ಲಾಸ್ ಏಂಜಲೀಸ್: ಅಮೆರಿಕದ ಟಿವಿ ನಿರೂಪಕ, ಸಂದರ್ಶಕ, ವಕ್ತಾರರಾಗಿ 5 ದಶಕಗಳಿಗೂ ಅಧಿಕ ಕಾಲ ಖ್ಯಾತನಾಮರನ್ನು ಸಂದರ್ಶಿಸಿದ ಲ್ಯಾರಿ ಕಿಂಗ್ ಎಂದೇ ಜನಪ್ರಿಯ ಲಾರೆನ್ಸ್ ಹಾರ್ವೆ ಜೈಗರ್ ಅವರು ನಿಧನರಾಗಿದ್ದಾರೆ.
ಲಾಸ್ ಏಂಜಲೀಸ್ನ ಸೆಡಾರ್ಸ್ ಸಿನಾಯಿ ಮೆಡಿಕಲ್ ಸೆಂಟರ್ ನಲ್ಲಿ 87 ವರ್ಷ ವಯಸ್ಸಿನ ಕಿಂಗ್ ನಿಧನರಾದರು. ಲ್ಯಾರಿ ಕಿಂಗ್ಸ್ ಸ್ಥಾಪಿಸಿದ ಸ್ಟುಡಿಯೋ, ನೆಟ್ವರ್ಕ್ ಒರಾ ಮೀಡಿಯಾ, ಕಿಂಗ್ ಅವರ ನಿಧನಕ್ಕೆ ಏನು ಕಾರಣ ಎಂಬುದನ್ನು ಸ್ಪಷ್ಟಪಡಿಸಿಲ್ಲ.
ಮಿಖಾಯಿಲ್ ಗೊರ್ಬಚೇವ್, ವ್ಲಾದಿಮಿರ್ ಪುಟಿನ್, ಯಾಸಿರ್ ಅರಾಫತ್, ದಲಾಯಿ ಲಾಮಾ, ಎಲಿಜಬೆತ್ ಟೇಲರ್, ಬರಾಕ್ ಒಬಾಮಾ, ಬಿಲ್ ಗೇಟ್ಸ್, ಲೇಡಿಗಾಗಾ ಸೇರಿದಂತೆ ರಾಜಕೀಯ, ಸಿನಿಮಾ ಸೆಲೆಬ್ರಿಟಿಗಳನ್ನು ಸಂದರ್ಶಿಸುತ್ತಿದ್ದ ಲ್ಯಾರಿ ಕಿಂಗ್ ಅವರು ಸುಮಾರು 50 ಸಾವಿರಕ್ಕೂ ಅಧಿಕ ಟಾಕ್ ಶೋ ಸಂದರ್ಶನ ನಡೆಸಿದ ದಾಖಲೆ ಹೊಂದಿದ್ದಾರೆ. ಹ್ಯಾರಿ ಕಿಂಗ್ ಲೈವ್ ಶೋ ವಿಶ್ವದೆಲ್ಲೆಡೆ ಜನಪ್ರಿಯವಾಗಿದೆ.
ಫ್ರಾಂಕ್ ಸಿನಾಟ್ರಾ ಕೊನೆ ಸಂದರ್ಶನ ಮಾಡಿದ್ದು ಕಿಂಗ್. ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಅಬ್ಬರ ಮಾತುಗಾರಿಕೆಯಿಲ್ಲದೆ ಕಿಂಗ್ ನಡೆಸುತ್ತಿದ್ದ ಟಾಕ್ ಶೋ ಎಲ್ಲರ ಮೆಚ್ಚುಗೆ ಗಳಿಸಿತ್ತು.