Saturday, 10th May 2025

Georgia Tragedy: ಜಾರ್ಜಿಯಾದಲ್ಲಿ ಭೀಕರ ದುರಂತ; ವಿಷಾನಿಲ ಸೋರಿಕೆಯಾಗಿ 12 ಭಾರತೀಯರ ಸಾವು

Georgia Tragedy

ಟ್ಬಿಲಿಸಿ: ಜಾರ್ಜಿಯಾ (Georgia)ದ ಗುಡೌರಿಯಲ್ಲಿರುವ ಭಾರತೀಯ ಹೋಟೆಲ್‌ ಒಂದರಲ್ಲಿ ವಿಷಾನಿಲ ಸೋರಿಕೆಯಾಗಿ 12 ಭಾರತೀಯರು ಮೃತಪಟ್ಟಿದ್ದಾರೆ. ಕಾರ್ಬನ್ ಮೊನೋಕ್ಸೈಡ್ ಅನಿಲದಿಂದಾಗಿ ಈ ದುರಂತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಹೋಟೆಲ್‌ನ 2ನೇ ಮಹಡಿಯಲ್ಲಿರುವ ಕೋಣೆಗಳಲ್ಲಿ 12 ಮಂದಿಯ ಮೃತದೇಹ ಪತ್ತೆಯಾಗಿದೆ (Georgia Tragedy).

ಮೃತದೇಹಗಳ ಪರಿಶೀಲನೆ ನಡೆಸಲಾಗಿದ್ದು, ಮೇಲ್ನೋಟಕ್ಕೆ ಯಾವುದೇ ಗಾಯಗಳು ಅಥವಾ ಹಿಂಸಾಚಾರದ ಚಿಹ್ನೆಗಳು ಕಂಡುಬಂದಿಲ್ಲ ಎಂದು ಜಾರ್ಜಿಯಾದ ಆಂತರಿಕ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. ಮೃತರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಮೃತಪಟ್ಟ ಎಲ್ಲ 12 ಮಂದಿ ಭಾರತೀಯ ಪ್ರಜೆಗಳಾಗಿದ್ದು, ಇವರು ಭಾರತೀಯ ರೆಸ್ಟೋರೆಂಟ್‌ನ ಉದ್ಯೋಗಿಗಳು ಎಂದು ಟ್ಬಿಲಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ ವರದಿ ಮಾಡಿದೆ. ಆದಾಗ್ಯೂ ಮೃತರ ಪೈಕಿ ಓರ್ವ ತಮ್ಮ ದೇಶದ ಪ್ರಜೆ ಎಂದು ಜಾರ್ಜಿಯಾದ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

“ಜಾರ್ಜಿಯಾದ ಗುಡೌರಿಯಲ್ಲಿ 12 ಭಾರತೀಯ ಪ್ರಜೆಗಳ ಸಾವಿನ ಬಗ್ಗೆ ಮಾಹಿತಿ ಬಂದಿದೆ. ಪ್ರಾಣ ಕಳೆದುಕೊಂಡ ಭಾರತೀಯ ಪ್ರಜೆಗಳ ವಿವರಗಳನ್ನು ಪಡೆಯಲು ರಾಯಭಾರ ಕಚೇರಿಯು ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುವುದು” ಎಂದು ಭಾರತೀಯ ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಕಾರ್ಬನ್ ಮೊನೋಕ್ಸೈಡ್ ಅನಿಲವು ವಿದ್ಯುತ್ ಜನರೇಟರ್‌ನಿಂದ ಹರಡಿರಬಹುದು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ರಾತ್ರಿ ಮುಚ್ಚಿದ ಒಳಾಂಗಣ ಪ್ರದೇಶದಲ್ಲಿ ಜನರೇಟರ್‌ ಅನ್ನು ಆನ್ ಮಾಡಲಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಅದಾಗ್ಯೂ ಸಾವಿನ ನಿಖರ ಕಾರಣವನ್ನು ಕಂಡುಹಿಡಿಯಲು ವಿಧಿವಿಜ್ಞಾನ ಪರೀಕ್ಷೆಯನ್ನು ಸಹ ಪ್ರಾರಂಭಿಸಲಾಗಿದೆ.

“ಘಟನೆಗೆ ಸಂಬಂಧಿಸಿದಂತೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ. ವಿಧಿವಿಜ್ಞಾನ ಪರೀಕ್ಷೆಯ ಅಧಿಕಾಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ” ಎಂದು ಸಚಿವಾಲಯ ತಿಳಿಸಿದೆ. ಜಾರ್ಜಿಯಾದ ಪೊಲೀಸರು ಆರ್ಟಿಕಲ್ 116ರ ಅಡಿಯಲ್ಲಿ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಆರ್ಟಿಕಲ್ 116 ಎಂಬುದು ನಿರ್ಲಕ್ಷ್ಯದ ನರಹತ್ಯೆಗೆ ಸಂಬಂಧಿಸಿದ್ದಾಗಿದೆ.

ಈ ಸುದ್ದಿಯನ್ನೂ ಓದಿ: Viral Video: ಸಾಂತಾಕ್ಲಾಸ್ ವೇಷ ಧರಿಸಿ ಚಿಮಣಿಯೊಳಗೆ ಅಡಗಿ ಕುಳಿತ ಡ್ರಗ್ ಡೀಲರ್! ಈ ವಿಡಿಯೊ ಭಾರೀ ವೈರಲ್‌