿಸಿತ್ತು! ಇದೀಗ ಬರೋಬ್ಬರಿ 14 ವರ್ಷಗಳ ಬಳಿಕ ಇವರಿಬ್ಬರಲ್ಲಿ ಒಬ್ಬನಿಗೆ ಜೀವದಾನ ಲಭಿಸಿದ್ದು ಕ್ಷಮಾದಾನದ ಮೂಲಕ ಈತ ಜೈಲಿನಿಂದ ಹೊರ ಬರಲಿದ್ದಾನೆ. ಆ ತೀರ್ಪು ಬಂದಿದ್ದ ಸಂದರ್ಭದಲ್ಲಿ ಭಾರೀ ಸದ್ದು ಮಾಡಿದ್ದ ಈ ಪ್ರಕರಣ, ಇದೀಗ 14 ವರ್ಷಗಳ ಬಳಿಕ ಮರಣ ದಂಡನೆ ಅಪರಾಧಿಗೆ ಕ್ಷಮಾದಾನದ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದೆ (Viral News).

2010ರಲ್ಲಿ ಏನಾಗಿತ್ತು?

ಸೀಗುನ್ ಓಲೊವೂಕೆರೆ ಎಂಬ 17 ವರ್ಷದ ಬಾಲಕ (2010ರಲ್ಲಿ) ಮೊರಾಕಿನ್ಯೋ ಸಂಡೇ ಎಂಬಾತನ ಜತೆ ಸೇರಿ ಪೊಲೀಸ್ ಅಧಿಕಾರಿ ಹಾಗೂ ಇನ್ನೊಬ್ಬರ ಮನೆಗೆ ಮರದ ಗನ್ ಮತ್ತು ಖಡ್ಗದೊಂದಿಗೆ ದಾಳಿ ನಡೆಸಿದ್ದರು. ಆದರೆ ಇವರಿಬ್ಬರ ದರೋಡೆ ಪ್ರಯತ್ನ ಆ ದಿನ ವಿಫಲಗೊಂಡಿತ್ತು. ಆ ಸಂದರ್ಭದಲ್ಲಿ ಅವರಿಗೆ ಕೋಳಿ ಮತ್ತು ಮೊಟ್ಟೆಗಳು ಮಾತ್ರ ಸಿಕ್ಕಿದ್ದವು ಎಂದು 2010ರ ಆ ಘಟನೆಯನ್ನು ಬಿಬಿಸಿ ವರದಿ ಮಾಡಿತ್ತು.

ಈ ಪ್ರಕರಣದ ಸುದೀರ್ಘ ವಿಚಾರಣೆಯ ಬಳಿಕ 2014ರಲ್ಲಿ ಓಸುನ್ ಸ್ಟೇಟ್ ಹೈಕೋರ್ಟಿನ ಜಿಡೆ ಫಲೋಲಾ ಇವರಿಬ್ಬರನ್ನೂ ಅಪರಾಧಿಗಳೆಂದು ಪರಿಗಣಿಸಿ ಇಬ್ಬರಿಗೂ ಮರಣದಂಡನೆ ಶಿಕ್ಷೆಯನ್ನು ವಿಧಿಸಿದ್ದರು. ಈ ತೀರ್ಪು ನೈಜಿರಿಯದಾದ್ಯಂತ ಭಾರೀ ಸಂಚಲವನ್ನು ಸೃಷ್ಟಿಸಿತ್ತು ಮತ್ತು ಹಲವರು ಇದನ್ನು ವಿರೋಧಿಸಿದ್ದರು. ಇವರಿಬ್ಬರು ನಡೆಸಿದ ಅಪರಾಧ ಪ್ರಕರಣಕ್ಕೆ ಹೋಲಿಸಿದರೆ ಈ ಮರಣ ದಂಡನೆ ಶಿಕ್ಷೆ ಜಾಸ್ತಿಯಾಯಿತು ಎಂದೇ ಹಲವರು ವಾದಿಸಿದ್ದರು.

ಓಲೊವೂಕೆರೆ ಮತ್ತು ಸಂಡೇ ಅಪರಾಧಿಗಳೆಂದು ನ್ಯಾಯಾಲಯ ತೀರ್ಪು ನೀಡಿದ ಬಳಿಕ ಇವರಿಬ್ಬರನ್ನೂ ಲಾಗೋಸ್ ಸ್ಟೇಟ್ ನಲ್ಲಿರುವ ಗರಿಷ್ಠ ಭದ್ರತೆಯ ಕಿರಿಕಿರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು, ಅದೇ ಜೈಲಿನಲ್ಲಿ ಇವರಿಬ್ಬರೂ ಮರಣ ಭೀತಿಯಿಂದ 10 ವರ್ಷಗಳನ್ನು ಕಳೆದಿದ್ದಾರೆ.

ಈ ನಡುವೆ ಗವರ್ನರ್ ಅಡೆಲೆಕೆ ಕಳೆದ ಮಂಗಳವಾರದಂದು ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಓಲೊವೂಕೆರೆಯ ಕ್ಷಮಾದಾನದ ವಿಚಾರವನ್ನು ಪ್ರಕಟಿಸಿದ್ದಾರೆ. ‘ಈ ಯವಕನಿಗೆ ಕರುಣೆ ತೋರಿ ಬಿಡುಗಡೆ ಮಾಡುವಂತೆ ಕಮಿಷನರ್ ಫಾರ್ ಜಸ್ಟಿಸ್ ಅವರಿಗೆ ನಾನು ನಿರ್ಧರಿಸಿದ್ದೆನೆ. ಓಸುನ್ ನ್ಯಾಯ ಮತ್ತು ಸಮಾನತೆಯ ನೆಲವಾಗಿದೆ. ಜೀವಗಳ ರಕ್ಷಣೆ ನಮ್ಮ ಆದ್ಯತೆಯಾಗಬೇಕು’ ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿರುವುದನ್ನು ಬಿಬಿಸಿ ಉಲ್ಲೇಖಿಸಿದೆ.

ಇದನ್ನೂ ಓದಿ: Viral Video: ಬಾಯ್‌ಫ್ರೆಂಡ್‌ಗಾಗಿ ನಡುರಸ್ತೆಯಲ್ಲಿ ಕಿತ್ತಾಡಿದ ಯುವತಿಯರು; ಎಷ್ಟು ಹೊಟ್ಟೆ ಉರಿಸ್ತಾರೋ ಎಂದ ಸಿಂಗಲ್ಸ್‌

ಆದರೆ ಮರಣ ದಂಡೆನೆಗೊಳಗಾಗಿರುವ ಮೊರಾಕಿನ್ಯೋ ಸಂಡೇಯ ಭವಿಷ್ಯ ಮಾತ್ರ ಇನ್ನೂ ಅತಂತ್ರವಾಗಿಯೇ ಇದೆ. ಈತನ ಬಗ್ಗೆ ಗವರ್ನರ್ ಹೇಳಿಕೆಯಲ್ಲಿ ಉಲ್ಲೇಖವಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಪ್ರಕರಣ ಅಲ್ಲಿನ ಮಾನವ ಹಕ್ಕು ಸಂಘಟನೆಗಳ ನಡುವೆ ಬಿಸಿ ಬಿಸಿ ಚರ್ಚೆ ಹುಟ್ಟುಹಾಕಿತ್ತು. ನೈಜಿರಿಯಾ ಪ್ರಜೆಗಳು ಮತ್ತು ಈತನ ಹೆತ್ತವರು ಈತನ ಬಿಡುಗಡೆಗೆ ನಿರಂತರ ಒತ್ತಾಯಿಸುತ್ತಲೇ ಇದ್ದರು. ಈತನ ಹೆತ್ತವರು ಇತ್ತೀಚೆಗಷ್ಟೇ ಪಾಡ್ ಕಾಸ್ಟ್ ಒಂದರಲ್ಲಿ ಮಾತನಾಡುತ್ತಾ ತಮ್ಮ ಮಗನ ಸ್ಥಿತಿ ನೆನೆದು ಕಣ್ಣೀರಾಗಿದ್ದರು ಹಾಗೂ ತಮ್ಮ ಒಬ್ಬನೇ ಮಗನ ಬಿಡುಗಡೆಗೆ ಕಣ್ಣೀರು ಹಾಕಿ ವಿನಂತಿಸಿಕೊಂಡಿದ್ದರು.

ಓಲೋವೂಕೆರೆ ಜೈಲಿನಿಂದ 2025ಕ್ಕೆ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ. ನೈಜೀರಿಯಾದಲ್ಲಿ 2012ರಿಂದಿಚೆಗೆ ಯಾವುದೇ ಅಪರಾಧಿಗೆ ಮರಣ ದಂಡನೆ ವಿಧಿಸಲಾಗಿಲ್ಲ. ಆದಾಗ್ಯೂ ಇಲ್ಲಿ 3,400ಕ್ಕಿಂತಲೂ ಹೆಚ್ಚು ಅಪರಾಧಿಗಳಿಗೆ ಮರಣ ದಂಡನೆ ಶಿಕ್ಷೆ ಘೋಷಣೆಯಾಗಿದ್ದು ಅವರು ವಿವಿಧ ಜೈಲುಗಳಲ್ಲಿದ್ದಾರೆ.