Sunday, 11th May 2025

MLA Vedavyas Kamath: ವಿದ್ಯಾರ್ಥಿಗಳು ಕೃಷಿ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳಬೇಕು: ವೇದವ್ಯಾಸ್ ಕಾಮತ್

ಮಂಗಳೂರು: ರೈತರು ದೇಶದ ಬೆನ್ನೆಲುಬಾದರೆ, ವಿದ್ಯಾರ್ಥಿಗಳು ದೇಶದ ಭವಿಷ್ಯ. ವಿದ್ಯಾರ್ಥಿಗಳು ಕೃಷಿ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳಬೇಕು. ರೈತಾಪಿ ವರ್ಗವನ್ನು ಗೌರವಿಸಬೇಕು. ರೈತರ ನೆಮ್ಮದಿ, ಯಶಸ್ಸಿನಿಂದಲೇ ದೇಶದ ಸಮೃದ್ಧಿ ಸಾಧ್ಯ. ಆಧುನಿಕ ತಂತ್ರಜ್ಞಾನದಿಂದ ಕೃಷಿಯಲ್ಲಿ ಹೆಚ್ಚು ಲಾಭ ಗಳಿಸುವ ಅವಕಾಶಗಳಿವೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.

ಫುಡ್ ಚೈನ್ ಕ್ಯಾಂಪೇನ್ ವತಿಯಿಂದ ನಗರದಲ್ಲಿ ಶನಿವಾರ ನಡೆದ ವಿದ್ಯಾರ್ಥಿ- ರೈತರ ರ್ಯಾಲಿ ಬಳಿಕ ಪುರಭವನ ದಲ್ಲಿ ನಡೆದ ‘ಪ್ರಕೃತಿ, ಯುವಜನತೆ ಮತ್ತು ಆರ್ಥಿಕತೆ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿ ದರು.

ಕೃಷಿ ಶಾಲಾ ಪಠ್ಯವಾಗಲಿ..: ಪದ್ಮಶ್ರೀ ಪುರಸ್ಕೃತ ದಾಖಲೆಯ ಭತ್ತ ಬೆಳೆಯ ಸಾಧಕ ಕೃಷಿಕ ಕಾಸರಗೋಡಿನ ಸತ್ಯನಾರಾಯಣ ಬೇಳೇರಿ ಮಾತನಾಡಿ, ಯುವಜನತೆ ಕೃಷಿಯತ್ತ ಒಲವು ತೋರಿಸುವ ಅಗತ್ಯವಿದೆ. ಕೃಷಿ ವಿಷಯ ಶಾಲಾ ಪಠ್ಯದ ಭಾಗವಾಗಬೇಕು. ಕೇರಳದಲ್ಲಿ ಇಂತಹ ಚಿಂತನೆ ಇದೆ. ಕರ್ನಾಟಕದಲ್ಲಿಯೂ ಅದೇ ರೀತಿ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಿಸಬೇಕು. ಉನ್ನತ ಶಿಕ್ಷಣ ಪಡೆದ ಅನಂತರ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡರೆ ಸಾಧನೆಗೆ ಹೆಚ್ಚಿನ ಅವಕಾಶವಿದೆ ಎಂಬುದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳ ಬೇಕು ಎಂದು ಹೇಳಿದರು.

ಗಿಡ ನೆಡುವ ಪ್ರವೃತ್ತಿ ಬರಲಿ..:
ಇನ್ನೋರ್ವ ಪದ್ಮಶ್ರೀ ಪುರಸ್ಕೃತ ಸುರಂಗ ನಿರ್ಮಾಣದ ಭಗೀರಥ ಕೃಷಿ ಸಾಧಕ ಅಮೈ ಮಹಾಲಿಂಗ ನಾಯ್ಕ ಮಾತನಾಡಿ, ಸಮತೋಲಿತವಾದ ಪ್ರಕೃತಿಯನ್ನು ಮುಂದಿನ ಪೀಳಿಗೆಯವರಿಗೂ ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಫಲವತ್ತಾದ ಕೃಷಿ ಭೂಮಿ, ಪ್ರಾಣಿ ಪಕ್ಷಿಗಳನ್ನೊಳಗೊಂಡ ಸಮತೋಲಿತ ಪರಿಸರವನ್ನು ಉಳಿಸಬೇಕು. ಪ್ರತಿಯೋರ್ವರು ಗಿಡ ನೆಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ನೀರನ್ನು ಪೋಲು ಮಾಡದೆ ಅಂತರ್ಜಲ ಉಳಿಸಿ ಕೊಳ್ಳಬೇಕು. ನೀರಿಲ್ಲದ ಬಾವಿಗಳಿಗೆ ನೀರಿಂಗಿಸುವ ಮೂಲಕ ಜಲ ಮರುಪೂರಣ ಮಾಡಬೇಕು. ವಿದ್ಯಾರ್ಥಿಗಳು ಕೂಡ ಶಿಕ್ಷಣದ ಜತೆಗೆ ಕೃಷಿಯತ್ತ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.

ನಾನು ಕೃಷಿ ಮಾಡಲು ಹೊರಟಾಗ ನನಗೆ ಜಾಗವೇ ಇರಲಿಲ್ಲ. ಅನಂತರ ಜಾಗ ಸಿಕ್ಕಿದರೂ ನೀರಿನ ಮೂಲ ಇರಲಿಲ್ಲ. ಕೊರೆದ ಸುರಂಗ, ಬಾವಿಗಳಿಂದಲೂ ಪ್ರಯೋಜನವಾಗಲಿಲ್ಲ. ಪ್ರಯೋಜನವಾಗದಿದ್ದರೂ ಯಾಕೆ ಸುರಂಗ, ಬಾವಿ ಕೊರೆಯುತ್ತೀಯಾ ಎಂದು ಪ್ರಶ್ನಿಸುತ್ತಿದ್ದರು. ಆದರೂ ಹಟ ಬಿಡಲಿಲ್ಲ. ಕೊನೆಗೂ ನೀರು ಸಿಕ್ಕಿತು. ಕೃಷಿಯಲ್ಲಿ ಯಶಸ್ಸು ಕಂಡೆ. ಇಂದು ಪೇಟೆಯ ಕಡೆ ಮುಖ ಮಾಡುವವರು ಹೆಚ್ಚಾಗಿದ್ದಾರೆ. ಆದರೆ ಎಲ್ಲರೂ ಪೇಟೆ ಕಡೆಗೆ ಹೋದರೆ ಹಳ್ಳಿಗಳಲ್ಲಿರುವ ಕೃಷಿಯ ಸ್ಥಿತಿ ಏನು ಎಂಬ ಬಗ್ಗೆ ಯೋಚಿಸಬೇಕಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಮೇಯರ್ ಮನೋಜ್ ಕುಮಾರ್, ಪಾಲಿಕೆ ಸದಸ್ಯರಾದ ಮನೋಹರ್ ಶೆಟ್ಟಿಕದ್ರಿ, ಭರತ್ ಕುಮಾರ್, ಸಂದೀಪ್ ಗರೋಡಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯ ವಿಜ್ಞಾನಿ ಡಾ. ರಮೇಶ್, ರಾಜ್ಯ ರೈತ ಸಂಘದ ಕಾರ್ಯದರ್ಶಿ ಮನೋಹರ್ ಶೆಟ್ಟಿ, ಯತೀಶ್ ತುಕಾರಾಂ, ಡಾ. ಸೌರೀಶ್ ಹೆಗಡೆ ಮತ್ತಿತರರಿದ್ದರು. ಅರ್ಚಿತ್ ಜೈನ್ ನಿರೂಪಿಸಿದರು.