Sunday, 11th May 2025

Chinmoy Das: ಕೋರ್ಟ್​ಗೆ ಹಾಜರಾಗದ ಚಿನ್ಮಯ್ ಕೃಷ್ಣ ದಾಸ್ ಪರ ವಕೀಲರು…ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಬಾಂಗ್ಲಾದೇಶ: ಬಾಂಗ್ಲಾದೇಶದಲ್ಲಿ (Bangladesh) ಬಂಧನಕ್ಕೊಳಗಾಗಿರುವ ಹಿಂದೂ ಅಧ್ಯಾತ್ಮ ನಾಯಕ ಚಿನ್ಮಯ್‌​ ಕೃಷ್ಣ ದಾಸ್ ಪ್ರಭು (Chinmoy Das) ಪರ ವಕೀಲರು ಕೋರ್ಟ್​ಗೆ ಹಾಜರಾಗದ ಹಿನ್ನೆಲೆಯಲ್ಲಿ ಜಾಮೀನು ವಿಚಾರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಲಾಗಿದೆ.

ನವೆಂಬರ್ 25 ರಂದು ಢಾಕಾ(Dhaka) ವಿಮಾನ ನಿಲ್ದಾಣದಲ್ಲಿ ಪ್ರಮುಖ ಹಿಂದೂ ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ಪ್ರಭು ಅವರನ್ನು ಬಂಧಿಸಲಾಗಿತ್ತು. ಅವರನ್ನು ಬಿಡುಗಡೆಗೊಳಿಸುವಂತೆ ಬಾಂಗ್ಲಾದಲ್ಲಿ ಹಲವು ಹಿಂದೂ ಪ್ರಮುಖರು ಮತ್ತು ಇಸ್ಕಾನ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರು ಕೂಡ ಚಿನ್ಮಯ್‌ ಅವರ ಬಂಧನವನ್ನು ತೀವ್ರವಾಗಿ ವಿರೋಧಿಸಿದ್ದರು.

ಇಂದು ಚಟ್ಟೋಗ್ರಾಮ್‌ನ ಮ್ಯಾಜಿಸ್ಟ್ರೇಟ್ ನ್ಯಾಯಲಯದಲ್ಲಿ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆಯಿತ್ತು. ಆದರೆ ಚಿನ್ಮಯ್​ ದಾಸ್ ಪರ ವಕೀಲರು ಕೋರ್ಟ್​ಗೆ ಹಾಜರಾಗದ ಹಿನ್ನೆಲೆಯಲ್ಲಿ ಜಾಮೀನು ವಿಚಾರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ. ರವೀಂದ್ರ ಘೋಷ್ ಎಂಬ ವಕೀಲರೊಬ್ಬರು ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಢಾಕಾದಿಂದ ಸುಮಾರು 250 ಕಿಮೀ ಪ್ರಯಾಣ ಮಾಡಿ ಬಂದರೂ ಸ್ಥಳೀಯರು ನ್ಯಾಯಾಲಯದ ಆವರಣಕ್ಕೆ ಅವರಿಗೆ ಪ್ರವೇಶವನ್ನು ನಿರಾಕರಿಸಿದ್ದಾರೆ ಎಂದು ಸ್ವತಃ ವಕೀಲ ರವೀಂದ್ರ ಘೋಷ್‌ ತಿಳಿಸಿದ್ದಾರೆ.

ಧಾರ್ಮಿಕ ನಾಯಕ ಚಿನ್ಮಯ್‌ ಕೃಷ್ಣ ದಾಸ್‌ ಬಂಧನದ ವಿಚಾರ ವಿವಾದಕ್ಕೀಡಾಗುತ್ತಿದ್ದಂತೆ, ಬಾಂಗ್ಲಾ ಸರ್ಕಾರವು ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳನ್ನು ಗುರಿಯಾಗಿಸಿ ಯಾವುದೇ ವ್ಯವಸ್ಥಿತ ದಾಳಿ ನಡೆಸಲಾಗಿಲ್ಲ. ನಿರ್ದಿಷ್ಟ ಆರೋಪದ ಆಧಾರದ ಮೇಲೆಯೇ ಹಿಂದೂ ನಾಯಕರನ್ನು ಬಂಧಿಸಲಾಗಿದೆ ಎಂದಿದೆ. ನಮ್ಮ ದೇಶದ ಕಾನೂನಿನ ಅನ್ವಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಬಾಂಗ್ಲಾದೇಶ ಸರ್ಕಾರವು ವಿಶ್ವಸಂಸ್ಥೆಗೆ ತಿಳಿಸಿದೆ. ಜಿನಿವಾದಲ್ಲಿ ನಡೆದ ಅಲ್ಪಸಂಖ್ಯಾತರ ಸಮಸ್ಯೆಗಳ ಶೃಂಗಸಭೆಯ 17ನೇ ಅಧಿವೇಶನದಲ್ಲಿ ವಿಶ್ವಸಂಸ್ಥೆಗೆ ಬಾಂಗ್ಲಾದ ಖಾಯಂ ಪ್ರತಿನಿಧಿ ಆಗಿರುವ ತಾರೀಖ್‌ ಮೊಹಮ್ಮದ್‌ ಆರಿಫುಲ್‌ ಇಸ್ಲಾಮ್‌ ಈ ಹೇಳಿಕೆ ನೀಡಿದ್ದಾರೆ.

ನರೇಂದ್ರ ಮೋದಿಗೆ ಪತ್ರ ಬರೆದ ನ್ಯಾಯಮೂರ್ತಿಗಳು

ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಅಸಮಾನತೆಯನ್ನು ಪರಿಹರಿಸುವಂತೆ 68 ನಿವೃತ್ತ ನ್ಯಾಯಮೂರ್ತಿಗಳು, ಅಧಿಕಾರಿಗಳು ಮತ್ತು ಹಾಲಿ ಸಂಸದರ ಗುಂಪು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದೆ. ಇಸ್ಕಾನ್​ನ ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ ಬಂಧನಕ್ಕೆ ಸಂಬಂಧಿಸಿದಂತೆ ಅವರು ಮಧ್ಯಸ್ಥಿಕೆ ವಹಿಸಬೇಕೆಂದು ಮನವಿ ಮಾಡಿದೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಡಿಜಿಪಿ ಶೇಶ್ ಪಾಲ್ ವೈದ್, 68 ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳು, IAS, IPS, IRS, IIS, IFS ಮತ್ತು ರಾಜ್ಯ ಅಧಿಕಾರಿಗಳು ಇಸ್ಕಾನ್​ನ ಚಿನ್ಮಯ್ ಕೃಷ್ಣ ಅವರ ಅನ್ಯಾಯದ ಬಂಧನ ಸೇರಿದಂತೆ ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪತ್ರ ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ:Pawan Kalyan: ಬಾಂಗ್ಲಾದಲ್ಲಿ ಹಿಂದೂ ಸನ್ಯಾಸಿ ಅರೆಸ್ಟ್‌ ವಿರುದ್ಧ ಸಿಡಿದೆದ್ದ ಪವನ್‌ ಕಲ್ಯಾಣ್‌… ಭಾರತದ ಸಹಾಯ ಮರೆಯದಿರಿ ಎಂದು ಚಾಟಿ