Tuesday, 13th May 2025

Tumkur Breaking: ಹಾಸ್ಟೆಲ್‌ಗೆ ಜಿಲ್ಲಾಧಿಕಾರಿಗಳ ದಿಢೀರ್ ಭೇಟಿ: ಅಧಿಕಾರಿಗಳಿಗೆ ತರಾಟೆ

ತುಮಕೂರು: ನಗರದ ಮೆಳೆ ಕೋಟೆಯಲ್ಲಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ಹಾಗೂ ವೃತ್ತಿಪರ ಬಾಲಕರ ವಿದ್ಯಾರ್ಥಿ ನಿಲಯಗಳಿಗೆಜಿಲ್ಲಾಧಿಕಾರಿ ಶುಭ ಕಲ್ಯಾಣ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರಿಶೀಲನೆ ವೇಳೆ ಸ್ವಚ್ಛತೆ ಇಲ್ಲದ ವಿದ್ಯಾರ್ಥಿಗಳ ಕೊಠಡಿ, ಶೌಚಾಲಯ, ನಿಲಯದ ಆವರಣವನ್ನು ಗಮನಿಸಿದ ಅವರು ಎಲ್ಲವನ್ನು ಸ್ವಚ್ಛವಾಗಿಡಬೇಕು. ಮತ್ತೊಮ್ಮೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಸರ್ಕಾರದಿಂದ ಸಂಬಳ ಪಡೆಯುತ್ತಿಲ್ಲವೇ? ಕೆಲಸ ಮಾಡಲು ಉದಾಸೀನವೇಕೆ? ಎಂದು ನಿಲಯದ ವಾರ್ಡನ್ ವೆಂಕಟೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಸರ್ಕಾರದಿಂದ ಒದಗಿಸಿರುವ ವಾಷಿಂಗ್ ಮೆಷಿನ್ ಮೂಲೆ ಗುಂಪಾಗಿದೆ. ವಾಷಿಂಗ್ ಮೆಷಿನ್ ಅನ್ನು ದುರಸ್ತಿಪಡಿಸಿ ಉಪಯೋಗಿಸಲು ಮೀನಾ-ಮೇಷವೇಕೆ? ಹೊಡೆದು ಹೋದ ಕಿಟಕಿ-ಬಾಗಿಲುಗಳನ್ನು ಸರಿಪಡಿಸಿಲ್ಲ. ಮೆನು ಚಾರ್ಟ್ನಲ್ಲಿರುವಂತೆ ಮಧ್ಯಾಹ್ನದ ಊಟದಲ್ಲಿ ವಿದ್ಯಾರ್ಥಿಗಳಿಗೆ ಮುದ್ದೆ ನೀಡದೆ ಅನ್ನ ಸಾರು ಮಾತ್ರ ನೀಡಲಾಗಿದೆ ಎಂದು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದಿದ್ದೇನೆ. ಪ್ರತಿದಿನ ವಿದ್ಯಾರ್ಥಿನಿಲಯವನ್ನು ಸ್ವಚ್ಛಗೊಳಿಸಲಾಗುತ್ತಿದೆ ಎಂದು ತಪ್ಪು ಮಾಹಿತಿ ನೀಡಲಾಗುತ್ತಿದೆ. ನಿಲಯದಲ್ಲಿರುವ ಲೋಪದೋಷಗಳ ಬಗ್ಗೆ ಕೇಂದ್ರ ಕಚೇರಿಗೆ ವರದಿ ನೀಡುತ್ತೇನೆಂದು ನಿಲಯದ ಮೇಲ್ವಿಚಾರಕರಿಗೆ ಎಚ್ಚರಿಕೆ ನೀಡಿದರು.