Wednesday, 14th May 2025

ಲೋಕಾಯುಕ್ತ ದಾಳಿ: ಕೆಐಎಡಿಬಿ ಅಧಿಕಾರಿ ಮನೆಯಲ್ಲಿ 8 ಲಕ್ಷ ನಗದು, 1 ಕೆಜಿಗೂ ಅಧಿಕ ಆಭರಣ ವಶ

ತುಮಕೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು  ಆರ್‌.ಟಿ ನಗರದಲ್ಲಿರುವ ಕೆಐಎಡಿಬಿ ಅಧಿಕಾರಿ ನರಸಿಂಹಮೂರ್ತಿ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಆರ್.ಟಿ. ನಗರದ ಸಮೀಪವಿರುವ ಶಂಕರಪುರಂನ ಡಿ ಬ್ಲಾಕ್‌ನಲ್ಲಿ ವಾಸವಿರುವ ಪ್ರಸ್ತುತ ಮೈಸೂರಿನ ಕೆಐಎಡಿಬಿ ಕಚೇರಿಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನರಸಿಂಹಮೂರ್ತಿ ಮನೆ ಮೇಲೆ  ಲೋಕಾಯುಕ್ತ ಎಸ್ಪಿ ವಲಿಬಾಷಾ ಮಾರ್ಗದರ್ಶನದಲ್ಲಿ ಡಿವೈಎಸ್ಪಿಗಳಾದ ಮಂಜುನಾಥ್ ಮತ್ತು ಹರೀಶ್ ನೇತೃತ್ವದ ತಂಡ ದಾಳಿ ನಡೆಸಿ ದಾಖಲಾತಿ ಗಳ ತಪಾಸಣೆ ನಡೆಸಿದರು.
ಐದು ವಾಹನಗಳಲ್ಲಿ ದಿಢೀರ್ ದಾಳಿ ನಡೆಸಿರುವ 6 ಮಂದಿ ಲೋಕಾಯುಕ್ತ ಅಧಿಕಾರಿ ಗಳು ಹಾಗೂ 15 ಮಂದಿ ಸಿಬ್ಬಂದಿಗಳ ನ್ನೊಳಗೊಂಡ ತಂಡ ಕೆಐಎಡಿಬಿ ಕಾರ್ಯ ನಿರ್ವಾಹಕ ಇಂಜಿನಿಯರ್ ಸಿ.ಎನ್. ಮೂರ್ತಿ ಮನೆ ಹಾಗೂ ಸಮೀಪದಲ್ಲೇ ಇರುವ ಇವರ ಮಾವ ಮತ್ತು ನಾದಿನಿ ಮನೆ ಮೇಲೂ ಏಕಕಾಲದಲ್ಲಿ ದಾಳಿ ನಡೆಸುವ ಮೂಲಕ ಈ ಮೂರು ಮನೆಯವರಿಗೂ ಮುಂಜಾನೆಯೇ ಶಾಕ್ ನೀಡಿದ್ದಾರೆ.
ಸುದೀರ್ಘವಾಗಿ ಕಾಗದ ಪತ್ರಗಳು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿರುವ ಅಧಿಕಾರಿಗಳು ಈ ಮನೆಗಳಲ್ಲಿರುವ ಚಿನ್ನಾಭ ರಣ, ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದು ತೂಕ ಮಾಡುವ ಕಾರ್ಯದಲ್ಲಿ ಮುಂದಾಗಿದ್ದಾರೆ.
ಸದರಿ ಅಧಿಕಾರಿ ಸಿ.ಎನ್.ಮೂರ್ತಿ ತಮ್ಮ ಆದಾಯಕ್ಕಿಂತ ಅಧಿಕ ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಇದುವರೆವಿಗೂ ಇವರ ಮನೆಯಲ್ಲಿ 8 ಲಕ್ಷಕ್ಕೂ ಅಧಿಕ ನಗದು, 1 ಕೆ.ಜಿ.ಗೂ ಅಧಿಕ ಚಿನ್ನಾಭರಣಗಳು, ಚರಾಸ್ತಿಯ ದಾಖಲಾತಿಗಳು ಲಭ್ಯವಾಗಿವೆ ಎಂದು ಲೋಕಾಯುಕ್ತ ಎಸ್ಪಿ ವಲಿಬಾಷ ತಿಳಿಸಿದ್ದಾರೆ.
ತುಮಕೂರು ನಗರ ಸೇರಿದಂತೆ ಬೇರೆ ಬೇರೆ ಕಡೆ ಸದರಿ ಅಧಿಕಾರಿ ನಿವೇಶನಗಳನ್ನು ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಕುರಿತು ದಾಖಲಾತಿಗಳ ಪರಿಶೀಲನೆ ನಡೆಯುತ್ತಿದ್ದು,  ದಾಖಲಾತಿಗಳ ಪರಿಶೀಲನೆ ಕಾರ್ಯ ಮುಂದುವರೆಯಲಿದೆ ಎಂದು ಅವರು ಹೇಳಿದ್ದಾರೆ.