ಗುಬ್ಬಿ : ಅಂಬೇಡ್ಕರ್ ಸಾಹೇಬರ ವಿಚಾರಧಾರೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುಂದಿನ ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡದೆ ಕೇವಲ ಹೊಟ್ಟೆಪಾಡಿಗಾಗಿ ಬಾಬಾ ಸಾಹೇಬರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲು ಕೆಲವು ಮಂದಿ ದಲಿತ ಮುಖಂಡರು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಯುವ ಬ್ರಿಗೇಡ್ ಸದಸ್ಯ ಶಿವಕುಮಾರ್.ಜಿ.ಡಿ. ತೀವ್ರ ಕಳವಳ ವ್ಯಕ್ತಪಡಿಸಿದರು.
ಗುಬ್ಬಿ ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ಗುಬ್ಬಿ ತಾಲ್ಲೂಕು ಆದಿಜಾಂಬವ ಯುವ ಬ್ರಿಗೇಡ್ ವತಿಯಿಂದ ನಡೆದ ಬಾಬಾ ಸಾಹೇಬ ಅಂಬೇಡ್ಕರ್ ಅವರ 68 ನೇ ಪರಿನಿರ್ವಾಣ ದಿನವನ್ನು ಮೇಣದ ಬತ್ತಿ ಹಚ್ಚುವ ಮೂಲಕ ಆಚರಣೆ ಮಾಡಿದ ಯುವಕರು ಪ್ರಸ್ತುತ ದಿನಮಾನದಲ್ಲಿ ಸಂಘಟನೆಯ ಹೆಸರಿನಲ್ಲಿ ಸಂಪಾದನೆಗೆ ಮುಂದಾದ ಕೆಲ ದಲಿತ ಮುಖಂಡರು ಹಣ ವಸೂಲಿ ಮಾಡುವ ಮೂಲಕ ತಮ್ಮ ಮನೆಗಳನ್ನು ಬೆಳೆಸಿಕೊಳ್ಳಲು ಮುಂದಾಗಿದ್ದಾರೆ. ಇದು ಸಂಘಟನೆಯ ಶಕ್ತಿ ಕುಂದಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಸ್ವಂತ ಶಕ್ತಿ ಇದ್ದರೆ ಅವರ ಹೆಸರು ಬಳಸಿಕೊಳ್ಳದೆ ಬದುಕಿ ತೋರಿಸಬೇಕಾದ ದಲಿತ ಮುಖಂಡರು ಅಂಬೇಡ್ಕರ್ ರಚಿತ ಸಂವಿಧಾನ ಪೀಠಿಕೆ ರೀತಿ ನಡೆದುಕೊಳ್ಳದೆ ಸಂಪೂರ್ಣ ಸ್ವಾರ್ಥ ಬದುಕಿಗೆ ಅವರ ಹೆಸರು ಬಳಸಿಕೊಳ್ಳುತ್ತಿರು ವುದು ಬೇಸರದ ಸಂಗತಿ ಎಂದು ವಿಷಾದಿಸಿದ ಅವರು ಈ ಹಿಂದೆ ದಲಿತರು ಅನುಭವಿಸಿದ ನೋವುಗಳನ್ನು ಹೋಗಲಾಡಿಸಿದ ಅಂಬೇಡ್ಕರ್ ಅವರ ಹೆಸರು ದುರ್ಬಳಕೆ ಮಾಡಲು ಮುಂದಾಗಿರುವುದು ವಿಪರ್ಯಾಸ. ದಲಿತರೇ ದಲಿತರನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಗುಬ್ಬಿ ಪಿಎಸ್ಸೈ ಸುನೀಲ್ ಕುಮಾರ್ ಮಾತನಾಡಿ ಸಮಾಜದಲ್ಲಿ ಸಾಮಾಜಿಕ ನ್ಯಾಯ ಒದಗಿಸಿದ ಅಂಬೇಡ್ಕರ್ ಅವರು ಯುವ ಪೀಳಿಗೆಗೆ ಆದರ್ಶವಾಗಬೇಕು. ಶೋಷಿತ ವರ್ಗ, ದೀನ ದಲಿತರ ಉದ್ದಾರಕ್ಕೆ ಬರವಣಿಗೆ ಮೂಲಕ ಶ್ರಮಿಸಿದರು. ಸಂವಿಧಾನ ಬದ್ಧ ನಡವಳಿಕೆ ಎಲ್ಲರೂ ಪಾಲಿಸಿದಲ್ಲಿ ಸಮಾಜದ ಸ್ವಾಸ್ಥ್ಯ, ಸೌಖ್ಯ ತಾನಾಗಿಯೇ ಬರುತ್ತದೆ. ಇಂತಹ ಸಾಮಾಜಿಕ ಗ್ರಂಥ ವಿಶ್ವಮಾನ್ಯ ಗಳಿಸಿದೆ. ಅಂಬೇಡ್ಕರ್ ಸ್ಮರಣೆ ಎಲ್ಲರ ಕರ್ತವ್ಯ. ಹಾಗೆಯೇ ಅವರ ಶಿಕ್ಷಣ, ಸಂಘಟನೆ ಹಾಗೂ ಹೋರಾಟ ತತ್ವ ಎಲ್ಲರೂ ಪಾಲಿಸಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಆದಿ ಜಾಂಬವ ಯುವ ಬ್ರಿಗೇಡ್ ಜಿಲ್ಲಾಧ್ಯಕ್ಷ ಕೆಂಪರಾಜು ಮೌರ್ಯ, ಜಿ.ಸಿ.ಅಭಿಷೇಕ್, ಯೋಗೀಶ್, ದೊಡ್ಡಗುಣಿ ಕೀರ್ತಿ, ಪ್ರವೀಣ, ಬಾಲಕೃಷ್ಣ, ಮಧುಸೂದನ್, ರವಿಕಿರಣ್, ರವಿ, ಪುನೀತ್, ನರಸಿಂಹಮೂರ್ತಿ, ನಂದನ್, ಮಲ್ಲಿಕಾರ್ಜುನ್, ಅರುಣ್, ಹುಚ್ಚೇಗೌಡ ಇತರರು ಇದ್ದರು.