ಚಿಕ್ಕಬಳ್ಳಾಪುರ : ಕಾರ್ಮಿಕರಿಗೆ ಸವಲತ್ತು ಒದಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದ್ದು, ಕಾರ್ಮಿಕ ಹೆಸರಿನಲ್ಲಿ ನಡೆಯು ತ್ತಿರುವ ಮಹಾ ವಂಚನೆಗೆ ಕಡಿವಾಣ ಹಾಕಲು ಒತ್ತಾಯಿಸಿ ಕಾಂಗ್ರೆಸ್ ಜಿಲ್ಲಾ ಕಾರ್ಮಿಕ ಘಟಕದಿಂದ ಜಿಲ್ಲಾಡಳಿತ ಭವನದ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಖಾದಿ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಕಾರ್ಮಿಕ ಸಚಿವರಾಗಿದ್ದ ವೇಳೆ ಕಾರ್ಮಿಕರಿಗಾಗಿ ರೂಪಿಸಿದ್ದ ಯೋಜನೆಳನ್ನು ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿದೆ. ಕಾರ್ಮಿಕರ ಕುಟುಂಬಕ್ಕೆ ಉಚಿತ ವೈದ್ಯಕೀಯ ಸೇವೆ ಕಲ್ಪಿಸುವ ಇಎಸ್‌ಐ ಆಸ್ಪತ್ರೆ ಗಳನ್ನು ಸ್ಥಾಪಿಸಿ ಪ್ರತಿ ಜಿಲ್ಲೆಗೆ ವಿಸ್ತರಿಸಲು ಯೋಜಿಸಲಾಗಿತ್ತು. ಆದರೆ ಈ ಮಹತ್ತರ ಯೋಜನೆಯನ್ನು ಬಿಜೆಪಿ ಮೂಲೆಗುಂಪು ಮಾಡಿದೆ ಎಂದು ಟೀಕಿಸಿದರು.
ನೋಂದಾಯಿತ ಕಾರ್ಮಿಕರು ಮರಣ ಹೊಂದಿದ ನೀಡುವ ೫೪ ಸಾವಿರ ಪರಿಹಾರದಲ್ಲೂ ಶೇ.೪೦ರಷ್ಟು ಲಂಚವನ್ನು ಪಡೆಯುತ್ತಿದ್ದಾರೆ.
ವಿದ್ಯಾಭ್ಯಾಸಕ್ಕಾಗಿ ನೀಡುತ್ತಿದ್ದ ಪ್ರೋತ್ಸಾಹಧನವನ್ನೂ ಒಂದೂವರೆ ವರ್ಷದಿಂದ ನಿಲ್ಲಿಸಿದ್ದಾರೆ. ದುಡಿಯುವ ವರ್ಗದವರಿಂದಲೂ ಕಮೀಷನ್ ಪಡೆಯಲಾಗುತ್ತಿದೆ. ಇಲಾಖೆಯ ಟೇಬಲ್‌ಗೂ ಕಮೀಷನ್ ನೀಡಿದ್ದಲ್ಲಿ ಯಾವುದೇ ದಾಖಲೆ ಗಳು ಮುಂದೆ ಸಾಗುವುದಿಲ್ಲ ಎನ್ನುವ ದುಸ್ತಿತಿಯಿದೆ ಎಂದು ಆರೋಪಿಸಿದರು.
ಕಾರ್ಮಿಕ ಘಟಕದಿಂದ ಜಿಲ್ಲಾಧ್ಯಕ್ಷ ಪೆದ್ದನ್ನ ಮಾತನಾಡಿ ಎಲ್ಲ ರಂಗಗಳಲ್ಲಿ ವೈಫಲ್ಯವಾಗಿರುವ ರಾಜ್ಯ ಬಿಜೆಪಿ ಸರ್ಕಾರವು ಮೋದಿ ಹೆಸರಿನಲ್ಲಿ ಬೂದಿ ಹಚ್ಚುತ್ತಿದ್ದು, ಕಾರ್ಮಿಕರಿಗೆ ಪ್ರತಿ ಹಂತದಲ್ಲೂ ಮೋಸ ಆಗುತ್ತಿದೆ. ಹಣ ನೀಡದೇ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಇದರಿಂದ ಕೇವಲ ಶೇ.೧೦ ರಷ್ಟು ಕಾರ್ಮಿಕರು ಸವಲತ್ತು ಪಡೆದಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಿಗಳು ಸಹ ಸಂಬಳದ ಬದಲಿಗೆ ಕಾರ್ಮಿಕರ ಕೆಲಸ ಮಾಡಿದರೇ ನಮಗೇನು ಸಿಗಲಿದೆ ಎಂದು ಯೋಚಿಸುವ ಸ್ಥಿತಿಯಲ್ಲಿದ್ದಾರೆ. ಡಾ.ಕೆ.ಸುಧಾಕರ್ ವಂಚನೆ ಹಾಗೂ ಮೋಸ ಕಲಿಸಿರುವ ರೂವಾರಿಯಾಗಿದ್ದು, ಭ್ರಷ್ಟಾಚಾರದ ಭೀಷ್ಮ ಆಗಿದ್ದಾರೆ. ಬಿಜೆಪಿಗರಿಗೆ ಕೇಡುಗಾಲ ಬಂದಿದ್ದು, ಕೂಲಿಕಾರ್ಮಿಕರು ಬಿಜೆಪಿಯನ್ನು ಕಿತ್ತೆಸುವ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ನುಡಿದರು.
ಪಿಂಚಣಿ, ಮದುವೆ, ಹೆರಿಗೆ ಸಹಾಯಧನ ಸೇರಿದಂತೆ ಸವಲತ್ತುಗಳನ್ನು ಸಕಾಲದಲ್ಲಿ ಒದಗಿಸಬೇಕು, ಬಾಕಿಯಿರುವ ಅರ್ಜಿಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಬೇಕು, ಮುಖಂಡರ ಸಭೆ ನಡೆಸಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ನೀಡಬೇಕು, ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ತನಿಖೆಗೆ ಒಳಪಡಿಸಬೇಕು, ಕಾರ್ಮಿಕರು ಹಾಗೂ ಅವರ ಕುಟುಂಬದವರಿಗೆ ಉಚಿತ ವೈದ್ಯಕೀಯ ಸೇವೆ ಒದಗಿಸಬೇಕು ಸೇರಿದಂತೆ ೧೯ಕ್ಕೂ ಹೆಚ್ಚು ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಮನವಿಯನ್ನು ಸಲ್ಲಿಸಿದರು.
ಘಟಕದ ಪ್ರಧಾನ ಕಾರ್ಯದರ್ಶಿ ಆರ್.ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್, ಹನುಮಂತಪ್ಪ, ಮಮತಾಮೂರ್ತಿ, ಲಕ್ಷöಣ್, ಮುನಿರಾಜು, ಕಾಂತರಾಜು, ಸಂಜೀವಪ್ಪ, ತಿಪ್ಪೇನಹಳ್ಳಿ ಮುನಿರಾಜು, ಪ್ರಕಾಶ್, ಹರೀಶ್, ಯಾಸ್ಮೀನ್‌ತಾಜ್ ಇದ್ದರು.