Sunday, 11th May 2025

ವಿದ್ಯಾರ್ಥಿಗಳ ತೇಜೋವಧೆ ಮಾಡುವ ಹುನ್ನಾರ

ಮಧುಗಿರಿ : ಪಟ್ಟಣದ ದಂಡಿನ ಮಾರಮ್ಮನ ದೇವಸ್ಥಾನದ ಸಮೀಪ ಇರುವ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ – ೧ ರಲ್ಲಿ ಕೆಲವರು ದಲಿತ ವಿದ್ಯಾರ್ಥಿಗಳ ಮೇಲೆ ವಿನಾಕಾರಣ ಆರೋಪ ಹೊರಿಸಿದ್ದು, ಇದು ವಿದ್ಯಾರ್ಥಿಗಳ ತೇಜೋವಧೆ ಮಾಡುವ ಹುನ್ನಾರ ಎಂದು ಆರೋಪಿಸಿ ಇಲ್ಲಿನ ಹಾಸ್ಟೆಲ್ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ದಲಿತ ಒಕ್ಕೂಟಗಳ ಅಧ್ಯಕ್ಷ ಸಂಜೀವ್ ಮೂರ್ತಿ ಮಾತನಾಡಿ ಇತ್ತೀಚೆಗೆ ಕೆಲವರು ಹಾಸ್ಟೆಲ್ ಗೆ ವಿನಾಕಾರಣ ಭೇಟಿ ನೀಡಿ ಹಾಸ್ಟೆಲ್ ವಿದ್ಯಾರ್ಥಿಗಳು ಬೀಡಿ ಸಿಗರೇಟು ಸೇದುತ್ತಿದ್ದಾರೆ ಎಂದು ಸುಳ್ಳು ಆರೋಪ ಹೊರಿಸಿದ್ದು, ವಿದ್ಯಾರ್ಥಿಗಳ ಪೋಷಕರು ಮನೆಗಳಿಂದ ವಿದ್ಯಾರ್ಥಿಗಳಿಗೆ ಕರೆ ಮಾಡಿ ನಿಮ್ಮ ಹಾಸ್ಟೆಲ್ ನಲ್ಲಿ ಬಿಡಿ ಸಿಗರೇಟ್ ಸೇದು ತ್ತಿದ್ದಾರಂತೆ ಸತ್ಯವೇ ಎಂದು ವಿಚಾರಿಸಿದ್ದು, ಇದರಿಂದ ದಲಿತ ವರ್ಗದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ಅಲ್ಲದೇ ಇಲ್ಲಿನ ಹಾಸ್ಟೆಲ್ ವಾರ್ಡನ್ ಚಿಕ್ಕ ರಂಗಯ್ಯನವರು ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದು, ಇವರು ಇಲ್ಲಿ ವಾರ್ಡನ್ ಆದ ನಂತರ ಹಾಸ್ಟೆಲ್ ನಲ್ಲಿ ಊಟ ವಸತಿ ಸೌಕರ್ಯದಲ್ಲಿ ಗುಣಮಟ್ಟ ಕಾಪಾಡುವುದರ ಜೊತೆಗೆ ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಲು ಕಾರಣೀಭೂತರಾಗಿದ್ದು, ಅವರ ಮೇಲೆ ಆರೋಪ ಹೊರಿಸು ವುದು ಸರಿಯಲ್ಲ ಅಲ್ಲದೆ ಕೋವಿಡ್ ಸಂದರ್ಭದಲ್ಲಿ ವಾರ್ಡನ್ ಚಿಕ್ಕರಂಗಪ್ಪ ತಮ್ಮ ಪ್ರಾಣದ ಹಂಗು ತೊರೆದು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಅತ್ಯುತ್ತಮ ವಾಗಿ ಕೆಲಸ ನಿರ್ವಹಿಸಿ ಉತ್ತಮ ಹೆಸರು ಗಳಿಸಿ ಎಲ್ಲರಿಂದ ಸೈ ಅನ್ನಿಸಿಕೊಂಡಿದ್ದಾರೆ.

ಕೆಲವರು ಪಟ್ಟಭದ್ರ ಹಿತಾಸಕ್ತಿಗಳೊಂದಿಗೆ ಸೇರಿ ಇವರ ವಿರುದ್ಧ ಪಿತೂರಿ ನಡೆಸಿ ಇವರಿಗೆ ತೊಂದರೆ ಮಾಡಲು ಪ್ರಯತ್ನಿಸು ತ್ತಿದ್ದಾರೆ. ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡದೆ ಇದೆ ಹಾಸ್ಟೆಲ್ ನಲ್ಲಿ ಮುಂದುವರಿಸಬೇಕು ಎಂದು ವಿದ್ಯಾರ್ಥಿಗಳೊಂದಿಗೆ ಒತ್ತಾಯಿಸಿದ ಅವರು ಮುಂದಿನ ದಿನಗಳಲ್ಲಿ ಇದೇ ರೀತಿ ನಮ್ಮ ದಲಿತ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿ ಸಮಾಜ ಕಲ್ಯಾಣ ಇಲಾಖೆ ಕಚೇರಿಯ ಎಸ್‌ಡಿಎ ರವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಹಿಡಿದು ದಲಿತ ವಿರೋಧಿಗಳಿಗೆ ದಿಕ್ಕಾರ ಕೂಗುತ್ತಾ ನಮ್ಮ ದಲಿತರ ಹಾಸ್ಟೆಲ್ ಗೆ ನೀವುಗಳು ಬರಬಾರದೆಂದು ಬಹಿಷ್ಕಾರ ಹಾಕಿದರು.

ಈ ಸಂದರ್ಭದಲ್ಲಿ ದಲಿತ ಸಾಹಿತ್ಯ ಪರಿಷತ್ತು ವಿದ್ಯಾರ್ಥಿ ಘಟಕದ ಪದಾಧಿಕಾರಿಗಳಾದ ಡಿ. ಶಶಿಕುಮಾರ್, ಮನೋಜ್, ನವೀನ್, ಜಿ.ಎಂ. ಗೋವರ್ಧನ್, ಎಸ್.ಎನ್. ತರುಣ್, ಎಂ. ನರೇಶ್ ನಾಯ್ಕ, ಎಂ.ಡಿ. ತಿಪ್ಪೇಸ್ವಾಮಿ, .ಆರ್. ರಾಜೇಶ್, ಎಸ್. ಶ್ರೀಧರ್, ಆರ್. ಯಶ್ವಂತ್ ಕುಮಾರ್, ಜಿ. ನರಸಿಂಹರಾಜು ಹಾಗೂ ೧೫೦ ಕ್ಕೂ ಹೆಚ್ಚು ದಲಿತ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವ ಹಿಸಿದ್ದರು.

 
Read E-Paper click here