Sunday, 11th May 2025

New Orleans Attack: ಹೊಸ ವರ್ಷದಂದೇ 15 ಬಲಿ ಪಡೆದ ಶಮ್ಸುದ್-ದಿನ್ ಜಬ್ಬಾರ್ ಯಾರು? ಈತನ ಹಿನ್ನಲೆಯೇನು?

Terror Attack

ವಾಷಿಂಗ್ಟನ್‌ : ಅಮೆರಿಕದ (America) ನ್ಯೂ ಓರ್ಲಿಯನ್ಸ್‌ನ (New Orleans) ಬೌರ್ಬನ್ ಸ್ಟ್ರೀಟ್‌ನಲ್ಲಿ ಹೊಸ ವರ್ಷದ ಸಂಭ್ರಮದಲ್ಲಿರುವವರ ಮೇಲೆ ಉದ್ದೇಶಪೂರ್ವಕವಾಗಿ ಚಾಲಕನೊಬ್ಬ ಟ್ರಕ್‌ ಹರಿಸಿದ ಪರಿಣಾಮ ಸಾವಿನ ಸಂಖ್ಯೆ 15 ಕ್ಕೇರಿದೆ. ಹಲವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಯನ್ನು ಅಮೆರಿಕ ಪ್ರಜೆ ಶಮ್ಸುದ್-ದಿನ್ ಜಬ್ಬಾರ್ ಎಂದು ಗುರುತಿಸಲಾಗಿದ್ದು, ಆತ ಟೆಕ್ಸಾಸ್‌ನ ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈ ಹಿಂದೆ ಆತ ಅಮೆರಿಕದ ಮಿಲಿಟರಿಯಲ್ಲಿ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ(New Orleans Attack).

ಶಂಕಿತ ಆರೋಪಿ ಜಬ್ಬಾರ್ 2007 ರಿಂದ 2015 ರವರೆಗೆ ಮಾನವ ಸಂಪನ್ಮೂಲ ತಜ್ಞ ಮತ್ತು ಐಟಿ ತಜ್ಞರಾಗಿ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ. ನಂತರ 2020 ರವರೆಗೆ ಸೇನಾ ಮೀಸಲು ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದ ಎಂದು ತಿಳಿದು ಬಂದಿದೆ. 2009 ರಿಂದ ಜನವರಿ 2010 ರವರೆಗೆ ಅಫ್ಘಾನಿಸ್ತಾನದಲ್ಲಿ ಶಮ್ಸುದ್-ದಿನ್ ಜಬ್ಬಾರ್ ಸೇವೆ ಸಲ್ಲಿಸಿದ್ದು, ಸೇವೆಯ ಕೊನೆಯಲ್ಲಿ ಸ್ಟಾಫ್ ಸಾರ್ಜೆಂಟ್ ಹುದ್ದೆಯನ್ನು ಅಲಂಕರಿಸಿದ್ದು, ಗೌರವಪೂರ್ವಕವಾಗಿ ಆತನನ್ನು ಸೇನೆಯಿಂದ ಬಿಡುಗಡೆಗೊಳಿಸಲಾಗಿತ್ತು ಎಂದು ಅಮೆರಿಕ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ರಿಯಲ್‌ ಎಸ್ಟೇಟ್‌ ಏಜೆಂಟ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಜಬ್ಬಾರ್ ನಾಲ್ಕು ವರ್ಷಗಳ ಹಿಂದೆ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಮಾತನಾಡಿ ತನ್ನನ್ನು ತಾನು ಉಗ್ರ ಸಮಾಲೋಚಕ ಎಂದು ತಿಳಿಸಿದ್ದ. ಪೊಲೀಸರು ತಿಳಿಸಿದ ಮಾಹಿತಿ ಪ್ರಕಾರ ಈ ಹಿಂದೆ ಜಬ್ಬಾರ್ ಮೇಲೆ ಎರಡು ಆರೋಪಗಳಿದ್ದವು. 2002 ರಲ್ಲಿ ಕಳ್ಳತನಕ್ಕಾಗಿ ಮತ್ತು ಇನ್ನೊಂದು 2005 ಲ್ಲಿ ಅಮಾನ್ಯ ಪರವಾನಗಿಯೊಂದಿಗೆ ಚಾಲನೆ ಮಾಡಿದ್ದಕ್ಕಾಗಿ ಈತನ ಮೇಲೆ ಕೇಸ್‌ ದಾಖಲಾಗಿತ್ತು.

ಸ್ಥಳೀಯ ಪತ್ರಿಕೆ ಒಂದು ಈತನ ಬಗ್ಗೆ ವರದಿ ಮಾಡಿದ್ದು, ಆತ ಎರಡು ವಿವಾಹವಾಗಿದ್ದು, 2022 ರಲ್ಲಿ ಎರಡನೇ ಹೆಂಡತಿಯಿಂದ ಕೂಡ ವಿಚ್ಚೇದನ ಪಡೆದುಕೊಂಡಿದ್ದ. ತನ್ನ ಹೆಂಡತಿಯ ವಕೀಲರಿಗೆ ತಾನು ಎದುರಿಸುತ್ತಿರುವ ಆರ್ಥಿಕ ಸಮಸ್ಯೆಯ ಬಗ್ಗೆ ಇಮೇಲ್‌ ಮಾಡಿದ್ದ. ಅದರಲ್ಲಿ ತಾನು ಈಗ ಸಾಕಷ್ಟು ಪರಿಹಾರ ನೀಡಲು ಸಾಧ್ಯವಿಲ್ಲ. ತನ್ನ ರಿಯಲ್‌ ಎಸ್ಟೆಟ್‌ ಕಂಪನಿ ಸಾಲದಲ್ಲಿ ನಡೆಯುತ್ತಿದೆ. ಸಾಲ ಮರುಪಾವತಿಸಲು ತಾನು ಹೆಣಗಾಡುತ್ತಿದ್ದೇನೆ ಎಂದು ಹೇಳಿದ್ದಾನೆ.

ರಾಜ್ಯ ಪೊಲೀಸ್ ಬುಲೆಟಿನ್ ಪ್ರಕಾರ ಶಂಕಿತನ ವಾಹನದಲ್ಲಿ ಬಂದೂಕುಗಳು ಮತ್ತು ಪೈಪ್ ಬಾಂಬ್‌ಗಳು ಪತ್ತೆಯಾಗಿವೆ. ಸಾಧನಗಳನ್ನು ಕೂಲರ್‌ಗಳಲ್ಲಿ ಮರೆಮಾಡಲಾಗಿದೆ. ದಾಳಿಗೆ ಬಳಸಿದ ವಾಹನದಲ್ಲಿ ಗುಂಪಿಗೆ ಸಂಬಂಧಿಸಿದ ಕಪ್ಪು ಬಾವುಟ ಕೂಡ ಪತ್ತೆಯಾಗಿದೆ ಎಂದು ಎಫ್‌ಬಿಐ ತಿಳಿಸಿದೆ. 

ಜೋ ಬೈಡನ್‌ ಹೇಳಿದ್ದೇನು?

ಈ ಕೃತ್ಯವನ್ನು ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡನ್‌ ಖಂಡಿಸಿದ್ದಾರೆ. ಶಂಕಿತ ಆರೋಪಿ ಉಗ್ರ ಸಂಘಟನೆ ಐಸಿಸ್‌ನಿಂದ ಪ್ರೇರೇಪಿತನಾಗಿದ್ದಾನೆ ಎಂದು ಅವರು ತಿಳಿಸಿದ್ದಾರೆ. ದಾಳಿ ಆಗುವ ಒಂದು ಗಂಟೆ ಮೊದಲು ಆರೋಪಿ ಐಸಿಸ್‌ ಬಗ್ಗೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಎಂಬ ಮಾಹಿತಿಯನ್ನು ಅವರು ಬಹಿರಂಗಗೊಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ : THAAD: ಇಸ್ರೇಲ್‌ನಲ್ಲಿ ನಿಲ್ಲದ ಕದನ… ಹೌತಿ ಉಗ್ರರ ಪುಂಡಾಟಕ್ಕೆ ಅಮೆರಿಕ ನಿರ್ಮಿತ THAAD ಸಹಾಯದಿಂದ ತಕ್ಕ ಉತ್ತರ