ದುಬೈ: ಕಾಲಿವುಡ್ ಸ್ಟಾರ್ ತಲ ಅಜಿತ್ (Thala Ajith) ಓಡಿಸುತ್ತಿದ್ದ ಪೋರ್ಷೆ ರೇಸ್ ಕಾರು ದುಬೈಯಲ್ಲಿ ಅಪಘಾತಕ್ಕೀಡಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. 24ಎಚ್ ದುಬೈ 2025 (24H Dubai) ಎಂದೂ ಕರೆಯಲ್ಪಡುವ ದುಬೈ 24 ಗಂಟೆಗಳ ರೇಸ್‌ನಲ್ಲಿ ಅವರು ಭಾಗವಹಿಸುತ್ತಿದ್ದು, ಅದರ ತರಬೇತಿ ವೇಳೆ ಈ ಅವಘಡ ನಡೆದಿದೆ. 6 ಗಂಟೆಗಳ ಸುದೀರ್ಘ ಅವಧಿಯ ಪರೀಕ್ಷೆ ಇನ್ನೇನು ಮುಗಿಯಲಿದೆ ಎನ್ನುವಾಗ ಅಜಿತ್ ಓಡಿಸುತ್ತಿದ್ದ ಕಾರು ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಸದ್ಯ ಅವರ ಕಾರು ತಡೆಗೋಡೆಗೆ ಡಿಕ್ಕಿ ಹೊಡೆಯುವ ದೃಶ್ಯ ಹೊರ ಬಿದ್ದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ (Viral Video).
ಕಾರ್ ರೇಸರ್ ಕೂಡ ಆಗಿರುವ ಅಜಿತ್ ಕುಮಾರ್ ಆಗಾಗ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರುತ್ತಾರೆ. ಅವರು ʼಅಜಿತ್ ಕುಮಾರ್ ರೇಸಿಂಗ್ʼ ಎಂಬ ತಂಡದ ಮಾಲೀಕರಾಗಿದ್ದು, ತಮ್ಮ ಟೀಮ್‌ನ ಸದಸ್ಯರಾದ ಮ್ಯಾಥ್ಯೂ ಡೆಟ್ರಿ, ಫ್ಯಾಬಿಯನ್ ಡಫಿಯಕ್ಸ್ ಮತ್ತು ಕ್ಯಾಮರೂನ್ ಮೆಕ್ಲಿಯೋಡ್ ಅವರೊಂದಿಗೆ ಈ ಪ್ರತಿಷ್ಠಿತ ರೇಸ್‌ನಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ʼಅಜಿತ್ ಕುಮಾರ್ ರೇಸಿಂಗ್ʼ ತಂಡದ ವ್ಯವಸ್ಥಾಪಕರಾಗಿ ಫ್ಯಾಬಿಯನ್ ಡಫಿಯಕ್ಸ್ ಅಧಿಕಾರ ವಹಿಸಿಕೊಂಡಿದ್ದರು.
Ajith Kumar’s massive crash in practise, but he walks away unscathed.
— Ajithkumar Racing (@Akracingoffl) January 7, 2025
Another day in the office … that’s racing!#ajithkumarracing #ajithkumar pic.twitter.com/dH5rQb18z0
ವಿಡಿಯೊದಲ್ಲಿ ಏನಿದೆ?
ʼಅಜಿತ್ ಕುಮಾರ್ ರೇಸಿಂಗ್ʼ ತಂಡದ ಸದಸ್ಯರು ಅಪಘಾತದ ವಿಡಿಯೊ ಹಂಚಿಕೊಂಡಿದ್ದಾರೆ. ಇದರಲ್ಲಿ ಅಜಿತ್ ಅವರ ಕಾರು ತಡೆಗೋಡೆಗೆ ಡಿಕ್ಕಿ ಹೊಡೆದು 7 ಬಾರಿ ಗಿರಕಿ ಹೊಡೆಯುವುದು ಕಂಡು ಬಂದಿದೆ. ಬಳಿಕ ಕಾರಿನಲ್ಲಿದ್ದವರನ್ನು ವ್ಯವಸ್ಥಾಪಕರು ರಕ್ಷಿಸಿ ಆಂಬ್ಯಲೆನ್ಸ್ ಮೂಲಕ ಚಿಕಿತ್ಸೆಗಾಗಿ ಕರೆದೊಯ್ದಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಆರೋಗ್ಯ ಸ್ಥಿತಿ ಹೇಗಿದೆ?
ಇದೀಗ ಅಜಿತ್ ಅವರ ಮ್ಯಾನೇಜರ್ ಸುರೇಶ್ ಚಂದ್ರ ಅವರು ನಟನ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. “ಅಜಿತ್ ಸುರಕ್ಷಿತರಾಗಿದ್ದಾರೆ. ಅಪಘಾತ ಸಂಭವಿಸಿದಾಗ ಅವರು 180 ಕಿ.ಮೀ. ವೇಗದಲ್ಲಿ ಪೋರ್ಷೆ ಕಾರು ಚಲಾಯಿಸುತ್ತಿದ್ದರು” ಎಂದು ತಿಳಿಸಿದ್ದಾರೆ. ನಟನೆಯ ಹೊರತಾಗಿ ಅಜಿತ್ ಕಾರು ಮತ್ತು ಬೈಕ್ ರೇಸಿಂಗ್ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದಾರೆ. ಅವರು ಇದೀಗ ಈ ಪ್ರತಿಷ್ಠಿತ ರೇಸ್‌ಗಾಗಿ ತಮ್ಮ ತಂಡದೊಂದಿಗೆ ಅಭ್ಯಾಸ ನಡೆಸುತ್ತಿದ್ದರು. ರೇಸ್‌ನಲ್ಲಿ ಭಾಗವಹಿಸುವ ತಂಡ 24 ಗಂಟೆಗಳ ಕಾಲ ಡ್ರೈವ್ ಮಾಡಬೇಕು. ತಂಡದ ಪ್ರತಿಯೊಬ್ಬ ಸದಸ್ಯ 6 ಗಂಟೆಗಳ ಕಾಲ ಕಾರು ಚಾಲನೆ ಮಾಡಬೇಕು. ಅಜಿತ್ ತಮ್ಮ ಪಾಲಿನ 6 ಗಂಟೆಗಳನ್ನು ಪೂರ್ಣಗೊಳಿಸಲು ಕೆಲವೇ ನಿಮಿಷ ಬಾಕಿ ಉಳಿದಿತ್ತು.
ʼಗುಡ್ ಬ್ಯಾಡ್ ಅಗ್ಲಿʼ ರಿಲೀಸ್ ಡೇಟ್ ಅನೌನ್ಸ್
ಅಜಿತ್ ನಟನೆಯ ಮುಂಬರುವ ಬಹು ನಿರೀಕ್ಷಿತ ಕಾಲಿವುಡ್‌ನ ʼಗುಡ್ ಬ್ಯಾಡ್ ಅಗ್ಲಿʼ (Good Bad Ugly) ಚಿತ್ರದ ರಿಲೀಸ್ ಡೇಟ್ ಪ್ರಕಟವಾಗಿದೆ. ಅಧಿಕ್ ರವಿಚಂದ್ರನ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರ ಏ. 10ರಂದು ತೆರೆಗೆ ಬರಲಿದೆ. ಇದರಲ್ಲಿ ನಾಯಕಿಯಾಗಿ ತ್ರಿಶಾ ಕೃಷ್ಣನ್ ನಟಿಸುತ್ತಿದ್ದು, ಪ್ರಭು, ಪ್ರಸನ್ನ, ಯೋಗಿ ಬಾಬು ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Vidaamuyarchi teaser: ಅಜಿತ್ ಕುಮಾರ್ ನಟನೆಯ ʻವಿಡಾಮುಯಾರ್ಚಿʼ ಟೀಸರ್ ಔಟ್… ಹಾಲಿವುಡ್ ರೇಂಜ್‌ನಲ್ಲಿದೆ ಎಂದ ಪ್ರೇಕ್ಷಕರು