Monday, 12th May 2025

Jimmy Carter: ಅಮೆರಿಕ ಮಾಜಿ ‍ಅಧ್ಯಕ್ಷ ಶತಾಯುಷಿ ಜಿಮ್ಮಿ ಕಾರ್ಟರ್‌ ವಿಧಿವಶ

US president

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ನೊಬೆಲ್ ಶಾಂತಿ ಪ್ರಶಸ್ತಿ(Nobel Prize) ವಿಜೇತ ಶತಾಯುಷಿ ಜಿಮ್ಮಿ ಕಾರ್ಟರ್(Jimmy Carter) ಇಂದು ವಿಧಿವಶರಾಗಿದ್ದಾರೆ. ಜಿಮ್ಮಿ ಕಾರ್ಟರ್ ಮೆಲನೋಮಾ ಎಂಬ ಚರ್ಮದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ. ಅಕ್ಟೋಬರ್ 1, 1924 ರಂದು ಜಾರ್ಜಿಯಾದಲ್ಲಿ ಜನಿಸಿದ್ದ ಜಿಮ್ಮಿ ಕಾರ್ಟರ್ ಅಮೆರಿಕದ 39ನೇ ಅಧ್ಯಕ್ಷರಾಗಿದ್ದರು.

ಈ ಬಗ್ಗೆ ಜಿಮ್ಮಿ ಕಾರ್ಟರ್‌ ಪುತ್ರ ಚಿಪ್ ಕಾರ್ಟರ್, ಅವರನ್ನು “ಅವರು ನನಗೆ ಮಾತ್ರವಲ್ಲದೆ ಶಾಂತಿ, ಮಾನವ ಹಕ್ಕುಗಳು ಮತ್ತು ನಿಸ್ವಾರ್ಥ ಪ್ರೀತಿಯಲ್ಲಿ ನಂಬುವ ಪ್ರತಿಯೊಬ್ಬರಿಗೂ ಅವರೊಬ್ಬ ಹೀರೋ” ಎಂದಿದ್ದಾರೆ.
ಅಟ್ಲಾಂಟಾ ಮತ್ತು ವಾಷಿಂಗ್ಟನ್‌ಲ್ಲಿ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುತ್ತದೆ ಎಂದಿದ್ದಾರೆ. ಇನ್ನು ಜಿಮ್ಮಿ ಕಾರ್ಟರ್‌ ಅವರ ಅಂತ್ಯಕ್ರಿಯೆ ಐದು ದಿನಗಳ ನಂತರ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಗಣ್ಯರಿಂದ ಸಂತಾಪ

ಜಿಮ್ಮಿ ಕಾರ್ಟರ್‌ ಅವರ ನಿಧನಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಚುನಾಯಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಬರಾಕ್‌ ಒಬಾಮಾ ಸೇರಿದಂತೆ ದೇಶ-ವಿದೇಶಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಜೇಮ್ಸ್ ಅರ್ಲ್ ಕಾರ್ಟರ್ ಜೂನಿಯರ್ ಅಕ್ಟೋಬರ್ 1, 1924 ರಂದು ಪ್ಲೇನ್ಸ್‌ನಲ್ಲಿ ಜನಿಸಿದರು. ಅವರ ತಂದೆ ಕೃಷಿಕರಾಗಿದ್ದರು. ಅವರು ಪುಸ್ತಕಗಳು ಮತ್ತು ಅವರ ಬ್ಯಾಪ್ಟಿಸ್ಟ್ ಧರ್ಮವನ್ನು ಪ್ರೀತಿಸುತ್ತಿದ್ದರು. ಅವರು ಯುಎಸ್ ನೇವಲ್ ಅಕಾಡೆಮಿಯಲ್ಲಿ ಪರಮಾಣು ವಿಜ್ಞಾನವನ್ನು ಅಧ್ಯಯನ ಮಾಡಿದರು ಮತ್ತು 1946 ರಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಪದವಿ ಪಡೆದರು.

ಅದೇ ವರ್ಷ, ಅವರು ರೊಸಾಲಿನ್ ಸ್ಮಿತ್ ಅವರನ್ನು ವಿವಾಹವಾದರು. ಅವರ ಪತ್ನಿ ನವೆಂಬರ್ 19, 2023 ರಂದು 96 ನೇ ವಯಸ್ಸಿನಲ್ಲಿ ನಿಧನರಾದರು. ಅವರಿಗೆ ಮಕ್ಕಳಾದ ಜ್ಯಾಕ್, ಚಿಪ್, ಜೆಫ್ ಮತ್ತು ಆಮಿ ಜೊತೆಗೆ, ಕಾರ್ಟರ್ 11 ಮೊಮ್ಮಕ್ಕಳು ಮತ್ತು 14 ಮರಿಮಕ್ಕಳಿದ್ದಾರೆ.

ಕಾರ್ಟರ್‌ ರಾಜಕೀಯ ಜೀವನ

ಕಾರ್ಟರ್ ನಂತರ 1962 ರಲ್ಲಿ ಜಾರ್ಜಿಯಾ ಸೆನೆಟ್‌ಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಸೆನೆಟ್‌ ಆಗಿ ಅನೇಕ ಸುಧಾರಣೆಗಳನ್ನು ತರುವ ಮೂಲಕ ಬಹಳ ಸದ್ದು ಮಾಡಿದ್ದರು. ಕಾರ್ಟರ್ ರಿಪಬ್ಲಿಕನ್ ಜೆರಾಲ್ಡ್ ಫೋರ್ಡ್ ಅವರನ್ನು ಸೋಲಿಸುವ ಮೂಲಕ ಅಮೆರಿಕ ಅಧ್ಯಕ್ಷರಾಗಿ ಜನವರಿ 20, 1977ರಂದು ಪ್ರಮಾಣ ವಚನ ಸ್ವೀಕರಿಸಿದರು.

ಅಂತರರಾಷ್ಟ್ರೀಯ ಸಂಘರ್ಷಗಳಿಗೆ ಶಾಂತಿಯುತ ಪರಿಹಾರಗಳನ್ನು ಹುಡುಕಲು, ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳನ್ನು ಮುನ್ನಡೆಸಲು ಮತ್ತು ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಅವರ ದಶಕಗಳ ನಿರಂತರ ಪ್ರಯತ್ನಕ್ಕಾಗಿ ಕಾರ್ಟರ್ ಅವರಿಗೆ 2002 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಯಿತು.

ಈ ಸುದ್ದಿಯನ್ನೂ ಓದಿ:US elections : ಅಮೆರಿಕದಲ್ಲಿ ಅರ್ಲಿ ವೋಟಿಂಗ್ ಪ್ರಾರಂಭ