Saturday, 10th May 2025

Justin Trudeau: ರಾಜೀನಾಮೆ ನೀಡಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ

Justin Trudeau

ಒಟ್ಟಾವ: ಕೆನಡಾದ ಪ್ರಧಾನಿ ಹುದ್ದೆಗೆ ಮತ್ತು ಲಿಬರಲ್ ಪಕ್ಷ (Liberal Party)ದ ನಾಯಕ ಸ್ಥಾನಕ್ಕೆ ಜಸ್ಟಿನ್ ಟ್ರುಡೊ (Justin Trudeau) ಸೋಮವಾರ (ಜ. 6) ರಾಜೀನಾಮೆ ನೀಡಿದ್ದಾರೆ. 10 ವರ್ಷಗಳ ಕನ್ಸರ್ವೇಟಿವ್ ಪಕ್ಷದ ಆಡಳಿತದ ನಂತರ ಟ್ರುಡೊ 2015ರಲ್ಲಿ ಅಧಿಕಾರಕ್ಕೆ ಬಂದಿದ್ದರು. ಇದೀಗ ಅವರ 1 ದಶಕದ ಆಳ್ವಿಕೆ ಅಂತ್ಯಗೊಂಡಿದೆ. ಲಿಬರಲ್ ಪಕ್ಷ ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ ಟ್ರುಡೊ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

“ರಾಷ್ಟ್ರವ್ಯಾಪಿ ಸ್ಪರ್ಧಾತ್ಮಕ ಪ್ರಕ್ರಿಯೆಯ ಮೂಲಕ ಪಕ್ಷವು ತನ್ನ ಮುಂದಿನ ನಾಯಕನನ್ನು ಆಯ್ಕೆ ಮಾಡಲಿದೆʼʼ ಎಂದು ಜಸ್ಟಿನ್ ಟ್ರುಡೊ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಕುಸಿದ ಜನಪ್ರಿಯತೆ

53 ವರ್ಷದ ಟ್ರುಡೊ ಅವರು 2015ರ ನವೆಂಬರ್‌ನಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು ಮತ್ತು 2 ಬಾರಿ ಮರು ಚುನಾವಣೆಯಲ್ಲಿ ಗೆದ್ದಿದ್ದಾರೆ. ಕೆನಡಾದ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿಗಳಲ್ಲಿ ಇವರೂ ಒಬ್ಬರು. 2 ವರ್ಷಗಳಿಂದ ಕಂಡು ಬಂದಿರುವ ಬೆಲೆ ಏರಿಕೆ ಮತ್ತು ವಸತಿ ವ್ಯವಸ್ಥೆಗಳ ಕೊರತೆಯಿಂದಾಗಿ ಸಾರ್ವಜನಿಕರು ಅಸಮಾಧಾನಗೊಂಡಿದ್ದು, ಇದರಿಂದ ಅವರ ಅವರ ಜನಪ್ರಿಯತೆ ಕುಸಿಯಲಾರಂಭಿಸಿದೆ. ಅಲ್ಲದೆ ತಮ್ಮ ಪಕ್ಷದೊಳಗೆ ಅಸಮಾಧಾನ, ಭಿನ್ನಮತ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಅವರು ರಾಜೀನಾಮೆಯ ಸಲ್ಲಿಸಿದ್ದಾರೆ.

ಅಕ್ಟೋಬರ್ ಅಂತ್ಯದ ವೇಳೆಗೆ ನಡೆಯಲಿರುವ ಚುನಾವಣೆಯಲ್ಲಿ ಲಿಬರಲ್‌ ಪಕ್ಷವು ಪ್ರತಿಪಕ್ಷ ಕನ್ಸರ್ವೇಟಿವ್ಸ್ ವಿರುದ್ಧ ಸೋಲಲಿದೆ ಎಂದು ಈಗಾಗಲೇ ಸಮೀಕ್ಷೆಗಳು ತಿಳಿಸಿವೆ. ಅಮೆರಿಕದಲ್ಲಿ ವಲಸಿಗರು ಮತ್ತು ಮಾದಕ ವಸ್ತುಗಳ ಹರಿವನ್ನು ಸರ್ಕಾರ ತಡೆಯದಿದ್ದರೆ ಕೆನಡಾದ ಎಲ್ಲ ಸರಕುಗಳ ಮೇಲೆ ಶೇ. 25ರಷ್ಟು ಸುಂಕವನ್ನು ವಿಧಿಸುವುದಾಗಿ ಅಲ್ಲಿನ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ ಬೆನ್ನಲ್ಲೇ ಟ್ರುಡೊ ರಾಜೀನಾಮೆ ನೀಡಿದ್ದಾರೆ.

ಕಳೆದ ತಿಂಗಳು ರಾಜೀನಾಮೆ ನೀಡಿದ್ದ ಉಪ ಪ್ರಧಾನಿ

ಕಳೆದ ತಿಂಗಳು ಉಪ ಪ್ರಧಾನಿ ಕ್ರಿಸ್ಟಿಯಾ ಫ್ರೀಲ್ಯಾಂಡ್ (Chrystia Freeland) ಅನಿರೀಕ್ಷಿತವಾಗಿ ರಾಜೀನಾಮೆ ನೀಡಿದ್ದರು. ಪ್ರಧಾನಿ ಜಸ್ಟಿನ್ ಟ್ರುಡೊ ಅವರೊಂದಿಗಿನ ಭಿನ್ನಾಭಿಪ್ರಾಯವನ್ನು ಉಲ್ಲೇಖಿಸಿ ಅವರು ರಾಜೀನಾಮೆ ಸಲ್ಲಿಸಿದ್ದರು. ಉಪಪ್ರಧಾನಿ ಹುದ್ದೆಯ ಜತೆಗೆ ಹಣಕಾಸು ಖಾತೆಯನ್ನೂ ಅವರು ಹೊಂದಿದ್ದರು. ಸಚಿವ ಸಂಪುಟದಲ್ಲಿ ಪ್ರಧಾನಿ ಟ್ರುಡೊ ಅವರ ನಿಕಟ ಸಹೋದ್ಯೋಗಿಗಳಲ್ಲಿ ಒಬ್ಬರಾಗಿದ್ದ ಫ್ರೀಲ್ಯಾಂಡ್ ಅವರು ಸಂಸತ್ತಿನಲ್ಲಿ ದೇಶದ ಆರ್ಥಿಕ ಯೋಜನೆಯನ್ನು ಬಿಡುಗಡೆ ಮಾಡುವ ಕೆಲವೇ ಗಂಟೆಗಳ ಮೊದಲು ತಮ್ಮ ರಾಜೀನಾಮೆಯನ್ನು ಘೋಷಿಸಿದ್ದರು. 56ರ ಹರೆಯದ ಫ್ರೀಲ್ಯಾಂಡ್ ಈ ಹಿಂದೆ ವಿದೇಶಾಂಗ ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದರು. ಅಮೆರಿಕಾ ಮತ್ತು ಮೆಕ್ಸಿಕೊದೊಂದಿಗೆ ಮುಕ್ತ ವ್ಯಾಪಾರ ಮಾತುಕತೆಗಳನ್ನು ನಡೆಸಿದ್ದರು.

ಯಾರಾಗ್ತಾರೆ ಮುಂದಿನ ಪ್ರಧಾನಿ ?

ಫ್ರೀಲ್ಯಾಂಡ್, ಲೆಬ್ಲಾಂಕ್, ಕೆನಡಾದ ಮಾಜಿ ವಸತಿ ಸಚಿವ ಸೀನ್ ಫ್ರೇಸರ್, ವಿದೇಶಾಂಗ ಸಚಿವೆ ಮೆಲಾನಿ ಜೋಲಿ, ನಾವೀನ್ಯತೆ ಸಚಿವ ಫ್ರಾಂಕೋಯಿಸ್-ಫಿಲಿಪ್ ಶಾಂಪೇನ್, ಸಾರಿಗೆ ಸಚಿವೆ ಅನಿತಾ ಆನಂದ್, ಮಾಜಿ ಸೆಂಟ್ರಲ್ ಬ್ಯಾಂಕರ್ ಮಾರ್ಕ್ ಕಾರ್ನಿ ಮತ್ತು ಬ್ರಿಟಿಷ್ ಕೊಲಂಬಿಯಾದ ಮಾಜಿ ಪ್ರೀಮಿಯರ್ ಕ್ರಿಸ್ಟಿ ಕ್ಲಾರ್ಕ್ ಪ್ರಧಾನಿ ರೇಸ್‌ನಲ್ಲಿದ್ದಾರೆ.

ಈ ಸುದ್ದಿಯನ್ನೂ ಓದಿ : Justin Trudeau: ಕೆನಡಾ ಪ್ರಧಾನಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸಜ್ಜಾದ ಎನ್‌ಡಿಪಿ; ರಾಜಿನಾಮೆ ನೀಡ್ತಾರಾ ಟ್ರುಡೋ ?

Leave a Reply

Your email address will not be published. Required fields are marked *