Sunday, 11th May 2025

Donald Trump: ಪುಟಿನ್‌ಗೆ ಟ್ರಂಪ್ ಕರೆ- ಉಕ್ರೇನ್ ವಿರುದ್ಧ ಯುದ್ಧ ನಿಲ್ಲಿಸಲು ಒತ್ತಾಯ

Donald Trump

ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ (Donald Trump) ಅವರು ರಷ್ಯಾ ಅಧ್ಯಕ್ಷ (Russian President) ವ್ಲಾಡಿಮಿರ್ ಪುಟಿನ್ (Vladimir Putin) ಅವರಿಗೆ ಕರೆ ಮಾಡಿ ಉಕ್ರೇನ್ ವಿರುದ್ಧದ ಯುದ್ಧವನ್ನು ಉಲ್ಬಣಗೊಳಿಸದಂತೆ ಒತ್ತಾಯಿಸಿದ್ದಾರೆ. ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ವಿರುದ್ಧ ಚುನಾವಣೆಯಲ್ಲಿ ಜಯಗೊಳಿಸಿದ ಕೆಲವು ದಿನಗಳ ಬಳಿಕ ಅವರು ಗುರುವಾರ ಫ್ಲೋರಿಡಾದ ಮಾರ್-ಎ-ಲಾಗೊ ಎಸ್ಟೇಟ್‌ನಿಂದ ಪುಟಿನ್‌ಗೆ ದೂರವಾಣಿ ಕರೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಯುರೋಪ್‌ನಲ್ಲಿ ಗಣನೀಯವಾಗಿ ಹೆಚ್ಚಾಗಿರುವ ಯುಎಸ್ ಮಿಲಿಟರಿ ಕಾರ್ಯಾಚರಣೆ ಬಗ್ಗೆ ಪುಟಿನ್ ಅವರಿಗೆ ನೆನಪಿಸಿದ ಟ್ರಂಪ್‌, ಉಕ್ರೇನ್‌ ವಿರುದ್ಧದ ಯುದ್ಧವನ್ನು ಪರಿಹರಿಸುವ ನಿಟ್ಟಿನಲ್ಲಿ ಹೆಚ್ಚಿನ ಮಾತುಕತೆಗಳ ನಡೆಸುವ ಬಗ್ಗೆ ಆಶಯ ವ್ಯಕ್ತಪಡಿಸಿದರು ಎನ್ನಲಾಗಿದೆ. ಟ್ರಂಪ್ ಅವರು ಈ ಸಂಘರ್ಷವನ್ನು ನಿಲ್ಲಿಸುವ ಬಗ್ಗೆ ಮತ್ತು ಈ ವಿಷಯದ ಕುರಿತು ಮಾಸ್ಕೋದಲ್ಲಿ ಮಾತುಕತೆ ನಡೆಸುವ ಬಗ್ಗೆ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ಹೇಳಿದೆ.

ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರಿಗೂ ಕರೆ ಮಾಡಿ ಟ್ರಂಪ್ ಮಾತುಕತೆ ನಡೆಸಿದರು. ಝೆಲೆನ್ಸ್ಕಿ ಅವರು ಮಾತುಕತೆ ಮತ್ತು ಸಹಕಾರದ ಬಗ್ಗೆ ಆಶಾವಾದವನ್ನು ವ್ಯಕ್ತಪಡಿಸಿದರು ಎನ್ನಲಾಗಿದೆ.

ರಷ್ಯಾ- ಉಕ್ರೇನ್ ಯುದ್ಧ

ರಷ್ಯಾ ಮತ್ತು ಉಕ್ರೇನ್ ನಡುವೆ ಕಳೆದ ಎರಡೂವರೆ ವರ್ಷಗಳಿಂದ ಸಂಘರ್ಷ ಏರ್ಪಟ್ಟಿದ್ದು, ಯುದ್ಧದಲ್ಲಿ ಎರಡೂ ಕಡೆಯವರಿಗೂ ಸಾಕಷ್ಟು ನಷ್ಟ ಉಂಟಾಗಿದೆ. ಯುದ್ಧವನ್ನು ನಿಲ್ಲಿಸಲು ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಎರಡೂ ಕಡೆಯಿಂದಲೂ ಪ್ರಯತ್ನಗಳು ನಡೆಯುತ್ತಿವೆ. ಉಕ್ರೇನ್ ರಷ್ಯಾದ ಭೂಪ್ರದೇಶವನ್ನು ವಶಪಡಿಸಿಕೊಂಡಿದ್ದು, ಮಾಸ್ಕೋ ಪಡೆಗಳು ಉಕ್ರೇನ್‌ನ ಭಾಗವನ್ನು ವಶಕ್ಕೆ ಪಡೆದುಕೊಂಡಿವೆ. ಈ ವಾರಾಂತ್ಯದಲ್ಲಿ ಎರಡೂ ಕಡೆಯಿಂದ ದೊಡ್ಡ ಡ್ರೋನ್ ದಾಳಿಗಳು ಸಂಭವಿಸಿತ್ತು.

ರಷ್ಯಾವು ರಾತ್ರಿಯಿಡೀ ಉಕ್ರೇನ್‌ ಮೇಲೆ 145ಕ್ಕೂ ಹೆಚ್ಚು ಡ್ರೋನ್‌ಗಳನ್ನು ಹಾರಿಸಿತು ಎಂದು ಝೆಲೆನ್ಸ್ಕಿ ಹೇಳಿದ್ದು, ಮಾಸ್ಕೋವನ್ನು ಗುರಿಯಾಗಿಸಿಕೊಂಡು 34 ಉಕ್ರೇನಿಯನ್ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾ ತಿಳಿಸಿದೆ.

Benjamin Netanyahu: ಲೆಬನಾನ್‌ನಲ್ಲಿ 40 ಜನರ ಬಲಿ ಪಡೆದ ಪೇಜರ್‌ ದಾಳಿಗೆ ನಾನೇ ಆದೇಶ ನೀಡಿದ್ದೆ; ಬೆಂಜಮಿನ್‌ ನೆತಾನ್ಯಾಹು

ಅಮೆರಿಕದಲ್ಲಿ ಟ್ರಂಪ್ ಗೆಲುವಿನ ಬಳಿಕ ಸುಮಾರು ಮೂರು ವರ್ಷಗಳ ಉಕ್ರೇನ್ ಸಂಘರ್ಷ ಹೆಚ್ಚಾಗುವ ಆತಂಕವಿತ್ತು. ಆದರೆ ಅವರು ಹೋರಾಟವನ್ನು ಶೀಘ್ರವಾಗಿ ಕೊನೆಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಅಧ್ಯಕ್ಷ ಜೋ ಬಿಡೆನ್ ನಿರ್ಗಮನದ ಬಳಿಕ ಜನವರಿ 20 ರಂದು ಟ್ರಂಪ್ ಶ್ವೇತ ಭವನ ಪ್ರವೇಶಿಸಲಿದ್ದು, ಇದಕ್ಕೂ ಮುನ್ನ ಉಕ್ರೇನ್‌ಗೆ ಸಾಧ್ಯವಾದಷ್ಟು ಸಹಕಾರ ನೀಡುವುದಾಗಿ ಅಮೆರಿಕ ಹೇಳಿದೆ.