Sunday, 11th May 2025

ಬಟ್ಟೆ ಮಾರುಕಟ್ಟೆ ‘ಬಂಗಾಬಜಾರ್‌’ನಲ್ಲಿ ಅಗ್ನಿ ಅವಘಡ

ಢಾಕಾ: ಬಾಂಗ್ಲಾದೇಶದ ಅತಿದೊಡ್ಡ ಬಟ್ಟೆ ಮಾರುಕಟ್ಟೆಗಳಲ್ಲಿ ಒಂದಾದ ‘ಬಂಗಾಬಜಾರ್‌’ನಲ್ಲಿ ಮಂಗಳವಾರ ಅಗ್ನಿ ಅವಘಡ ಸಂಭವಿಸಿದೆ.

ರಾಜಧಾನಿ ಢಾಕಾದಲ್ಲಿರುವ ಈ ಮಾರುಕಟ್ಟೆಯಲ್ಲಿ ಬೆಳಿಗ್ಗೆ 6.10ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.

ದುರಂತಕ್ಕೆ ಕಾರಣವೇನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಬೆಂಕಿ ನಂದಿಸಲು 47 ಅಗ್ನಿಶಾಮಕ ಘಟಕಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಅಗ್ನಿ ಶಾಮಕ ಸೇವೆ ಮತ್ತು ನಾಗರಿಕ ರಕ್ಷಣಾ ನಿಯಂತ್ರಣ ಕೊಠಡಿಯ ಅಧಿಕಾರಿ ರಫಿ ಅಲ್‌ ಫಾರುಕ್‌ ಹೇಳಿಕೆ ನೀಡಿದ್ದಾರೆ.

ಮಾರುಕಟ್ಟೆಯಲ್ಲಿನ ಮಳಿಗೆಗಳ ಮಾಲೀಕರು ಮತ್ತು ಸಿಬ್ಬಂದಿ, ಬೆಂಕಿ ಬಿದ್ದಿರುವ ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದಾರೆ. ತಮ್ಮ ಮಳಿಗೆಗಳಿಂದ ಬಟ್ಟೆಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಪ್ರಯತ್ನಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.