ಗುಬ್ಬಿ: ನೂರಾರು ವರ್ಷದಿಂದ ಏಳೆಂಟು ತಲೆಮಾರು ಜನರು ಬದುಕು ಕಟ್ಟಿಕೊಂಡ ಅಂಕಳಕೊಪ್ಪ ಗ್ರಾಮಕ್ಕೆ ಏಕಾಏಕಿ ಆಗಮಿಸಿದ ತಾಲ್ಲೂಕು ಆಡಳಿತ ಸರ್ವೇ ನಡೆಸಿ ಸುಮಾರು 70 ಮನೆಗಳು ಗುಂಡುತೋಪು ಜಾಗ ಖಾಲಿ ಮಾಡುವಂತೆ ತಾಕೀತು ಮಾಡಿರುವುದು ಖಂಡನೀಯ. ಅವೈಜ್ಞಾನಿಕ ಸರ್ವೇ ಸ್ಕೆಚ್ ಹಿಡಿದು ಮುಗ್ಧ ಜನರನ್ನು ಹೆದರಿಸಿ ಮನೆ ಒಡೆಯಲು ಬಂದರೆ ಉಗ್ರ ಹೋರಾಟ ಮಾಡುವುದಾಗಿ ಮಾಜಿ ಶಾಸಕ ಮಸಾಲಾ ಜಯರಾಮ್ ಎಚ್ಚರಿಕೆ ನೀಡಿದರು.
ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಅಂಕಳಕೊಪ್ಪ ಗ್ರಾಮದಲ್ಲಿ ಸಂತ್ರಸ್ತರೊಂದಿಗೆ ಸಭೆ ನಡೆಸಿ ನಂತರ ಸುದ್ದಿ ಗಾರರ ಜೊತೆ ಮಾತನಾಡಿದ ಅವರು ನೂರಾರು ವರ್ಷದಿಂದ ಸರ್ಕಾರದ ಎಲ್ಲಾ ಸವಲತ್ತು ಪಡೆದ ಈ ಗ್ರಾಮದಲ್ಲಿ ನೀರು, ರಸ್ತೆ, ದೀಪ, ಕರೆಂಟ್, ಜಲ ಜೀವನ್ ಮಿಷನ್ ನಳ ಸಂಪರ್ಕ ಹೀಗೆ ಅನೇಕ ಸವಲತ್ತು ಒದಗಿಸಿದ ಗ್ರಾಮ ಪಂಚಾಯಿತಿ ಕಂದಾಯ ಕೂಡಾ ವಸೂಲಿ ಮಾಡಿದೆ. ಇಖಾತೆ, ಇಸ್ವತ್ತು ಕೂಡಾ ಮಾಡಿಕೊಟ್ಟು ಬ್ಯಾಂಕ್ ಗಳು ಸಾಲವನ್ನು ಕೂಡಾ ನೀಡಿದೆ. ಇಷ್ಟೆಲ್ಲಾ ಅನುಕೂಲ ಪಡೆದ ಗ್ರಾಮಸ್ಥರನ್ನು ಹೇಗೆ ಒಕ್ಕಳೆಬ್ಬಿಸುತ್ತೀರಿ ಎಂದು ಪ್ರಶ್ನಿಸಿದರು.
ಯಾವುದೇ ಸರ್ಕಾರಿ ಯೋಜನೆ , ಕಟ್ಟಡಗಳು ನಮ್ಮೂರಿಗೆ ಮಂಜೂರಾಗಿಲ್ಲ. ಸರ್ಕಾರದ ಉದ್ದೇಶಕ್ಕೆ ಬಳಕೆ ಆಗಬೇಕಾದ ಜಾಗ ಸರಿಯಾಗಿ ನಿಗದಿ ಮಾಡಿಲ್ಲ. ಇಡೀ ಗ್ರಾಮವನ್ನು ಸ್ಕೆಚ್ ನಲ್ಲಿ ಸೇರಿಸಿದ ಸರ್ವೇ ಅವೈಜ್ಞಾನಿಕ. ಸರ್ವೇ ನಂಬರ್ 168 ರಲ್ಲಿ 6 ಎಕರೆ ಗುಂಡುತೋಪು ಜಾಗ ಈ ಗ್ರಾಮದ ಪಕ್ಕದಲ್ಲಿರುತ್ತದೆ. ಯಾವ ಉದ್ದೇಶಕ್ಕೆ ಇಡೀ ಗ್ರಾಮವನ್ನು ಖಾಲಿ ಮಾಡಿಸಲು ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಮುಂದಾಗಿದ್ದಾರೆ ತಿಳಿದಿಲ್ಲ. ಏಕಾಏಕಿ ನಾರನಹಳ್ಳಿ ಬಳಿ ನಿಮಗೆ ಜಾಗ ನೀಡುತ್ತೇವೆ ಎನ್ನುತ್ತಿದ್ದಾರೆ. ಲೋಕಾಯುಕ್ತ ಹೆಸರು ಮುಂದೆ ತಂದು ಮುಗ್ಧ ಜನರಿಗೆ ತೊಂದರೆ ನೀಡುವುದು ಸರಿಯಲ್ಲ. ದುಡ್ಡಿಗಾಗಿ ಇದೆಲ್ಲಾ ಮಾಡುವುದಾದರೆ ಅದನ್ನೂ ಕುಳಿತು ಮಾತನಾಡೋಣ ಎಂದು ಕುಟುಕಿದರು.
ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಾಲ ಪಡೆದ ಇಲ್ಲಿನ ಬಡ ರೈತರು ತಮ್ಮ ಒಡವೆ ಮಾರಿ ಮನೆ ಕಟ್ಟಿಸಿಕೊಂಡಿದ್ದಾರೆ. ನೂರಾರು ವರ್ಷಗಳಿಂದ ಯಾರು ಕೇಳದ ಗುಂಡುತೋಪು ಜಾಗ ಎಂಬ ಮಾತು ಇಲ್ಲಿನ ಜನರಿಗೆ ಆತಂಕ ತಂದಿದೆ. ಜೆಸಿಬಿ ಯಂತ್ರಗಳನ್ನು ತಂದು ಮನೆಗಳನ್ನು ಕೆಡವಲು ತಾಲ್ಲೂಕು ಆಡಳಿತ ಮುಂದಾದರೆ ನಮ್ಮ ಹೆಣಗಳ ಮೇಲೆ ಜೆಸಿಬಿ ಹರಿಸಿ ಮುಂದುಬರೆಯಬೇಕಿದೆ ಎಂದು ಎಚ್ಚರಿಸಿದ ಅವರು ಗುಂಡುತೋಪು ಒತ್ತುವರಿ ಮಾಡಿರುವ ನೂರಾರು ಸ್ಥಳವನ್ನು ಬಿಟ್ಟು ಬಡವರ ವಿರುದ್ಧ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಕಾನೂನು ಬೆದರಿಕೆ ಯೊಡ್ಡಿದ್ದೀರಿ.
ತಾಲ್ಲೂಕಿನಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿ ಕಟ್ಟಡಗಳು, ಮದುವೆ ಮನೆ ಕಟ್ಟಿರುವ ನಿದರ್ಶನವಿದೆ. ಎಲ್ಲವನ್ನೂ ಖುಲ್ಲಾ ಮಾಡುವಿರಾ ಎಂದು ಪ್ರಶ್ನಿಸಿ, ನೂರಾರು ವರ್ಷದಿಂದ ವಾಸವಿರುವ ಜನರನ್ನು ಒಕ್ಕಲೆಬ್ಬಿ ಸುವ ಕೆಲಸ ಬಿಟ್ಟು ಗ್ರಾಮಕ್ಕೆ ಒಳ್ಳೆಯ ಅನುಕೂಲ ಮಾಡಲು ಪ್ರಯತ್ನ ಮಾಡಿ ಎಂದು ತಿಳಿಸಿದರು.