Sunday, 11th May 2025

Israeli Strikes: ಲೆಬನಾನ್‌ ಮೇಲೆ ಮತ್ತೆ ಇಸ್ರೇಲ್‌ ದಾಳಿ; 22 ಮಂದಿ ಸಾವು

Israeli Strikes

ಬೈರುತ್‌: ಇಸ್ರೇಲ್‌ ಸೇನೆ ಮತ್ತೆ ಲೆಬನಾನ್‌ ಮೇಲೆ ವೈಮಾನಿಕ ದಾಳಿ ನಡೆಸಿದ್ದು, 22 ಮಂದಿ ಸಾವನ್ನಪ್ಪಿ 117 ಜನರು ಗಾಯಗೊಂಡಿದ್ದಾರೆ. ಲೆಬನಾನ್‌ ರಾಜಧಾನಿ ಬೈರುತ್​ನ ಮೇಲೆ ನಡೆದ ಈ ದಾಳಿಯಲ್ಲಿ ಅಪಾರ ನಾಶ-ನಷ್ಟ ಸಂಭವಿಸಿದೆ. ʼʼ22 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವು ಮಂದಿ ಗಾಯಗೊಂಡಿದ್ದಾರೆʼʼ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ತಿಳಿಸಿದೆ (Israeli Strikes).

ದಾಳಿಯಲ್ಲಿ ರಾಸ್ ಅಲ್-ನಬಾ ಪ್ರದೇಶ, ಬುರ್ಜ್ ಅಬಿ ಹೈದರ್ ಪ್ರದೇಶ ಮತ್ತು 8 ಅಂತಸ್ತಿನ ಕಟ್ಟಡ ನೆಲಸಮಗೊಂಡಿದೆ. ʼʼಕೇಂದ್ರ ಬೈರುತ್‌ನಲ್ಲಿ ನಡೆದ ವಾಯು ದಾಳಿಯು ಅತ್ಯಂತ ಭೀಕರವಾಗಿದೆ. ಏಕಕಾಲದಲ್ಲಿ ನೆರೆಹೊರೆಯ ಎರಡು ವಸತಿ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದೆʼʼ ಎಂದು ಘಟನಾ ಸ್ಥಳದಲ್ಲಿದ್ದ ಛಾಯಾಗ್ರಾಹಕರೊಬ್ಬರು ತಿಳಿಸಿದ್ದಾರೆ. ಈ ದಾಳಿಯಿಂದ ಹೆಜ್ಬುಲ್ಲಾ ಗುಂಪಿನ ಉನ್ನತ ಭದ್ರತಾ ಅಧಿಕಾರಿ ವಫೀಕ್ ಸಫಾ ತಪ್ಪಿಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ದಾಳಿ ನಡೆದ ಯಾವುದೇ ಕಟ್ಟಡದಲ್ಲಿ ವಫೀಕ್ ಸಫಾ ಇರಲಿಲ್ಲ ಎಂದು ಹೆಜ್ಬುಲ್ಲಾ ಹೇಳಿದೆ.

ಯುನಿಫೈಲ್ (UNIFIL) ಎಂದು ಕರೆಯಲ್ಪಡುವ ಲೆಬನಾನ್‌ನಲ್ಲಿರುವ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಪಡೆಯು ತನ್ನ ಪ್ರಧಾನ ಕಚೇರಿಗಳ ಮೇಲೆ ಇಸ್ರೇಲ್ ಪಡೆಗಳು ಪದೇ ಪದೆ ದಾಳಿ ನಡೆಸುತ್ತಿವೆ ಎಂದು ಆರೋಪಿಸಿದೆ. ಲೆಬನಾನ್‌ನ ನಕೌರಾ ಪಟ್ಟಣದಲ್ಲಿರುವ ತಮ್ಮ ಪ್ರಧಾನ ಕಚೇರಿಯಲ್ಲಿನ ವೀಕ್ಷಣಾ ಗೋಪುರದ ಮೇಲೆ ಇಸ್ರೇಲ್‌ ಸೈನಿಕರು ನೇರವಾಗಿ ಗುಂಡು ಹಾರಿಸಿದ್ದಾರೆ ಮತ್ತು ವಾಹನಗಳು ಹಾಗೂ ಸಂವಹನ ವ್ಯವಸ್ಥೆಯನ್ನು ಹಾನಿಗೊಳಿಸಿದ್ದಾರೆ ಎಂದು ಅದು ಹೇಳಿದೆ. ಬಂಕರ್‌ನ ಪ್ರವೇಶದ್ವಾರದಲ್ಲಿ ಇಸ್ರೇಲ್‌ನ ಡ್ರೋನ್ ಹಾರುತ್ತಿರುವುದು ಕಂಡುಬಂದಿದೆ ಎಂದು ತಿಳಿಸಿದೆ.

ದಾಳಿಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಇಬ್ಬರು ಯುನಿಫೈಲ್‌ನ ಕಾರ್ಯಕರ್ತರು ಇಂಡೋನೇಷ್ಯಾ ಮೂಲದವರು ಎಂದು ಇಟಲಿಯ ವಿದೇಶಾಂಗ ಸಚಿವ ಆಂಟೋನಿಯೊ ತಜಾನಿ ತಿಳಿಸಿದ್ದಾರೆ. ಯುನಿಫೈಲ್‌ನಲ್ಲಿ ತನ್ನ 1,000 ಕಾರ್ಯಕರ್ತರನ್ನು ನಿಯೋಜಿಸಿರುವ ಇಟಲಿ, ಇಸ್ರೇಲ್ ದಕ್ಷಿಣ ಲೆಬನಾನ್‌ನಲ್ಲಿರುವ ಯುನಿಫೈಲ್ ನೆಲೆಯನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದೆ ಎಂದು ದೂರಿದೆ.

ನಕೌರಾದಲ್ಲಿರುವ ಯುನಿಫೈಲ್ ಪ್ರಧಾನ ಕಚೇರಿಯಲ್ಲಿನ ವೀಕ್ಷಣಾ ಗೋಪುರದ ಕಡೆಗೆ ಇಸ್ರೇಲ್‌ ಪಡೆ ನಡೆಸಿರುವ ದಾಳಿಯಿಂದ ಅಮೆರಿಕ ಸೇರಿದಂತೆ ಹಲವು ದೇಶಗಳು ಹಿನ್ನಡೆ ಅನುಭವಿಸಿವೆ. ಲೆಬನಾನ್‌ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳ 2 ನೆಲೆಗಳು ಮತ್ತು ಗೋಪುರದ ಮೇಲೆ ಇಸ್ರೇಲ್ ಪಡೆಗಳು ದಾಳಿ ನಡೆಸಿರುವುದು ತೀವ್ರ ಕಳವಳವನ್ನುಂಟು ಮಾಡಿದೆ ಎಂದು ಅಮೆರಿಕ ತಿಳಿಸಿದೆ. ದಕ್ಷಿಣ ಲೆಬನಾನ್‌ನಲ್ಲಿರುವ ವಿಶ್ವಸಂಸ್ಥೆಯ ನೆಲೆಯ ಮೇಲೆ ಗುರುವಾರ ಗುಂಡು ಹಾರಿಸಿದ್ದನ್ನು ಇಸ್ರೇಲ್ ಸೇನೆ ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಇಸ್ರೇಲ್‌ ಸೇನೆ ಸೆಪ್ಟೆಂಬರ್ 29ರಂದು ಬೈರುತ್‌ನ ಕೋಲಾ ಮತ್ತು ಅಕ್ಟೋಬರ್ 3ರಂದು ಬಚೌರಾವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಇಸ್ರೇಲ್‌ ಮತ್ತು ಗಾಜಾದ ಹಮಾಸ್‌ ಉಗ್ರ ಸಂಘಟನೆ ನಡುವಿನ ಸಂಘರ್ಷ ಆರಂಭಗೊಂಡು ಅಕ್ಟೋಬರ್‌ 7ಕ್ಕೆ 1 ವರ್ಷ ಕಳೆದಿದೆ. ಈ ಸಂಘರ್ಷವೀಗ ಗಾಜಾ ಪಟ್ಟಿಯನ್ನೂ ದಾಟಿ ನೆರೆಯ ಲೆಬನಾನ್‌, ಯೆಮೆನ್‌ನ ಹೌತಿ ಮತ್ತು ಇರಾನ್‌ವರೆಗೂ ಹಬ್ಬಿದೆ.

ಈ ಸುದ್ದಿಯನ್ನೂ ಓದಿ: Hashem Safieddine: ಹೆಜ್ಬುಲ್ಲಾ ಮುಖ್ಯಸ್ಥ ನಸ್ರಲ್ಲಾನ ಉತ್ತರಾಧಿಕಾರಿಯನ್ನೂ ಹೊಡೆದುರುಳಿಸಿದ ಇಸ್ರೇಲ್‌