Wednesday, 14th May 2025

ಚಲಿಸುತ್ತಿದ್ದ ರೈಲಿಗೆ ಮತ್ತೊಂದು ರೈಲು ಡಿಕ್ಕಿ

ನ್ಯೂಯಾರ್ಕ್: ನಗರದ ಸುರಂಗಮಾರ್ಗದ ರೈಲು ಕಡಿಮೆ ವೇಗದಲ್ಲಿ ಚಲಿಸುತ್ತಿದ್ದ ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದು ಹಳಿತಪ್ಪಿದ್ದು, 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ಜನದಟ್ಟಣೆಯ ಸಮಯದಲ್ಲಿ ಈ ಅವಘಡ ಸಂಭವಿಸಿದ್ದು, ಮ್ಯಾನ್‌ಹ್ಯಾಟನ್‌ನಾದ್ಯಂತ ರೈಲು ಸೇವೆ ಅಸ್ತವ್ಯಸ್ತವಾಗಿದೆ.

ಸುಮಾರು 300 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ರೈಲು ಮತ್ತು ನಾಲ್ಕು ಕಾರ್ಮಿಕರಿದ್ದ ಮೆಟ್ರೋಪಾಲಿಟನ್ ಸಾರಿಗೆ ಪ್ರಾಧಿಕಾರದ(ಎಂಟಿಎ) ರೈಲಿನ ನಡುವೆ 96ನೇ ಸ್ಟ್ರೀಟ್ ನಿಲ್ದಾಣದ ಬಳಿ ಪರಸ್ಪರ ಡಿಕ್ಕಿ ಸಂಭವಿಸಿದೆ ಎಂದು ಪೊಲೀಸರು ಮತ್ತು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ತುರ್ತು ನಿರ್ವಹಣಾ ಅಧಿಕಾರಿಗಳು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಚಿತ್ರದಲ್ಲಿ ರೈಲು ಭಾಗಶಃ ಹಳಿಗಳಿಂದ ಹೊರಬಂದಿದೆ. ಮಾನವ ದೋಷದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅದು ನಿಜವಾಗಿಯೂ ಭಯಾನಕ ಸಂದರ್ಭವಾಗಿತ್ತು ಎಂದು ಬ್ರೂಕ್ಲಿನ್‌ನಲ್ಲಿರುವ ತಮ್ಮ ಮನೆಗೆ ಹೋಗುತ್ತಿದ್ದ 19 ವರ್ಷದ ಎವೆಲಿನ್ ಅಗ್ಯುಲರ್ ತಿಳಿಸಿದ್ದಾರೆ.

‘ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಎರಡು ರೈಲುಗಳ ನಡುವೆ ಡಿಕ್ಕಿ ನಿಜಕ್ಕೂ ಭಯಾನಕ. ಈ ಬಗ್ಗೆ ತನಿಖೆ ನಡೆಸುತ್ತೇವೆ’ ಎಂದು ಅಧಿಕಾರಿ ಹೇಳಿದ್ಧಾರೆ. ನ್ಯೂಯಾರ್ಕ್ ನಗರದ ಸುರಂಗಮಾರ್ಗ ವ್ಯವಸ್ಥೆ ಬಹಳ ಹಳೆಯದಾಗಿವೆ.

Leave a Reply

Your email address will not be published. Required fields are marked *