ವಾಷಿಂಗ್ಟನ್: ಅಮೆರಿಕದ (America) ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಅಧಿಕಾರ ವಹಿಸಿಕೊಳ್ಳುವ ವೇಳೆಗೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ಭಾರೀ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಗಾಜಾ(Gaza) ಉಗ್ರರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
“ಜನವರಿ 20ರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಗಾಜಾ ಪ್ರದೇಶದಲ್ಲಿ ಬಂಧಿಯಾಗಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ಮಧ್ಯಪ್ರಾಚ್ಯ ದೇಶವು ವಿನಾಶಕ್ಕೆ ಗುರಿಯಾಗಲಿದೆ” ಎಂದು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಸೋಮವಾರ(ಡಿ.2) ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಶೇರ್ ಮಾಡುವ ಮೂಲಕ ಹಮಾಸ್ ಉಗ್ರರಿಗೆ ಎಚ್ಚರಿಕೆ ನೀಡಿದ್ದಾರೆ.
ಡೊನಾಲ್ಡ್ ಟ್ರಂಪ್ ತಮ್ಮ ಹೇಳಿಕೆಯಲ್ಲಿ, “ಜನವರಿ 20, 2025 ರೊಳಗೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ, ಮಧ್ಯಪ್ರಾಚ್ಯದಲ್ಲಿ ವಿನಾಶ ಉಂಟಾಗುತ್ತದೆ. ಮಾನವೀಯತೆಯ ವಿರುದ್ಧ ಈ ದೌರ್ಜನ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಹೇಳಿದ್ದಾರೆ. “ಇದಕ್ಕೆ ಕಾರಣರಾದವರು ಅಮೆರಿಕದ ಇತಿಹಾಸದಲ್ಲಿ ದೊಡ್ಡ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಈ ಕೂಡಲೇ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ” ಎಂದು ಅವರು ವಾರ್ನಿಂಗ್ ಕೊಟ್ಟಿದ್ದಾರೆ. ಸಮಯೋಚಿತ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಅಮೆರಿಕ ದೇಶವು ಹಿಂದೆಂದೂ ಕಂಡಿರದಂತಹ ಶಿಕ್ಷೆಯನ್ನು ನೀಡಲಿದೆ ಎಂದು ಟ್ರಂಪ್ ಗಂಭೀರವಾಗಿ ಎಚ್ಚರಿಕೆ ನೀಡಿದ್ದಾರೆ.
Trump warns Hamas “there will be ALL HELL TO PAY in the Middle East” pic.twitter.com/lbn80ksFb8
— Baba Umar (@BabaUmarr) December 2, 2024
ಇಸ್ರೇಲ್‌ನ ಅಧಿಕಾರಿಗಳ ಪ್ರಕಾರ, ಕಳೆದ ವರ್ಷ ಇಸ್ರೇಲ್ ಮೇಲಿನ ದಾಳಿಯ ಸಮಯದಲ್ಲಿ, ಹಮಾಸ್(Hamas) ಉಗ್ರಗಾಮಿಗಳು ಇಸ್ರೇಲಿ-ಅಮೆರಿಕನ್ ನಾಗರಿಕರು ಸೇರಿದಂತೆ 250 ಕ್ಕೂ ಹೆಚ್ಚು ಜನರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ. 101 ವಿದೇಶಿ ಮತ್ತು ಇಸ್ರೇಲಿ ಒತ್ತೆಯಾಳುಗಳು ಗಾಜಾದಲ್ಲಿ ಉಳಿದಿದ್ದು, ಅರ್ಧದಷ್ಟು ಜನರು ಮಾತ್ರ ಜೀವಂತವಾಗಿದ್ದಾರೆ ಎಂದು ಅಂದಾಜಿಸಲಾಗಿದೆ.
ಹಮಾಸ್ ಯುದ್ಧ ಕೊನೆಗೊಳಿಸುವಂತೆ ಬೇಡಿಕೆ
ಮತ್ತೊಂದೆಡೆ, ಹಮಾಸ್ ಯುದ್ಧವನ್ನು ಕೊನೆಗೊಳಿಸಬೇಕು ಮತ್ತು ಒತ್ತೆಯಾಳುಗಳ ಬಿಡುಗಡೆಗೆ ಬದಲಾಗಿ ಇಸ್ರೇಲ್ ಗಾಜಾದಿಂದ ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ. ಆದರೆ ಹಮಾಸ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವವರೆಗೂ ಯುದ್ಧ ಮುಂದುವರಿಯುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಒತ್ತೆಯಾಳುಗಳ ಬಿಡುಗಡೆಗೆ ನೆತನ್ಯಾಹುಗೆ ಕರೆ ನೀಡುವಂತೆ ಇಸ್ರೇಲ್‌ನಲ್ಲಿಯೂ ಪ್ರತಿಭಟನೆಯ ಧ್ವನಿಗಳು ಕೇಳಿಬರುತ್ತಿವೆ.
ಗಾಜಾದಲ್ಲಿ 33 ಒತ್ತೆಯಾಳುಗಳು ಸಾವು
ಸೋಮವಾರ, 33 ಒತ್ತೆಯಾಳುಗಳು ಗಾಜಾದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಹೇಳಿಕೊಂಡಿದೆ. ಹಮಾಸ್ ನೇತೃತ್ವದ ಉಗ್ರಗಾಮಿಗಳು ಇಸ್ರೇಲಿ ಸಮುದಾಯಗಳ ಮೇಲೆ ದಾಳಿ ನಡೆಸಿದ ನಂತರ 1,200 ಜನರ ಸಾವಿಗೆ ಕಾರಣವಾಗಿದ್ದು, ಇಸ್ರೇಲ್ ಅಕ್ಟೋಬರ್ 7, 2023 ರಂದು ಯುದ್ಧವನ್ನು ಪ್ರಾರಂಭಿಸಿತು. ಇಲ್ಲಿಯವರೆಗೆ, ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಗಳು 44,400 ಪ್ಯಾಲೆಸ್ತೇನಿಯನ್ ಪ್ರಜೆಗಳನ್ನು ಕೊಂದಿವೆ. ಗಾಜಾದ ನಾಗರಿಕರನ್ನು ಸದ್ಯ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ.
ಹಮಾಸ್‌ನ ಹಂಗಾಮಿ ಗಾಜಾ ಮುಖ್ಯಸ್ಥ ಖಲೀಲ್ ಅಲ್-ಹಯ್ಯ ಇತ್ತೀಚೆಗೆ ಪ್ಯಾಲೆಸ್ತೀನ್ ಪ್ರಾಂತ್ಯಗಳಲ್ಲಿನ ಯುದ್ಧವು ಕೊನೆಗೊಳ್ಳುವವರೆಗೆ ಒತ್ತೆಯಾಳುಗಳಿಗೆ ಪ್ರತಿಯಾಗಿ ಇಸ್ರೇಲ್‌ನೊಂದಿಗೆ ಖೈದಿಗಳ ವಿನಿಮಯದ ಕುರಿತು ಯಾವುದೇ ಒಪ್ಪಂದವಿಲ್ಲ ಎಂದು ಹೇಳಿದ್ದಾರೆ. “ಯುದ್ಧ ಅಂತ್ಯಗೊಳ್ಳದೆ, ಖೈದಿಗಳ ವಿನಿಮಯವು ನಡೆಯುವುದಿಲ್ಲ” ಎಂದು ಸಂದರ್ಶನವೊಂದರಲ್ಲಿ, ಅಲ್-ಹಯ್ಯ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:ಸ್ಪಾಂಜ್ ಬಾಂಬ್: ಹಮಾಸ್ ಸುರಂಗಗಳ ವಿರುದ್ದ ಆಯುಧ