ಮಾಸ್ಕೋ: ಅಣ್ವಸ್ತ್ರಗಳ ಬಳಕೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Russian President Vladimir Putin) ಮಂಗಳವಾರ ಸುಗ್ರೀವಾಜ್ಞೆಯೊಂದಕ್ಕೆ ಸಹಿ ಹಾಕಿದ್ದಾರೆ. ಪರಮಾಣು ಶಸ್ತ್ರಾಸ್ತ್ರಗಳ ಬಳಕೆ ಮಿತಿಯನ್ನು ವಿಸ್ತರಿಸುವ ಮೂಲಕ ರಷ್ಯಾ ಪಶ್ಚಿಮಾತ್ಯ ರಾಷ್ಟ್ರಗಳು ಮತ್ತು ಉಕ್ರೇನ್‌ಗೆ ಸ್ಪಷ್ಟ ಸಂದೇಶವೊಂದನ್ನು ರವಾನಿಸಿದೆ(Russia-Ukraine War).
21ನೇ ಶತಮಾನದ ಭಯಾನಕ ಯುದ್ಧ ಎಂದೇ ಕರೆಯಲ್ಪಡುವ ರಷ್ಯಾ-ಉಕ್ರೇನ್ ಯುದ್ಧಕ್ಕೆ ಇಂದು ಸಾವಿರ ದಿನ. ಎರಡನೇ ಮಹಾಯುದ್ಧದ ಬಳಿಕ ಇಂತಹದೊಂದು ಸಮರವನ್ನು ಯುರೋಪ್ ದೇಶಗಳು ಇದೇ ಮೊದಲ ಬಾರಿ ಕಂಡಿವೆ. ಒಂದಷ್ಟು ತಿಂಗಳುಗಳಲ್ಲಿ ಈ ಯುದ್ಧ ಮುಗಿದು ಹೋಗಬಹುದು. ಶಾಂತಿ ಸ್ಥಾಪನೆ ಆಗಬಹುದು ಎಂದೇ ಎಲ್ಲರೂ ನಂಬಿದ್ದರು. ಉಭಯ ರಾಷ್ಟ್ರಗಳ ನಡುವೆ ತಲೆದೋರಿರುವ ಯುದ್ಧೋನ್ಮಾದ ತಿಳಿಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಇನ್ನು ನಿನ್ನೆಯಷ್ಟೇ ಅಮೆರಿಕ ನಿರ್ಗಮಿತ ಅಧ್ಯಕ್ಷ ಜೋ ಬೈಡೆನ್ ಉಕ್ರೇನ್ ಮೇಲಿನ ಶಸ್ತ್ರಾಸ್ತ್ರ ನಿರ್ಬಂಧವನ್ನು ತೆಗೆದುಹಾಕಿ ಆದೇಶ ಹೊರಡಿಸಿದ್ದಾರೆ. ಇದರ ಬೆನ್ನಲ್ಲೇ ರಷ್ಯಾ ಈ ಮಹತ್ವದ ಸುಗ್ರೀವಾಜ್ಞೆಗೆ ಸಹಿ ಹಾಕಿದೆ. ಆ ಮೂಲಕ ಪರಮಾಣು ಶಸ್ತ್ರಾಸ್ತ್ರ ಬಳಕೆ ಮಿತಿ ವಿಸ್ತರಣೆಗೆ ಮಹತ್ವದ ನಿರ್ಧಾರಕ್ಕೆ ಬಂದಿದೆ.
ಈ ಮಹಾಯುದ್ಧದಲ್ಲಿ ಉಕ್ರೇನ್ ತನ್ನದೆಲ್ಲವನ್ನೂ ಬಹುತೇಕ ಕಳೆದುಕೊಂಡಿದೆ. ಎಲ್ಲಾ ಮಹಾನಗರಗಳು, ಪಟ್ಟಣಗಳು ಹಳ್ಳಿಗಳು ನೆಲಸಮಗೊಂಡಿವೆ. ಸಾಕಷ್ಟು ಪ್ರಾಣಹಾನಿಗಳು, ಆಸ್ತಿ ನಾಶಗಳು ಎಲ್ಲವೂ ಇಂದಿಗೂ ಕೂಡ ಜಾರಿಯಲ್ಲಿವೆ. ಇದು ಮುಗಿಯದ ಯುದ್ಧವೆಂದೇ ಹೆಸರು ಪಡೆದಿದೆ. ಈ ಒಂದು ಯುದ್ಧದಲ್ಲಿ ಉಕ್ರೇನ್ ತನ್ನ 80 ಸಾವಿರ ಸೈನಿಕರನ್ನು ಕಳೆದುಕೊಂಡಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. 80 ಸಾವಿರ ಸೈನಿಕರು ಮರಣವನ್ನಪ್ಪಿದ್ದರೆ 4 ಲಕ್ಷಕ್ಕೂ ಅಧಿಕ ಸೈನಿಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇತ್ತ ಕಡೆ ರಷ್ಯಾದಲ್ಲಿಯೂ ಕೂಡ ಹತ್ತಿರ ಹತ್ತಿರ 2 ಲಕ್ಷ ಜನ ಸೈನಿಕರು ಮೃತಪಟ್ಟಿರುವ ವರದಿಯಾಗಿದ್ದು ಸುಮಾರು 4 ಲಕ್ಷಕ್ಕೂ ಅಧಿಕ ಸೈನಿಕರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ನಿನ್ನೆಯಷ್ಟೇ ಅಮೆರಿಕದ ಶಸ್ತ್ರಾಸ್ತ್ರಗಳನ್ನು ರಷ್ಯಾದ ಭೌಗೋಳಿಕ ಪ್ರದೇಶವನ್ನು ಗುರಿಯಾಗಿಸಿ ಬಳಸುವುದಕ್ಕೆ ಸಂಬಂಧಿಸಿದಂತೆ ಉಕ್ರೇನ್‌ನ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಿ ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡೆನ್(Joe Biden) ಆದೇಶ ಹೊರಡಿಸಿದ್ದಾರೆ. ಮೂಲಗಳ ಪ್ರಕಾರ, ಬೈಡೆನ್ ಸರ್ಕಾರ ಉಕ್ರೇನ್ ಮೇಲಿನ ಶಸ್ತ್ರಾಸ್ತ್ರ ನಿರ್ಬಂಧವನ್ನು ತೆರವುಗೊಳಿಸಿದೆ. ಆಮೂಲಕ ಸದ್ಯ ಶಾಂತವಾಗಿರುವ ರಷ್ಯಾ-ಉಕ್ರೇನ್ ಯುದ್ಧ ಮತ್ತೆ ಉಲ್ಬಣಗೊಳ್ಳುವ ಭೀತಿ ಎದುರಾಗಿದೆ.
ಇನ್ನು ಬೈಡೆನ್ ಸರ್ಕಾರದ ಈ ಮಹತ್ವದ ನಿರ್ಧಾರದಿಂದಾಗಿ ಮುಂಬರುವ ದಿನಗಳಲ್ಲಿ ಉಕ್ರೇನ್ ತನ್ನ ಮೊದಲ ದೀರ್ಘ-ಶ್ರೇಣಿಯ ದಾಳಿಯನ್ನು ನಡೆಸಲು ಯೋಜನೆ ರೂಪಿಸಿದೆ ಎನ್ನಲಾಗಿದೆ. ಇನ್ನು ಈ ಬಗ್ಗೆ ಶ್ವೇತಭವನ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ನೂತನ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜ.20ಕ್ಕೆ ಅಧಿಕಾರ ಸ್ವೀಕರಿಸುತ್ತಿದ್ದು, ಇದಕ್ಕೆ ಎರಡು ತಿಂಗಳು ಮುನ್ನವೇ ಬೈಡೆನ್ ಸರ್ಕಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡಿರುವುದು ಅಚ್ಚರಿ ಮೂಡಿಸಿದೆ. ಅದೂ ಅಲ್ಲದೇ ಕೆಲವಿ ದಿನಗಳ ಹಿಂದೆಯಷ್ಟೇ ಶಸ್ತ್ರಾಸ್ತ್ರ ನಿರ್ಬಂಧ ತೆರವುಗೊಳಿಸುವಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅಮೆರಿಕಕ್ಕೆ ಮನವಿ ಮಾಡಿದ್ದರು.
ಈ ಸುದ್ದಿಯನ್ನೂ ಓದಿ: ಉಕ್ರೇನ್‌ನಿಂದ ಭಾರತಕ್ಕೆ ಬಂದಿಳಿದ 241 ಭಾರತೀಯರು