ಗುಬ್ಬಿ: ತಾಲ್ಲೂಕಿನ ಚಿಕ್ಕ ಚೆಂಗಾವಿ ಗ್ರಾಮದ ಬಳಿ ಹೆಬ್ಬೂರು ಸಂಪರ್ಕ ರಸ್ತೆ ಬದಿ ಜೆಜೆಎಂ ಕಾಮಗಾರಿಗೆ ತೆಗೆದ 600 ಮೀಟರ್ ಟ್ರಂಚ್ ಪೈಪ್ ಲೈನ್ ಅಳವಡಿಸದೇ ರಸ್ತೆ ಬದಿ ಹಾಗೆಯೇ ಬಿಟ್ಟ ಕಾರಣ ಟ್ರ್ಯಾಕ್ಟರ್ ಉರುಳಿ ಚಾಲಕನ ಕೈ ಮೂಳೆ ಮುರಿದ ಘಟನೆ ಗ್ರಾಮಸ್ಥರನ್ನು ಕೆರಳಿಸಿದೆ.
ಕಳೆದ ಆರು ತಿಂಗಳ ಹಿಂದೆ 60 ಲಕ್ಷ ರೂಗಳ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿ ಆರಂಭಿಸಿ ರಸ್ತೆ ಬದಿ ಒಂದು ಮೀಟರ್ ಆಳ ತೋಡಿ ಹಾಗೆಯೇ ಬಿಟ್ಟು ಹೋಗಿರುವ ಕಾರಣ ನಾಲ್ಕೈದು ಅಪಘಾತಕ್ಕೆ ಮೂಲವಾಗಿದೆ. ಕಳಪೆ ಕಾಮಗಾರಿ ಬಗ್ಗೆ ಸ್ಥಳೀಯ ಗ್ರಾಮಸ್ಥರ ಆಕ್ರೋಶ ಕಟ್ಟೆ ಇಂದು ನಡೆದ ಅಪಘಾತದಿಂದ ಒಡೆದು ಹೊರ ಬಂದಿದೆ. ಪ್ರಭಾವಿ ಗುತ್ತಿಗೆದಾರರ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರನಿಗೆ ಹೇಳಲಾಗದ ಅಧಿಕಾರಿಗಳ ಬಗ್ಗೆ ಜನರು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.
ಮನೆ ಮನೆಗೆ ನಳ ಸಂಪರ್ಕ ಕಾಮಗಾರಿ ಓವರ್ ಹೆಡ್ ಟ್ಯಾಂಕ್ ಮಾಡದೆ ಪೈಪ್ ಲೈನ್ ಕೆಲಸ ಗ್ರಾಮದ ಹೊರ ಭಾಗದಲ್ಲಿ ನಡೆದಿಲ್ಲ. ತೋಟದಮನೆ ಇರುವಲ್ಲಿ ಮಾತ್ರ ಒಂದೆರೆಡು ಪೈಪ್ ಹಾಕಲಾಗಿದೆ. ಉಳಿದಂತೆ ಎಲ್ಲಾ ಹಲವು ಖಾಲಿ ಹಳ್ಳ ಹಾಗೆಯೇ ಬಿಡಲಾಗಿದೆ. ಈಗಾಗಲೇ ಇಲ್ಲಿ ನಡೆದಿರುವ ಅಪಘಾತಗಳು ಆತಂಕ ತಂದಿದೆ. ಈ ಹಳ್ಳದಿಂದ ಜೀವ ಹಾನಿಯಾದಲ್ಲಿ ಗುತ್ತಿಗೆದಾರ ಸತೀಶ್ ನೇರ ಹೊಣೆ ಹೊರಬೇಕು ಎಂದು ಸ್ಥಳೀಯ ಶ್ರೀನಿವಾಸ್ ಗೌಡ ಎಚ್ಚರಿಕೆ ನೀಡಿದರು.
ಚಿಕ್ಕ ಚೆಂಗಾವಿ ಹಾಗೂ ಬುಕ್ಕ ಸಾಗರ ಎರಡೂ ಗ್ರಾಮದಲ್ಲಿ ಮನೆ ಮನೆಗೆ ನೀರು ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಲ್ಲಿದೆ. ಪೈಪ್ ಲೈನ್ ಕೆಲಸ ಗುಣಮಟ್ಟದಲ್ಲಿಲ್ಲ. ಊರಿನ ಸಿಸಿ ರಸ್ತೆ ಹಗೆದು ಹಾಳು ಮಾಡಿ ಅಲ್ಲಿನ ಹಳ್ಳ ಮುಚ್ಚದೆ ರಸ್ತೆಯನ್ನು ಸಂಪೂರ್ಣ ಹದಗೆಡಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್ ಗಳಿಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಗುತ್ತಿಗೆದಾರ ಸತೀಶ್ ಕೆಲಸಕ್ಕೆ ಅಧಿಕಾರಿಗಳ ಸಾಥ್ ನೀಡಿದ್ದಾರೆ. ರಸ್ತೆಯ ಬದಿ ತೆಗೆದ ಹಳ್ಳ ಮಾರಕವಾಗಿದೆ. ಈ ಬಗ್ಗೆ ಕೂಡಲೇ ಅಧಿಕಾರಿಗಳು ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಬೇಕು ಎಂದು ಮಾಜಿ ಗ್ರಾಪಂ ಸದಸ್ಯ ಸಿ.ಡಿ.ರಾಘವೇಂದ್ರ ಆಗ್ರಹಿಸಿದ್ದಾರೆ.
ಜಲ ಜೀವನ್ ಮಿಷನ್ ಯೋಜನೆ ಆರಂಭದಲ್ಲಿ ಬುಕ್ಕಸಾಗರ ಗ್ರಾಮದಲ್ಲಿ ನಡೆದ ಕಳಪೆ ಕಾಮಗಾರಿ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆ ಸಂಚಾರವೇ ಮಾರಕ ಎನ್ನು ವಂತೆ ಪೈಪ್ ಲೈನ್ ಹಳ್ಳ ಜವರಾಯನ ರೂಪ ಪಡೆದುಕೊಂಡಿದೆ. ಆರೇಳು ಅಪಘಾತ ಈಗಾಗಲೇ ಕೈಕಾಲು ಮುರಿ ದಿವೆ. ಕೆಲಸ ಮಾಡದೆ ಕಂಟ್ರಾಕ್ಟರ್ ಅಧಿಕಾರಿಗಳಿಗೆ ತೋರಿಕೆಗೆ ಹಳ್ಳ ತೆಗೆದು ಅಲ್ಲಲ್ಲೇ ಪೈಪ್ ಅದ್ದಿ ಈಗ ಉಡಾಫೆ ಉತ್ತರ ನೀಡುತ್ತಿದ್ದಾರೆ. ಅಧಿಕಾರಿಗಳು ಸಹ ಈ ಬಗ್ಗೆ ನಿಗಾವಹಿಸದೆ ಸ್ಥಳಕ್ಕೆ ಬಾರದೆ ಕಚೇರಿಯಲ್ಲೇ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಮುಖಂಡ ಬುಕ್ಕಸಾಗರ ಮಹದೇವ್ ಆರೋಪಿಸಿದರು.