Saturday, 10th May 2025

Ujjivan Small Finance: ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನ 3ನೇ ತ್ರೈಮಾಸಿಕದ ಹಣಕಾಸು ಸಾಧನೆ; ₹ 34,496 ಕೋಟಿಗೆ ತಲುಪಿದ ಠೇವಣಿ

ಬೆಂಗಳೂರು: ದೇಶದ ಪ್ರಮುಖ ಸಣ್ಣ ಹಣಕಾಸು ಬ್ಯಾಂಕ್ ಆಗಿರುವ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಡಿಸೆಂಬರ್‌ ಅಂತ್ಯಕ್ಕೆ ಕೊನೆ ಗೊಂಡ 2024-25ನೇ ಹಣಕಾಸು ವರ್ಷದ 3ನೇ ತ್ರೈಮಾಸಿಕದ ಹಣಕಾಸು ಸಾಧನೆ ಪ್ರಕಟಿಸಿದ್ದು, ಈ ಅವಧಿಯಲ್ಲಿ ಬ್ಯಾಂಕ್‌ನ ಒಟ್ಟಾರೆ ಠೇವಣಿ ಮೊತ್ತವು ಈಗ ₹34,496 ಕೋಟಿಗೆ ತಲುಪಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿನ ₹ 29,669 ಕೋಟಿಗೆ ಹೋಲಿಸಿದರೆ ಠೇವಣಿ ಮೊತ್ತವು ಈಗ ಶೇ 16ರಷ್ಟು ಹೆಚ್ಚಳ ದಾಖಲಿಸಿದೆ ಎಂದು ಬ್ಯಾಂಕ್‌, ಮುಂಬೈ ಷೇರುಪೇಟೆ ಮತ್ತು ರಾಷ್ಟ್ರೀಯ ಷೇರುಪೇಟೆಗೆ ಮಾಹಿತಿ ನೀಡಿದೆ.

ಈ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಒಟ್ಟಾರೆ ಸಾಲದ ಪ್ರಮಾಣವು ₹30,466 ಕೋಟಿಗೆ ಏರಿಕೆಯಾಗಿದೆ. ಹಣಕಾಸು ವರ್ಷ 2023-24ರ 3ನೇ ತ್ರೈಮಾಸಿಕದಲ್ಲಿನ ₹ 27,743 ಕೋಟಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ 10ರಷ್ಟು ಹೆಚ್ಚಳ ಕಂಡಿದೆ.

ಚಾಲ್ತಿ ಖಾತೆ ಮತ್ತು ಉಳಿತಾಯ ಖಾತೆಯ ಒಟ್ಟಾರೆ ಠೇವಣಿಯು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.15ರಷ್ಟು ಏರಿಕೆ ದಾಖಲಿಸಿ ₹ 8,657 ಕೋಟಿಗೆ ತಲುಪಿದೆ. ಸಾಲ ಮತ್ತು ಠೇವಣಿ ಅನುಪಾತವು ಶೇ 94 ರಿಂದ ಶೇ 88ಕ್ಕೆ ಇಳಿದಿದೆ.

ಸ್ವ ಸೇವಾ ಸಂಘಟನೆಗಳಿಗೆ ₹13,663 ಕೋಟಿ ಸಾಲ ನೀಡಲಾಗಿದ್ದು,  ಹಿಂದಿನ ವರ್ಷದ ₹ 15,471 ಕೋಟಿಗೆ ಹೋಲಿಸಿದರೆ ಶೇ 12ರಷ್ಟು ಕುಸಿತ ಕಂಡಿದೆ.

ವೈಯಕ್ತಿಕ ಸಾಲದ ಪ್ರಮಾಣವು ಹಿಂದಿನ ವರ್ಷದ ₹4,304 ಕೋಟಿಗೆ ಹೋಲಿಸಿದರೆ ಶೇ 15ರಷ್ಟು ಹೆಚ್ಚಳ ದಾಖಲಿಸಿ ₹ 4,953 ಕೋಟಿಗೆ ಏರಿಕೆ ದಾಖಲಿಸಿದೆ. ಕೈಗೆಟುಕುವ ಗೃಹ ಹಣಕಾಸು ವಲಯದಲ್ಲಿನ ಸಾಲದ ವಿತರಣೆಯ ಶೇ 45ರಷ್ಟು ಹೆಚ್ಚಳ ದಾಖಲಿಸಿ ₹ 4,417 ಕೋಟಿಗಳಿಂದ ₹ 6,393 ಕೋಟಿಗೆ ತಲುಪಿದೆ. ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ)  ವಿತರಿಸಲಾಗಿರುವ ಸಾಲದ ಮೊತ್ತವು ಶೇ 21ರಷ್ಟು ಏರಿಕೆ ಕಂಡು ₹1,694 ಕೋಟಿಗೆ ಹೆಚ್ಚಳ ಕಂಡಿದೆ. 

ಸಾಲ ಮರುಪಾವತಿ ಆಗದ ಪ್ರಮಾಣವು (ಪಿಎಆರ್‌) ಸೆಪ್ಟೆಂಬರ್‌ ತ್ರೈಮಾಸಿಕಕ್ಕೆ (ಶೇ 5.1) ಹೋಲಿಸಿದರೆ, ಡಿಸೆಂಬರ್‌ ತ್ರೈಮಾಸಿಕದಲ್ಲಿ ಶೇ 5.4ರಷ್ಟಾಗಿದೆ. ಒಟ್ಟು ವಸೂಲಾಗದ ಸಾಲದ ಪ್ರಮಾಣವು (ಜಿಎನ್‌ಪಿಎ) ಇದೇ ಅವಧಿಯಲ್ಲಿ ಶೇ 2.5 ರಿಂದ ಶೇ 2.7ಕ್ಕೆ ಏರಿಕೆಯಾಗಿದೆ.

Leave a Reply

Your email address will not be published. Required fields are marked *