Sunday, 11th May 2025

Tumkur News: ಒಕ್ಕಲಿಗರ ಸಂಘದಿಂದ ಸಂತಾಪ ಸಭೆ

ಚಿಕ್ಕನಾಯಕನಹಳ್ಳಿ : ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಿಧನಕ್ಕೆ ತಾಲ್ಲೂಕು ಒಕ್ಕಲಿಗರ ಸಂಘ ಸೇರಿದಂತೆ ವಿವಿಧ ಜನಪರ ಸಂಘಟನೆಗಳು ಸಂತಾಪ ಸೂಚಿಸಿದೆ.

ನೆಹರು ವೃತ್ತದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಕೃಷ್ಣೇಗೌಡ ಪುರಸಭಾ ಉಪಾಧ್ಯಕ್ಷ ರಾಜಶೇಖರ್ ಶೋಕ ವ್ಯಕ್ತಪಡಿಸಿದರು.

ಪದ್ಮವಿಭೂಷಣ ಎಸ್.ಎಂ. ಕೃಷ್ಣ ಅವರು ವಿಧಿವಶರಾದ ಸುದ್ದಿ ಅತೀವ ದುಃಖವನ್ನುಂಟು ಮಾಡಿದೆ. ಹೊಸ ಚಿಂತನೆಗಳು, ಅನೇಕ ಜನಸ್ನೇಹಿ ಅಭಿವೃದ್ದಿ ಯೋಜನೆಗಳ ಮೂಲಕ ಕರ್ನಾಟಕದ ವಿಕಾಸಕ್ಕೆ ಅವರ ಕೊಡುಗೆ ಸದಾ ಸ್ಮರಣಿಯ ಬೆಂಗಳೂರು ವಿದೇಶ ಮಟ್ಟದಲ್ಲಿ ಹೆಸರು ಮಾಡಲು ಅವರ ಶ್ರಮವಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ನುಡಿದರು.

ವಕೀಲ ಎಂ.ಬಿ.ನಾಗರಾಜ್ ಮಾತನಾಡಿ ಮುತ್ಸದಿ ರಾಜಕಾರಣಿಯಾಗಿ, ನಾಡಿನ ಜನಪ್ರಿಯ ಮುಖ್ಯಮಂತ್ರಿಗಳಾಗಿ, ವಿಧಾನಪರಿಷತ್ ಸದಸ್ಯರಾಗಿ, ವಿವಿಧ ಹುದ್ದೆಗಳನ್ನು ಅಲಂಕರಿಸುವ ಮೂಲಕ ಎಸ್.ಎಂ.ಕೃಷ್ಣ ಅವರು ಅಪಾರ ಜನಮನ್ನಣೆ ಗಳಿಸಿದರು. ಸರಳ ವ್ಯಕ್ತಿತ್ವ ಹಾಗು ಆತ್ಮೀಯತೆಯ ಸ್ವಭಾವದಿಂದ ರಾಜಕೀಯದಲ್ಲಿ ಮೇರು ವ್ಯಕ್ತಿತ್ವ ತನ್ನದಾಗಿಸಿಕೊಂಡರು ಎಂದು ಗುಣಗಾನ ಮಾಡಿದರು.

ನಮಗೆ ಮಾರ್ಗದರ್ಶಕರಾಗಿದ್ದ ಅವರು ಸದಾ ನಮ್ಮ ನೆನಪಿನಲ್ಲಿ ಉಳಿಯುತ್ತಾರೆ ಎಂದು ಮಾಜಿ ಶಾಸಕ ಲಕ್ಕಪ್ಪ ಹೇಳಿದರು. ಕನ್ನಡ ಸಂಘದ ಅಧ್ಯಕ್ಷ ರೇಣುಕಸ್ವಾಮಿ, ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ಪುರಸಭಾ ನಾಮಿನಿ ಸದಸ್ಯ ಚಂದ್ರಶೇಖರ್, ಒಕ್ಕಲಿಗರ ಸಂಘದ ನಿರ್ದೇಶಕ ಶ್ಯಾವಿಗೆಹಳ್ಳಿ ಮಧು, ಗೋವಿಂದರಾಜು, ಸೀಮೆ ಎಣ್ಣೆ ಮಲ್ಲೇಶ್, ನೀಲಕಂಠ ಮುಂತಾದವರು ಭಾಗವಹಿಸಿದ್ದರು.