Sunday, 11th May 2025

Tumkur News: ಮಠ ಮಂದಿರಗಳು ಮನುಷ್ಯನಿಗೆ ಶಾಂತಿ ನೆಮ್ಮದಿ ದೊರಕುವ ಶ್ರದ್ಧಾಕೇಂದ್ರಗಳು

ಚಿಕ್ಕನಾಯಕನಹಳ್ಳಿ: ಮಠ ಮಂದಿರಗಳು ಮನುಷ್ಯನಿಗೆ ಶಾಂತಿ ನೆಮ್ಮದಿ ದೊರಕುವ ಶ್ರದ್ಧಾಕೇಂದ್ರಗಳಾಗಿವೆ. ಈ ನಿಟ್ಟಿನಲ್ಲಿ ಪೂರ್ವಿಕರು ಮಠ ಮಂದಿರಕ್ಕೆ ಹೆಚ್ಚು ಮಹತ್ವವನ್ನ ನೀಡುತ್ತಿದ್ದರು ಎಂದು ದೊಡ್ಡಗುಣಿ ಮಠದ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯಸ್ವಾಮೀಜಿ ಹೇಳಿದರು. 

ಪಟ್ಟಣದ ಧರ್ಮಾವರ ಬೀದಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮಹಂತಿಮಠದ ಶ್ರೀ ನಂಧೀಶ್ವರನ ನೂತನ ದೇವಾಲಯ ವಾಸ್ತುಪೂಜೆ ಬಾಗಿಲು ಸ್ಥಾಪನೆ ಪೂಜಾ ಕಾರ್ಯಕ್ರಮದಲ್ಲಿ ಸಾನಿದ್ಯ ವಹಿಸಿ ಮಾತನಾಡಿದರು.

ಸಮಾಜದಲ್ಲಿ ಮನುಷ್ಯ ಆಸ್ತಿ ಹಣದಿಂದ ಶಾಂತಿ ನೆಮ್ಮದಿಯನ್ನ ಪಡೆದುಕೊಳ್ಳಲು ಸಾಧ್ಯವಿಲ್ಲ. ವ್ಯಕ್ತಿಗೆ ಸಂಕಷ್ಟ ಗಳು ಎದುರಾದಾಗ ಆತನ ನೋವುಗಳನ್ನ ಹೇಳಿಕೊಂಡು ಸಮಸ್ಯೆಗಳನ್ನ ಬಗೆಹರಿಸುವಂತೆ ದೇವರ ಮೊರೆ ಹೊಗುವುದು ಪುರಾಣಕಾಲದಿಂದಲೂ ರೂಢಿಯಾಗಿ ಬಂದಿದೆ. ಈ ನಿಟ್ಟಿನಲ್ಲಿ ಒಂದೊಂದು ದೇವಾಲಯಗಳು ವಿಶೇಷ ಶಕ್ತಿ ಪುಣ್ಯ ಕ್ಷೇತ್ರಗಳಾಗಿ ಭಕ್ತರಿಗೆ ಆಕರ್ಷಣೆಯಾಗಿವೆ. ಮಹಂತಿಮಠ ಗುರುಪರಂಪರೆ ಹೊಂದಿದ್ದು ಇಲ್ಲಿರುವ ನಂಧೀಶ್ವರನು ಕೂಡ ದಿವ್ಯ ಶಕ್ತಿಯನ್ನ ಹೊಂದಿದ್ದು ಜಾತಿಬೇದ ವಿಲ್ಲದೆ ಭಕ್ತರ ಆಕರ್ಷಣೆಗೆ ಸಾಕ್ಷಿಯಾಗಿದೆ. ಈ ದೇವಾಲಯ ಪಾಳೇಗಾರರ ಕಾಲದಲ್ಲಿ ಸ್ಥಾಪನೆಗೊಂಡಿತ್ತು ಎನ್ನುವುದಾಗಿ ಪೂರ್ವಿಕರು ಹೇಳುತ್ತಿದ್ದರು.

ದೇವಾಲಯವು  ಶಿಥಿಲಗೊಂಡ ಸ್ಥಿತಿಯಲ್ಲಿದ್ದಿದ್ದನ್ನ ಮಹಂತಿ ಮಠದ ಸದಸ್ಯರುಗಳು ಸೇರಿ ಜೀರ್ಣೋದ್ಧಾರ ಪಡಿಸಲು ನೂತನ ದೇವಾಲಯದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ನಿರ್ಮಾಣಕ್ಕೆ ಹಣದ ಕೊರತೆ ಬಾರದಂತೆ ಭಕ್ತರೂ ಸೇರಿದಂತೆ ಸಾರ್ವಜನಿಕರೂ ಕೂಡ ಈ ಪುಣ್ಯ ಕೆಲಸಕ್ಕೆ ಕೈಜೋಡಿಸಿ ದೇವಾಲಯ ಲೋಕಾರ್ಪಣೆಗೆ ಸಾಕ್ಷಿಭೂತರಾಗಿ ಸೇವೆಗೆ ಮುಂದಾಗಬೇಕೆಂದು ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ನಂದೀಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಶಿವಕುಮಾರಸ್ವಾಮಿ.ಶ್ರೀ ಉಚ್ಛಸಗಪ್ಪನವರಮಠದ ಸೇವಾ ಟ್ರಸ್ಟ್ ಅಧ್ಯಕ್ಷ ಸಿ.ಮಲ್ಲಿಕಾರ್ಜುನಸ್ವಾಮಿ  ಕಾರ್ಯದರ್ಶಿ ಗುರುಮೂರ್ತಿ ˌಹೊಸಕೆರೆ ರಾಜಶೇಖರ್ ಮೂರ್ತಿˌಆಲದ ಕಟ್ಟೆ ಮರುಳಾರಾಧ್ಯˌ ಆನಂದಪ್ಪˌ ವೇ.ಮಲ್ಲಿಕಾರ್ಜುನಸ್ವಾಮಿˌತೀರ್ಥರಾಮಲಿಂಗೇಶ್ವರಸ್ವಾಮಿ ವಜ್ರದ ಕನ್ವೀನಿಯರ್ ಪ್ರಸನ್ನ ಕುಮಾರ್ˌ ಅಂಕಿತ ವಿದ್ಯಾಸಂಸ್ಥೆ ಕಾರ್ಯದರ್ಶಿ ವೀಣಾಶಂಕರ್ˌಪಂಚಮುಖಿ ಕುಮಾರ ಸ್ವಾಮಿ ಶಾಸ್ತ್ರೀ ಅರ್ಚಕ ಕರಿಬಸವಯ್ಯ ಸೇರಿದಂತೆ ಮುಂತಾದವರಿದ್ದರು.