Wednesday, 14th May 2025

ಲಾಕ್‌ಡೌನ್‌ ಬಳಿಕ ಬಾಂಗ್ಲಾ ಪ್ರವಾಸ ಕೈಗೊಂಡ ಪ್ರಧಾನಿ ಮೋದಿ

ಢಾಕಾ: ದೇಶಾದ್ಯಂತ ಮಹಾಮಾರಿ ಕರೊನಾ ಲಾಕ್​ಡೌನ್​ ಘೋಷಿಸಿದ ಒಂದು ವರ್ಷದ ಬಳಿಕ ಪ್ರಧಾನಿ ಮೋದಿ ಅವರು ತಮ್ಮ ಮೊದಲ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಇಂದಿನಿಂದ ಎರಡು ದಿನಗಳ ಕಾಲ ಪ್ರಧಾನಿ ಬಾಂಗ್ಲಾದೇಶ ಪ್ರವಾಸದಲ್ಲಿರಲಿದ್ದಾರೆ.

ಪಾಕಿಸ್ತಾನದಿಂದ ಬಾಂಗ್ಲಾದೇಶ ವಿಮೋಚನೆಗೊಂದ 50 ವರ್ಷಗಳ ಸಂಭ್ರಮಾಚರಣೆ ಮತ್ತು ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ಇಷ್ಟೇ ಅಲ್ಲದೆ, ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾಗಿ 50 ವರ್ಷ ಪೂರೈಸಿದ ಸಂಭ್ರಮವು ಸಹ ನಡೆಯಲಿದೆ.

ಪ್ರಧಾನಿ ಮೋದಿ, ಕೋವಿಡ್ 19 ಸಂಕಷ್ಟದ ನಂತರದಲ್ಲಿ ಕೈಗೊಳ್ಳುತ್ತಿರುವ ಮೊದಲ ವಿದೇಶ ಪ್ರವಾಸ ಇದು. ನಮ್ಮ ಪ್ರೀತಿಯ ನೆರೆಯ ರಾಷ್ಟ್ರದ ಜತೆಗೆ ನಮಗೆ ಆಳವಾದ ಸಾಂಸ್ಕೃತಿಕ, ಭಾಷಾ ಮತ್ತು ಪರಂಪರೆಯ ಬಾಂಧವ್ಯವಿದೆ. ಬಂಗಬಂಧುವಿನ ಸಮಾಧಿಗೆ ತೆರಳಿ ಗೌರವ ಸಲ್ಲಿಸುವುದಕ್ಕೆ, ಅವರ ನೆನಪುಗಳನ್ನು ಸ್ಮರಿಸುವುದಕ್ಕೆ ಎದುರುನೋಡುತ್ತಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಪುರಾತನ ಶಕ್ತಿಪೀಠಗಳಲ್ಲಿ ಒಂದಾದ ಜಶೋರೇಶ್ವರಿ ಕಾಳಿ ದೇವಸ್ಥಾನಕ್ಕೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವೆ. ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಗಮನಾರ್ಹ ಚರ್ಚೆಗಳಲ್ಲೂ ಭಾಗಿಯಾಗುತ್ತೇನೆ ಎಂದು ಮೋದಿ ಹೇಳಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily

Leave a Reply

Your email address will not be published. Required fields are marked *