Saturday, 10th May 2025

ಪಿಎಸ್ಐ ನೇಮಕಾತಿ ಹಗರಣದಲ್ಲಿ ಎಲ್ಲರದೂ ಪಾಲಿದೆ : ಶಾಸಕ ಯತ್ನಾಳ

ವಿಜಯಪುರ: ಪಿಎಸ್ಐ ನೇಮಕಾತಿ ಹಗರಣದಲ್ಲಿ ಎಲ್ಲರದೂ ಪಾಲಿದೆ. ಹಗರಣದಲ್ಲಿ ಯಾರ್ಯಾರು ಇದ್ದಾರೆ ಎಂದು ಬಿಚ್ಚಿ ಹೇಳಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಗುಡುಗಿದ್ದಾರೆ. ಇದೊಂದು ದೊಡ್ಡ ಹಗರಣ. ಇದನ್ನು ಮುಚ್ಚಿ ಹಾಕಲು ಯತ್ನ ಮಾಡಲಾಗುತ್ತಿದೆ, ನ್ಯಾಯಾಧೀಶರು ಸ್ಟ್ರಾಂಗ್ ಇದ್ದಾರೆ, ಅದಕ್ಕಾಗಿ ಅವರನ್ನು ಸರ್ಕಾರ ವರ್ಗಾವಣೆ ಮಾಡಬಾರದು ಎಂದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಿಎಸ್ಐ ಅಕ್ರಮ ದಲ್ಲಿ ದೊಡ್ಡ ದೊಡ್ಡವರು ಇದ್ದಾರೆ ಎನ್ನಲಾಗುತ್ತಿದೆ. ಮಾಜಿ ಸಿಎಂ ಮಗ ಇದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಆದರೆ, ಯಾರು..?. ಅದರಲ್ಲಿ ದೇವೇಗೌಡರ ಮಗ, ಸಿದ್ದರಾಮಯ್ಯ ಮಗ ಸಹ ಬರ್ತಾರೆ. ಅದಕ್ಕಾಗಿ ಯಾರ ಮಗ ಇದ್ದಾರೆ ಎನ್ನುವುದನ್ನು ಸ್ಪಷ್ಟವಾಗಿ ಹೇಳಬೇಕು ಎಂದು ಆಗ್ರಹಿಸಿ ದರು.

ಆರೋಗ್ಯ ಸಚಿವರ ವಿರುದ್ಧ ಗರಂ: ಜಿಲ್ಲಾ ಆಸ್ಪತ್ರೆಯಲ್ಲಿ ಡಯಾಲಿಸಸ್ ಬಗ್ಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎನ್ನುವ ಮೂಲಕ ಅವರ ಸ್ವ ಪಕ್ಷದ ಸಚಿವ ಸುಧಾಕರ ವಿರುದ್ಧ ಕಿಡಿಕಾರಿದ ಯತ್ನಾಳ್​, ಹೊರಗಡೆಗೆ ಹೋದ್ರೆ 2,500 ರೊಕ್ಕಾ ಕೊಡಬೇಕು, ಡಯಾಲಿಸಸ್ ಟೆಂಡರ್ ಖಾಸಗಿಯವರಿಗೆ ಯಾಕೆ ಕೊಟ್ಟಿದ್ದಾರೋ ಗೊತ್ತಿಲ್ಲ, ಅದಕ್ಕಾಗಿ ನಾನು ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದರು.

ಅಗ್ನಿಪಥ್ ಯೋಜನೆ ಒಳ್ಳೆಯದೇ, ದೇಶ ಉಳಿಯಬೇಕಿದರೆ ಅಗ್ನಿಪಥ್ ಯೋಜನೆ ಬೇಕಿದೆ. ದೇಶ ದ್ರೋಹಿಗಳಿಗೆ ಬುದ್ಧಿ ಕಲಿಸ ಬೇಕಿದೆ. ಮೆತ್ತಗೆ ಕಠಿಣ ಕ್ರಮ, ಶೀಘ್ರವಾಗಿ ಕ್ರಮ ಅನ್ನೋದ ಬೇಡ ಎಂದು ಸರ್ಕಾರದ ವಿರುದ್ಧವೇ ಯತ್ನಾಳ ಹರಿಹಾಯ್ದರು.

ಸಂಪುಟ ವಿಸ್ತರಣೆ ಬೇಡ: ಇದೇ ವೇಳೆ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಯತ್ನಾಳ, ಸಿಎಂ ಬೊಮ್ಮಾಯಿ ಈಗ ಮಂತ್ರಿ ಮಂಡಲ ರಚನೆ ಮಾಡೋದು ಬೇಡ, ಇರುವ ಪುಣ್ಯಾತ್ಮರು ಕೆಲಸ ಮಾಡಲಿ ಎಂದರು.