ಈ ಅತ್ಯಾಧುನಿಕ ಘಟಕವು ವರ್ಷದಲ್ಲಿ 21,000 ಜೀವಿತಾವಧಿ ಮುಗಿದ ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಮತ್ತು ಟಾಟಾ ಗ್ರೂಪ್‌ನ ಜಾಗತಿಕ ವ್ಯಾಪಾರ ಮತ್ತು ವಿತರಣಾ ಅಂಗವಾದ ಟಾಟಾ ಇಂಟರ್‌ನ್ಯಾಷನಲ್ ಇಂದು ಪುಣೆಯಲ್ಲಿ ಹೊಚ್ಚ ಹೊಸ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಘಟಕವನ್ನು ಉದ್ಘಾಟಿಸಿದೆ. ‘ರೀ.ವೈ.ರ್’ (Re.Wi.Re – ರೀಸೈಕಲ್ ವಿತ್ ರೆಸ್ಪೆಕ್ಟ್) ಎಂಬ ಹೆಸರಿನ ಈ ಅತ್ಯಾಧುನಿಕ ಘಟಕವು ಪರಿಸರ ಸ್ನೇಹಿ ಪ್ರಕ್ರಿಯೆಯ ಮೂಲಕ ವರ್ಷದಲ್ಲಿ 21,000 ಜೀವಿತಾವಧಿ ಮುಗಿದ ವಾಹನಗಳನ್ನು ಸುರಕ್ಷಿತವಾಗಿ ಡಿಸ್ಅಸೆಂಬಲ್ (ಸ್ಕ್ರಾಪ್ ಮಾಡುವ) ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಟಾಟಾದ ಈ ಹೊಸ ಘಟಕವನ್ನು ಟಾಟಾ ಇಂಟರ್‌ನ್ಯಾಷನಲ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿರುವ ಟಾಟಾ ಇಂಟರ್‌ನ್ಯಾಷನಲ್ ವೆಹಿಕಲ್ ಅಪ್ಲಿಕೇಷನ್ಸ್ (ಟಿಐವಿಎ) ನಿರ್ವಹಿಸಲಿದ್ದು, ಇಲ್ಲಿ ಎಲ್ಲಾ ಬ್ರ್ಯಾಂಡ್‌ಗಳ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ಉದ್ದೇಶ ಹೊಂದಲಾಗಿದೆ.
ಈ ಘಟಕವನ್ನು ಉದ್ಘಾಟಿಸಿದ ಟಾಟಾ ಮೋಟಾರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಗಿರೀಶ್ ವಾಘ್ ಅವರು ಮಾತನಾಡಿ, “ಟಾಟಾ ಮೋಟಾರ್ಸ್ ಸಾರಿಗೆ ಕ್ಷೇತ್ರದ ಭವಿಷ್ಯವನ್ನು ಉಜ್ವಲಗೊಳಿಸುವಲ್ಲಿ ಮುಂಚೂಣಿಯಲ್ಲಿದೆ. ಸಂಸ್ಥೆಯು ತನ್ನ ಅತ್ಯುತ್ತಮ ಉತ್ಪನ್ನಗಳು, ಸೇವೆಗಳು ಮತ್ತು ಡಿಜಿಟಲ್ ಉತ್ಪನ್ನಗಳ ಗ್ರಾಹಕರು ಯಶಸ್ಸು ಗಳಿಸಲು ನೆರವಾಗುತ್ತಿದೆ. ಸರ್ಕ್ಯುಲರ್ ಎಕಾನಮಿ ಅಂದ್ರ ವೃತ್ತಾಕಾರದ ಆರ್ಥಿಕತೆಯನ್ನು ರಚಿಸುವ ನಮ್ಮ ಬದ್ಧತೆಗೆ ರೀ.ವೈ.ರ್ ಘಟಕವು ಪುರಾವೆಯಾಗಿದೆ. ಇಲ್ಲಿ ಅತ್ಯಾಧುನಿಕ ಮರುಬಳಕೆ ಪ್ರಕ್ರಿಯೆಗಳು ಜರುಗುತ್ತವೆ. ಆ ಮೂಲಕ ಜೀವಿತಾವಧಿ ಮುಗಿದ ವಾಹನಗಳನ್ನು ಉತ್ತಮ ರೀತಿಯಲ್ಲಿ ಮರುಬಳಕೆಗೆ ಒದಗಿಸುವುದು ಮಾತ್ರವಲ್ಲ, ದೇಶದ ಸುಸ್ಥಿರತೆಯ ಗುರಿ ಸಾಧನೆಗೆ ಮಹತ್ವದ ಕೊಡುಗೆ ನೀಡಲಾಗುತ್ತದೆ. ಟಾಟಾ ಇಂಟರ್‌ನ್ಯಾಷನಲ್ ಸಂಸ್ಥೆಯು ಹಲವಾರು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ನಮ್ಮ ಪಾಲುದಾರರಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ರೀ.ವೈ.ರ್ ಘಟಕದ ಮೂಲಕ ಈ ದೀರ್ಘಾವಧಿಯ ಪಾಲುದಾರಿಕೆಯ ಹೊಸ ಅಧ್ಯಾಯವನ್ನು ಆರಂಭಿಸಲು ನಾವು ಸಂತೋಷ ಪಡುತ್ತೇವೆ”ಎಂದು ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಟಾಟಾ ಇಂಟರ್‌ನ್ಯಾಷನಲ್ ವೆಹಿಕಲ್ ಅಪ್ಲಿಕೇಷನ್ಸ್ ನ ಸಿಇಓ ಶ್ರೀ ರಾಜೀವ್ ಬಾತ್ರಾ ಅವರು , “ಟಿಐವಿಎ ಮತ್ತು ಟಾಟಾ ಮೋಟಾರ್ಸ್ ಭಾರತದಲ್ಲಿ ವಾಹನಗಳ ಜೀವಿತಾವಧಿಯ ನಿರ್ವಹಣೆಯಲ್ಲಿ ಬದಲಾವಣೆ ಉಂಟು ಮಾಡುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆಯನ್ನು ಇಟ್ಟಿವೆ. ವಾರ್ಷಿಕವಾಗಿ 21,000 ವಾಹನಗಳನ್ನು ಡಿಸ್ಮ್ಯಾಂಟಲ್ ಮಾಡುವ ಸಾಮರ್ಥ್ಯ ಹೊಂದಿರುವ ಈ ಹೊಸ ಘಟಕವನ್ನು ದಕ್ಷ ಮತ್ತು ಸುರಕ್ಷಿತವಾದ ವಾಹನ ಮರುಬಳಕೆಯ ಪ್ರಕ್ರಿಯೆಯ ಅಗತ್ಯವನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ.
ನಮ್ಮ ಸಮಾಜಕ್ಕೆ ಸುಸ್ಥಿರ ಮತ್ತು ಸಂಘಟಿತ ಪರಿಸರ ವ್ಯವಸ್ಥೆಯನ್ನು ರೂಪಿಸಲು ಜೀವಿತಾವಧಿ ಮುಗಿದ ವಾಹನಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕಾದ ಅಗತ್ಯವನ್ನು ನಾವು ಅರಿತುಕೊಂಡಿದ್ದೇವೆ. ಈ ನಮ್ಮ ಹೊಸ ಯೋಜನೆಯು ಸಮರ್ಪಕ ವಾಹನ ರೀಸೈಕ್ಲಿಂಗ್ ವ್ಯವಸ್ಥೆಯನ್ನು ಒದಗಿಸಿ ಸುಸ್ಥಿರತೆ ಕಡೆ ಸಾಗುವ ಭಾರತದ ಉದ್ದೇಶಕ್ಕೆ ಬಹಳ ನೆರವಾಗಲಿದೆ. ಟಿಐವಿಎಯಲ್ಲಿ ನಾವು ನಮ್ಮ ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಮುಂದೆ ಸಾಗುತ್ತಿರುತ್ತೇವೆ” ಎಂದು ಹೇಳಿದರು.
ರೀ.ವೈ.ರ್ ಒಂದು ಅತ್ಯಾಧುನಿಕ ಘಟಕವಾಗಿದ್ದು, ಇಲ್ಲಿ ಪರಿಸರ ಸ್ನೇಹಿ ಪ್ರಕ್ರಿಯೆಯ ಮೂಲಕ ಜೀವಿತಾವಧಿ ಮುಗಿದ ಎಲ್ಲಾ ಬ್ರಾಂಡಿನ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳನ್ನು ಡಿಸ್ ಮ್ಯಾಂಟಲ್ ಮಾಡುವ ಅಥವಾ ಸ್ಕ್ರಾಪ್ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಜೈಪುರ, ಭುವನೇಶ್ವರ, ಸೂರತ್, ಚಂಡೀಗಢ ಮತ್ತು ದೆಹಲಿ ಎನ್ ಸಿ ಆರ್ ನಲ್ಲಿ ಈಗಾಗಲೇ ರೀ.ವೈ.ರ್ ಘಟಕಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ.
ಪ್ರತಿಯೊಂದು ರೀ.ವೈ.ರ್ ಘಟಕವು ಸಂಪೂರ್ಣವಾಗಿ ಡಿಜಿಟಲೀಕರಣಗೊಂಡಿದ್ದು, ಅದರ ಎಲ್ಲಾ ಕಾರ್ಯಾಚರಣೆಗಳು ಕಾಗದರಹಿತವಾಗಿರುತ್ತದೆ ಮತ್ತು ನಿರಂತರವಾಗಿರುತ್ತದೆ. ವಾಣಿಜ್ಯ ಮತ್ತು ಪ್ರಯಾಣಿಕ ವಾಹನಗಳಿಗೆ ಸೆಲ್-ಟೈಪ್ ಮತ್ತು ಲೈನ್-ಟೈಪ್ ಡಿಸ್ಮಾಂಟ್ಲಿಂಗ್ ವ್ಯವಸ್ಥೆಯನ್ನು ಹೊಂದಿರುವ ಈ ಘಟಕವು ಟೈರ್‌ಗಳು, ಬ್ಯಾಟರಿಗಳು, ಇಂಧನ, ತೈಲಗಳು, ಲಿಕ್ವಿಡ್ ಗಳು ಮತ್ತು ಗ್ಯಾಸ್ ಸೇರಿದಂತೆ ವಿವಿಧ ಘಟಕಗಳನ್ನು ಸುರಕ್ಷಿತವಾಗಿ ಕಿತ್ತುಹಾಕಲು ಅಥವಾ ಡಿಸ್ ಮ್ಯಾಂಟಲ್ ಮಾಡಲು ಸೂಕ್ತವಾದ ವ್ಯವಸ್ಥೆಯನ್ನು ಹೊಂದಿವೆ. ಪ್ರತಿ ವಾಹನದ ಮಾಹಿತಿಯನ್ನು ನಿಖರವಾಗಿ ದಾಖಲಿಸಿಕೊಳ್ಳಲಾಗುತ್ತದೆ ಮತ್ತು ವಿಶೇಷವಾಗಿ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳನ್ನು ಜವಾಬ್ದಾರಿಯುತವಾಗಿ ಸ್ಕ್ರ್ಯಾಪಿಂಗ್ ಮಾಡುವಂತೆ ಈ ಘಟಕವನ್ನು ವಿನ್ಯಾಸಗೊಳಿಸಲಾಗಿದೆ. ರಾಷ್ಟ್ರದ ವಾಹನ ಸ್ಕ್ರ್ಯಾಪೇಜ್ ನೀತಿಯ ಪ್ರಕಾರವೇ ವಾಹನಗಳ ಎಲ್ಲಾ ಘಟಕಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲಾಗುತ್ತದೆ. ಈ ರೀ.ವೈ.ರ್ ಘಟಕದ ಪರಿಕಲ್ಪನೆ ಮತ್ತು ಘಟಕದ ಸ್ಥಾಪನೆ ಆಟೋಮೋಟಿವ್ ಉದ್ಯಮದಲ್ಲಿ ಸುಸ್ಥಿರ ಪದ್ಧತಿಗಳನ್ನು ಪಾಲಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿದೆ.
ಟಾಟಾ ಇಂಟರ್ ನ್ಯಾಷನಲ್ ವೆಹಿಕಲ್ ಅಪ್ಲಿಕೇಷನ್ಸ್ (ಟಿಐವಿಎ) ಭಾರತದ ಅತಿದೊಡ್ಡ ಟ್ರೇಲರ್ ತಯಾರಕರಾಗಿದ್ದು, ಅಜ್ಮೇರ್, ಜಮ್ಶೆಡ್‌ಪುರ ಮತ್ತು ಪುಣೆಯಲ್ಲಿ ನಾಲ್ಕು ಅತ್ಯಾಧುನಿಕ ಉತ್ಪಾದನಾ ಘಟಕಗಳನ್ನು ಹೊಂದಿದೆ. ಕಂಪನಿಯು ಟ್ರೇಲರ್ ಮತ್ತು ಟ್ರಕ್ ಬಾಡಿ ಉತ್ಪಾದನಾ ವಲಯದಲ್ಲಿ ಪ್ರಮುಖ ಸಂಸ್ಥೆಯಾಗಿ ಬೆಳೆದಿದೆ. ಸಂಸ್ಥೆಯು ಅತ್ಯಾಧುನಿಕ ಎಂಜಿನಿಯರಿಂಗ್ ತಂತ್ರಗಳನ್ನು ಹೊಂದಿದೆ ಮತ್ತು ವೈವಿಧ್ಯಮಯ ಉತ್ಪನ್ನಗಳನ್ನು ಒದಗಿಸುವ ಸಾಮರ್ಥ್ಯವನ್ನು ಕೂಡ ಗಳಿಸಿದೆ.