Wednesday, 14th May 2025

Turkish Pasta: ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ ಟರ್ಕಿಶ್‌ ಪಾಸ್ತಾ; ಮಾಡೋದು ಹೇಗೆ?

Turkish Pasta

ಸಾಮಾಜಿಕ ಮಾಧ್ಯಮಗಳಲ್ಲಿ ವಿಭಿನ್ನ ಆಹಾರ ವಿಧಾನಗಳು ಹೆಚ್ಚು ಗಮನ ಸೆಳೆಯುತ್ತಿರುತ್ತವೆ. ವೇಗವಾಗಿ ಬದಲಾಗುತ್ತಿರುವ ಆಹಾರ ಪ್ರವೃತ್ತಿಗಳಲ್ಲಿ, ಇದೀಗ ಇಂಟರ್‌ನೆಟ್‌ನಲ್ಲಿ ಪ್ರಸಿದ್ಧಿ ಪಡೆದಿರುವ ಅನ್ನಾ ಪಾಲ್, ಟರ್ಕಿಶ್ ಪಾಸ್ತಾ (Turkish Pasta) ಪಾಕ ವಿಧಾನವೊಂದನ್ನು ಹಂಚಿಕೊಂಡಿದ್ದು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಆಕರ್ಷಿಸಿದೆ. ಈ ಪಾಕವಿಧಾನವು ವೈರಲ್ ಆಗಿದ್ದು, ದೀರ್ಘಕಾಲದವರೆಗೆ ಇಂಟರ್‌ನೆಟ್‌ನಲ್ಲಿ ಟ್ರೆಂಡ್ ಆಗಿದ್ದ ಜಿಗಿ ಹ್ಯಾಡಿಡ್ ಅವರ ವೋಡ್ಕಾ ಪಾಸ್ತಾವನ್ನು ಹಿಂದಿಕ್ಕಿದೆ. ಈ ಟರ್ಕಿಶ್‌ ಪಾಕ ವಿಧಾನದಲ್ಲಿ ಮಾಂಸ, ಕೆನೆ ಮೊಸರು ಮತ್ತು ಪಾಸ್ತಾವನ್ನು ಬಳಸಲಾಗಿದ್ದು, ನೋಡಲೂ ಅತ್ಯಾಕರ್ಷಕವಾಗಿದೆ.

ಇದು ಪ್ರಭಾವಶಾಲಿ ಟರ್ಕಿಶ್ ‘ಮಂಟಿ’ಯಿಂದ ಸ್ಫೂರ್ತಿ ಪಡೆದ ಪಾಕವಿಧಾನವಾಗಿದೆ. ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹಲವರು ಈ ಪಾಕವಿಧಾನವನ್ನು ಪ್ರಯತ್ನಿಸುವ ಚಿತ್ರಗಳು ಮತ್ತು ವಿಡಿಯೊಗಳನ್ನು ಹಂಚಿಕೊಂಡ ಬಳಿಕ ಅನ್ನಾ ಅವರ ಟರ್ಕಿಶ್ ಪಾಸ್ತಾ ವೈರಲ್ ಆಗಿದೆ. ‌

ಆಹಾರ ಪ್ರಿಯರು ಹ್ಯಾಶ್ ಟ್ಯಾಗ್ ಅಡಿಯಲ್ಲಿ ಖಾದ್ಯವನ್ನು ತಯಾರಿಸುವ ಪ್ರಯತ್ನಗಳನ್ನು ಹಂಚಿಕೊಂಡಿದ್ದಾರೆ. #TurkishPasta ಪೋಸ್ಟ್‌ಗಳು ಸಾವಿರಾರು ವೀಕ್ಷಣೆಗಳನ್ನು ಗಳಿಸಿದೆ. ಇನ್ನು ಕೆಲವರು ಈ ಪಾಕವಿಧಾನಕ್ಕೆ ತಮ್ಮದೇ ಅಭಿರುಚಿಯ ಕೆಲವು ಹೆಚ್ಚುವರಿ ಪದಾರ್ಥಗಳನ್ನು ಸೇರಿಸಿದ್ದಾರೆ.

ತಯಾರಿಸಲು ಬೇಕಾಗುವ ಸಾಮಗ್ರಿಗಳು

ಪಾಸ್ತಾ: ಯಾವುದೇ ವಿಧದ ಪಾಸ್ತಾವನ್ನು ತೆಗೆದುಕೊಂಡು ಈ ಪಾಕವಿಧಾನವನ್ನು ತಯಾರಿಸಬಹುದು. ಆದರೆ ಹೆಚ್ಚುವರಿ ಪೌಷ್ಠಿಕಾಂಶಕ್ಕಾಗಿ ಹೋಲ್‌ ಗ್ರೈನ್‌ ಪಾಸ್ತಾವನ್ನು ತೆಗೆದುಕೊಳ್ಳಿ.
ಮಾಂಸ: ಕೋಳಿ ಅಥವಾ ಕುರಿ.
ಗ್ರೀಕ್ ಮೊಸರು
ಮಸಾಲೆಗಳು: ಉಪ್ಪು, ಮೆಣಸು, ಕರಿಬೇವಿನ ಪುಡಿ, ಬೆಳ್ಳುಳ್ಳಿ ಪುಡಿ, ಈರುಳ್ಳಿ ಪುಡಿ ಮತ್ತು ಖಾರ ಇಷ್ಟಪಡುವವರು ರುಚಿಗಾಗಿ ಹೆಚ್ಚುವರಿ ಮೆಣಸು ಸೇರಿಸಿಕೊಳ್ಳಿ.
ಬೆಣ್ಣೆ: ಖಾದ್ಯದ ಮಿಶ್ರಣವನ್ನು ಪಾಸ್ತಾ ಜೊತೆ ಹಿಡಿದಿಟ್ಟುಕೊಳ್ಳಲು ಬೆಣ್ಣೆ ಸೇರಿಸಿ.

ಮಾಡುವ ವಿಧಾನ

ಅನ್ನಾ ಪಾಲ್ ಹಂಚಿಕೊಂಡ ಟರ್ಕಿಶ್ ಪಾಸ್ತಾವನ್ನು ಅವರ ತಾಯಿ ತಯಾರಿಸಿದ್ದಾರೆ. ಸರಳವಾಗಿ ಪಾಸ್ತಾ ತಯಾರಿಸಿದ ರೀತಿ ಇಂಟೆರ್‌ನೆಟ್‌ ಬಳಕೆದಾರರಿಗೆ ಇಷ್ಟವಾಗಿದೆ. ಬೆಣ್ಣೆ, ಮೆಣಸಿನ ಪುಡಿ, ಉಪ್ಪು ಹಾಕಿ ಮಾಂಸವನ್ನು ಬೇಯಿಸಿಟ್ಟುಕೊಳ್ಳಬೇಕು. ನಂತರ ಪಾಸ್ತಾದ ಮೇಲೆ ಕೆನೆಭರಿತ ಮೊಸರು ಹಾಕಿ ಬೇಯಿಸಿದ ಮಾಂಸದ ಮಿಶ್ರಣವನ್ನು ಹಾಕಿ, ಅದರ ಮೇಲೆ ಟೊಮೆಟೋ, ಕೊತ್ತಂಬರಿ ಸೊಪ್ಪು ಹಾಕಬೇಕು. ಹೆಚ್ಚುವರಿ ಖಾರ ಬೇಕಾದರೆ ಸೇರಿಸಿಕೊಳ್ಳಬಹುದು.

ಹೆಚ್ಚು ಸಮಯವೂ ತೆಗೆದುಕೊಳ್ಳದೆ ರುಚಿಯಾಗಿ 30 ನಿಮಿಷಗಳಿಗಿಂತ ಕಡಿಮೆ ಸಮಯದಲ್ಲಿ ತಯಾರಿಸಬಹುದು ಎಂದು ಹೇಳಿದ್ದಾರೆ. ಈ ಲಘು ಆಹಾರ ಬೆಳಗ್ಗೆ ಅಥವಾ ರಾತ್ರಿ ಸಮಯ ಸೇವಿಸಬಹುದು.

ಇದನ್ನೂ ಓದಿ: ನ್ಯೂಸ್ ಪೇಪರ್‌ ಉಟ್ಟುಕೊಂಡು ನ್ಯೂಸಾದ ಬೆಡಗಿ; ವೈರಲ್ ವಿಡಿಯೊ ನೀವೂ ನೋಡಿ

ಅನ್ನಾ ಅವರ ಈ ಪಾಕವಿಧಾನ ವೈರಲ್‌ ಆಗುವ ಮೊದಲು ಗಿಗಿ ಹ್ಯಾಡಿಡ್ ಅವರ ಮಸಾಲೆಯುಕ್ತ ವೋಡ್ಕಾ ಪಾಸ್ತಾ ಖ್ಯಾತಿ ಗಳಿಸಿತ್ತು. 2020ರಲ್ಲಿ ಇಂಟರ್‌ನೆಟ್‌ ಸೆನ್ಸೇಷನ್ ಆಗಿತ್ತು. ಇದು ಆನ್‌ಲೈನ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಪಾಸ್ತಾ ಪಾಕ ವಿಧಾನವಾಗಿತ್ತು.