ಢಾಕಾ: ಬಾಂಗ್ಲಾದೇಶದಲ್ಲಿ(Bangladesh) ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ನಿರಂತರ ದಾಳಿಗಳ ಕುರಿತು ಭಾರತದ ಕಳವಳವನ್ನು ಢಾಕಾಗೆ(Dhaka) ತಿಳಿಸಿರುವುದಾಗಿ ವಿದೇಶಾಂಗ ಕಾರ್ಯದರ್ಶಿ(Foreign Secretary) ವಿಕ್ರಮ್ ಮಿಸ್ರಿ(Vikram Misri) ಇಂದು(ಡಿ.9) ಹೇಳಿದ್ದಾರೆ. ಬಾಂಗ್ಲಾದೇಶದ ವಿದೇಶಾಂಗ ಸಲಹೆಗಾರ ಮೊಹಮ್ಮದ್ ತೌಹಿದ್ ಹೊಸೈನ್(Mohammad Touhid Hossain) ಅವರೊಂದಿಗೆ ಮಿಸ್ರಿ ಸುದೀರ್ಘವಾಗಿ ಮಾತುಕತೆ ನಡೆಸಿದ್ದು, ಧಾರ್ಮಿಕ ಸಂಸ್ಥೆಗಳು ಮತ್ತು ಪವಿತ್ರ ಪೂಜಾ ಸ್ಥಳಗಳ ಮೇಲಿನ ದಾಳಿಗಳು ಖಂಡನೀಯ ಎಂದು ಹೇಳಿದ್ದಾರೆ.
"Attacks On Religious Places Regrettable": India's Plainspeak With Dhaka https://t.co/V0EGGawFex pic.twitter.com/HfUxK0IIQf
— NDTV WORLD (@NDTVWORLD) December 9, 2024
ಭಾರತವು ಬಾಂಗ್ಲಾದೊಂದಿದೆ ಧನಾತ್ಮಕ, ರಚನಾತ್ಮಕ ಮತ್ತು ಪರಸ್ಪರ ಸ್ನೇಹ ಸಂಬಂಧವನ್ನು ಹೊಂದಲು ಬಯಸುತ್ತದೆ ಎಂದು ಮಿಸ್ರಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರಕ್ಕೆ ತಿಳಿಸಿದ್ದಾರೆ. ತಮ್ಮ ದ್ವಿಪಕ್ಷೀಯ ಸಭೆ ಮುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಿಸ್ರಿ, “ಇಂದು ನಡೆದ ಸಭೆಯಲ್ಲಿ ಬಾಂಗ್ಲಾದೇಶದಲ್ಲಿ ಅಧಿಕಾರದಲ್ಲಿರುವ ಮಧ್ಯಂತರ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡಲು ಭಾರತ ಇಚ್ಛಿಸುತ್ತದೆ ಎಂದು ಹೇಳಿದ್ದೇನೆ” ಎಂದು ತಿಳಿಸಿದರು.
ಬಾಂಗ್ಲಾದೇಶದ ಅಲ್ಪಸಂಖ್ಯಾತರ ಸಮಸ್ಯೆಯ ಕುರಿತು ಮಾತನಾಡಿದ ಮಿಸ್ರಿ, “ನಾವು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಗಂಭೀರವಾಗಿ ಚರ್ಚಿಸಿದ್ದೇವೆ. ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ನಮ್ಮ ಕಳವಳಗಳನ್ನು ಅವರಿಗೆ ತಿಳಿಸಿದ್ದೇನೆ. ಸಾಂಸ್ಕೃತಿಕ, ಧಾರ್ಮಿಕ ಸ್ಥಳಗಳು ಮತ್ತು ಸಾರ್ವಜನಿಕ ಆಸ್ತಿಗಳ ಮೇಲಿನ ನಿರಂತರ ದಾಳಿಗಳ ಬಗ್ಗೆಯೂ ಮಾತನಾಡಿದ್ದೇನೆ” ಎಂದರು.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಒಂದು ದಿನದ ಭೇಟಿಗಾಗಿ ಇಂದು ಮುಂಜಾನೆ ಢಾಕಾಗೆ ತೆರಳಿದ್ದರು. ಆಗಸ್ಟ್ನಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಪದಚ್ಯುತಿಯ ನಂತರ ಉಭಯ ದೇಶಗಳ ನಡುವಿನ ಮೊದಲ ಉನ್ನತ ಮಟ್ಟದ ಸಭೆ ಇದಾಗಿತ್ತು.
ಮಿಸ್ರಿ ಮೊದಲು ತಮ್ಮ ಸಹವರ್ತಿ – ವಿದೇಶಾಂಗ ಕಾರ್ಯದರ್ಶಿ ಜಾಶಿಮ್ ಉದ್ದೀನ್ ಅವರೊಂದಿಗೆ ಸಭೆ ನಡೆಸಿದರು. ರಾಜ್ಯ ಅತಿಥಿ ಗೃಹವಾದ ಪದ್ಮಾದಲ್ಲಿ ಸಭೆ ನಡೆಯಿತು. ಇಬ್ಬರು ವಿದೇಶಾಂಗ ಕಾರ್ಯದರ್ಶಿಗಳು ಒಬ್ಬರಿಗೊಬ್ಬರು ಮಾತುಕತೆ ನಡೆಸಿದ್ದು, ನಂತರ ಔಪಚಾರಿಕ ಸಭೆಯನ್ನು ನಡೆಸಲಾಯಿತು. ಅಲ್ಲಿ ಎರಡೂ ಕಡೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು ಎಂದು ತಿಳಿದು ಬಂದಿದೆ.
ಆಗಸ್ಟ್ನಲ್ಲಿ ನಡೆದ ಬೃಹತ್ ಸರ್ಕಾರಿ ವಿರೋಧಿ ಪ್ರತಿಭಟನೆಯ ನಂತರ ಶೇಖ್ ಹಸೀನಾ ಪದಚ್ಯುತರಾಗಿದ್ದು, ಭಾರತ ಮತ್ತು ಬಾಂಗ್ಲಾದೇಶ ನಡುವಿನ ರಾಜತಾಂತ್ರಿಕ ಸಂಬಂಧಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಎರಡೂ ದೇಶಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ. ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡಿದ ಕೆಲವೇ ದಿನಗಳಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನಸ್ ಅವರು ಬಾಂಗ್ಲಾದೇಶದ ಮುಖ್ಯ ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡರು.
ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಹಲವು ಹಿಂಸಾಚಾರಗಳನ್ನು ನಡೆಸಲಾಗುತ್ತಿದೆ . ಗುಂಪು ಹಿಂಸಾಚಾರ, ಆಸ್ತಿಪಾಸ್ತಿ ನಾಶ ಮತ್ತು ಧಾರ್ಮಿಕ ಸ್ಥಳಗಳನ್ನು ಅಪವಿತ್ರಗೊಳಿಸುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ.
ಈ ಸುದ್ದಿಯನ್ನೂ ಓದಿ:ISKCON Monks Arrested: ಬಾಂಗ್ಲಾದೇಶದಲ್ಲಿ ಇಸ್ಕಾನ್ನ ಮತ್ತಿಬ್ಬರು ಸನ್ಯಾಸಿಗಳು ಅರೆಸ್ಟ್