Sunday, 11th May 2025

Hindu Heritage Month: ಅಕ್ಟೋಬರ್‌ ತಿಂಗಳನ್ನು ಹಿಂದೂ ಪರಂಪರೆಯ ಮಾಸ ಎಂದು ಘೋಷಿಸಿದ ಆಸ್ಟ್ರೇಲಿಯಾ

Australia

ಕ್ಯಾನ್‌ಬೆರಾ: ಆಸ್ಟ್ರೇಲಿಯಾ(Australia)ವು ಅಕ್ಟೋಬರ್ ತಿಂಗಳನ್ನು(October) ಹಿಂದೂ ಪರಂಪರೆಯ ಮಾಸ(Hindu Heritage Month) ಎಂದು ಘೋಷಿಸಿದೆ. ಆ ಮೂಲಕ ದೇಶಾದ್ಯಂತ ಹಿಂದೂ ಸಂಸ್ಕೃತಿ ಮತ್ತು ಪರಂಪರೆಯನ್ನು ಪಸರಿಸುವ ಉದ್ದೇಶದಿಂದ ಈ ಮಹತ್ವದ ನಿರ್ಧಾರವನ್ನು ಆಸ್ಟ್ರೇಲಿಯಾ ಸರ್ಕಾರ ತೆಗೆದುಕೊಂಡಿದೆ. ನವರಾತ್ರಿ, ದೀಪಾವಳಿ ಮತ್ತು ಶರದ್‌ ಪೂರ್ಣಿಮಾ ಸೇರಿದಂತೆ ಅನೇಕ ಹಬ್ಬಗಳು ಆಚರಣೆಯಾಗುವ ಈ ಅಕ್ಟೋಬರ್‌ ತಿಂಗಳು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆ ಹೊಂದಿದೆ. ಹೀಗಾಗಿ ಈ ತಿಂಗಳನ್ನು ಹಿಂದೂ ಪರಂಪರೆಯ ಮಾಸ ಎಂದು ಘೋಷಿಸಿದ್ದಾರೆ.

ಈ ಘೋಷಣೆಯು ವಿವಿಧ ರಾಷ್ಟ್ರಗಳ ಸಂಸ್ಕೃತಿ ಪರಂಪರೆಗೆ ಆಸ್ಟ್ರೇಲಿಯಾ ಸರ್ಕಾರ ನೀಡುವ ಗೌರವ ಮತ್ತು ಬದ್ಧತೆಯನ್ನು ಸಂಕೇತಿಸುತ್ತದೆ ಮತ್ತು ರಾಷ್ಟ್ರದ ಸಾಮಾಜಿಕ ರಚನೆಗೆ ಹಿಂದೂ ಸಮುದಾಯದ ಕೊಡುಗೆಗಳನ್ನು ಗುರುತಿಸುತ್ತದೆ. ಈ ಆದೇಶದ ಜತೆಗೆ, ಆಸ್ಟ್ರೇಲಿಯಾವು ಹಿಂದೂ ತತ್ವಶಾಸ್ತ್ರ, ಮೌಲ್ಯಗಳು ಮತ್ತು ಆಚರಣೆಗಳ ಶ್ರೀಮಂತಿಕೆಯನ್ನು ದೇಶಾದ್ಯಂತ ಪಸರಿಸುವ ಉದ್ದೇಶ ಹೊಂದಿದೆ. ಪ್ರಪಂಚದ ಅತ್ಯಂತ ಹಳೆಯ ಧರ್ಮಗಳಲ್ಲಿ ಒಂದನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಪ್ರೋತ್ಸಾಹಿಸುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಹಿಂದೂ ಪರಂಪರೆಯ ತಿಂಗಳು ಆಸ್ಟ್ರೇಲಿಯನ್ನರಿಗೆ ಹಿಂದೂ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ಅನುಭವಿಸಲು ಮತ್ತು ತೊಡಗಿಸಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ. ಸಾಂಪ್ರದಾಯಿಕ ನೃತ್ಯಗಳು, ಸಂಗೀತ ಪ್ರದರ್ಶನಗಳು ಮತ್ತು ಸಾರ್ವಜನಿಕ ಉತ್ಸವಗಳು ಸೇರಿದಂತೆ ನಗರಾದ್ಯಂತ ಕಾರ್ಯಕ್ರಮಗಳು ಮತ್ತು ಹಬ್ಬಗಳನ್ನು ಆಯೋಜಿಸಲಾಗುತ್ತದೆ. ಹಿಂದೂಗಳು ತಮ್ಮ ಪದ್ಧತಿಗಳನ್ನು ವಿಶಾಲವಾದ ಆಸ್ಟ್ರೇಲಿಯನ್ ಸಮಾಜದೊಂದಿಗೆ ಹಂಚಿಕೊಳ್ಳಲು ವೇದಿಕೆಯನ್ನು ಕಲ್ಪಿಸಲಾಗಿದೆ.

ಸ್ಥಳೀಯ ದೇವಾಲಯಗಳು ಮತ್ತು ಸಾಂಸ್ಕೃತಿಕ ಸಂಸ್ಥೆಗಳು ಈ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಇದೊಂದು ಆಸ್ಟ್ರೇಲಿಯನ್‌ ಮತ್ತು ಭಾರತೀಯರ ಸಮಾಗಮದ ಕಾರ್ಯಕ್ರಮವಾಗಲಿದೆ. ರಂಗೋಲಿ, ಕಲೆ, ಹಬ್ಬದ ಆಚರಣೆಗಳು ಮತ್ತು ಯೋಗ ಇತ್ಯಾದಿ ಭಾರತೀಯ ಪರಂಪರೆಗೆ ಸಂಬಂಧಿಸಿದ ವಿಚಾರಗಳಲ್ಲಿ ಆಸ್ಟ್ರೇಲಿಯಾ ಪ್ರಜೆಗಳೂ ಭಾಗಿಯಾಗಲು ಇದೊಂದು ಉತ್ತಮ ಅವಕಾಶ ಎಂದು ಸರ್ಕಾರ ಹೇಳಿದೆ.

ಈ ಸುದ್ದಿಯನ್ನೂ ಓದಿ: Ruturaj Gaikwad: ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಎ ತಂಡ ಪ್ರಕಟ; ಋತುರಾಜ್ ಗಾಯಕ್ವಾಡ್‌ಗೆ ನಾಯಕ ಪಟ್ಟ