Monday, 12th May 2025

ಆಕ್ರಮಿತ ಪ್ರದೇಶವನ್ನು ತಕ್ಷಣ ತೆರವುಗೊಳಿಸಿ: ಭಾರತ ತಾಕೀತು

ಸಂಯುಕ್ತ ರಾಷ್ಟ್ರ: ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳ ಜೊತೆಗೆ ಕಾಶ್ಮೀರವೂ ಭಾರತದ ಅವಿಭಾಜ್ಯ ಅಂಗವಾಗಿದ್ದು, ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ಭಾರತ ಸ್ಪಷ್ಟಪಡಿಸಿದೆ. ಈ ಅಕ್ರಮ ಆಕ್ರಮಣವನ್ನು ತಕ್ಷಣವೇ ತೆರವು ಮಾಡುವಂತೆ ಪಾಕಿಸ್ತಾನವನ್ನು ಕೇಳಿದೆ.

ಈ ಮೂಲಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತವು ಗಡಿಯಾಚೆಗಿನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ದೃಢವಾದ ಮತ್ತು ನಿರ್ಣಾಯಕ ಕ್ರಮ ವನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುವುದಾಗಿ ಪ್ರತಿಪಾದಿಸಿದೆ.

ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ ನಂತರ ಭಾರತದ ಈ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವಿಶ್ವಸಂಸ್ಥೆಯ ಭಾರತದ ಖಾಯಂ ಮಿಷನ್‌ನ ಸಲಹೆಗಾರ/ಕಾಜಲ್ ಭಟ್, ‘ಭಾರತವು ಪಾಕಿಸ್ತಾನ ಸೇರಿದಂತೆ ಎಲ್ಲಾ ನೆರೆಯ ರಾಷ್ಟ್ರಗಳೊಂದಿಗೆ ಸಾಮಾನ್ಯ ಸಂಬಂಧವನ್ನು ಬಯಸುತ್ತದೆ. ಯಾವುದೇ ಸಮಸ್ಯೆ ಇದ್ದರೆ, ಸಿಮ್ಲಾ ಒಪ್ಪಂದದ ಪ್ರಕಾರ ದ್ವಿಪಕ್ಷೀಯ ವಾಗಿರಬೇಕು ಮತ್ತು ಶಾಂತಿಯುತ ಇತ್ಯರ್ಥಕ್ಕೆ ಬದ್ಧವಾಗಿದೆ.

ಯಾವುದೇ ಅರ್ಥಪೂರ್ಣ ಸಂವಾದವು ಹಿಂಸಾಚಾರ ಮುಕ್ತ ವಾತಾವರಣದಲ್ಲಿ ನಡೆಯುತ್ತದೆ ಮತ್ತು ಅಂತಹ ಅನುಕೂಲಕರ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ. ಅಲ್ಲಿಯವರೆಗೆ ಭಾರತವು ಗಡಿಯಾಚೆಯಿಂದ ಪ್ರಾಯೋಜಿತ ಭಯೋತ್ಪಾದನೆಯನ್ನು ಎದುರಿಸಲು ದೃಢವಾದ ಮತ್ತು ನಿರ್ಣಾಯಕ ಕ್ರಮ ಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸು ತ್ತದೆ.

ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶವು ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿರುತ್ತದೆ. ಪಾಕಿಸ್ತಾನ ತನ್ನ ಅಕ್ರಮ ವಶದಲ್ಲಿರುವ ಎಲ್ಲಾ ಪ್ರದೇಶಗಳನ್ನು ತಕ್ಷಣವೇ ಖಾಲಿ ಮಾಡುವಂತೆ ನಾವು ಪಾಕಿಸ್ತಾನಕ್ಕೆ ಕರೆ ನೀಡುತ್ತೇವೆ.

ನನ್ನ ದೇಶದ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಪ್ರಚಾರಕ್ಕಾಗಿ ವಿಶ್ವದ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸು ತ್ತಿರುವುದು ಇದೇ ಮೊದಲಲ್ಲ. ಸಾಮಾನ್ಯ ಜನರ, ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯಗಳ ಜನರ ಜೀವನವು ದಯನೀಯ ಸ್ಥಿತಿಯನ್ನು ತಲುಪಿದೆ.’ ಎಂದಿದ್ದಾರೆ.

Leave a Reply

Your email address will not be published. Required fields are marked *