ತುಮಕೂರು: ಸಮಾಜವನ್ನು ತಿದ್ದುವ ಕಾರ್ಯವನ್ನು ಪತ್ರಕರ್ತರು ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಅಧಿಕಾರದಲ್ಲಿದ್ದಾಗ ಪತ್ರಕರ್ತರ ಅಭ್ಯುದಯಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೇನೆಂಬ ಆತ್ಮತೃಪ್ತಿ, ಸಂತಸ ನನಗಿದೆ. ಸಂವಿಧಾನದ ೪ನೇ ಅಂಗವಾದ ಪತ್ರಿಕಾ ರಂಗವು ಕೋವಿಡ್ ಸಂದರ್ಭದಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡಿರುವುದು ಶ್ಲಾಘನೀಯ ವಾದುದು. ಈ ಹಿನ್ನೆಲೆಯಲ್ಲಿ ಪತ್ರಕರ್ತರನ್ನು ಕೋವಿಡ್ ವಾರಿಯರ್‌ಗಳೆಂದು ಘೋಷಿಸಿ ಪತ್ರಿಕಾ ವಿತರಕರೂ ಸೇರಿ ಸುಮಾರು ೨೫೦೦೦ಕ್ಕೂ ಹೆಚ್ಚು ಪತ್ರಕರ್ತರು ಹಾಗೂ ಅವರ ಕುಟುಂಬದವರಿಗೆ ಉಚಿತ ಕೋವಿಡ್ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಲಾಗಿತ್ತು.
ಕೋವಿಡ್ ಸಂದರ್ಭದಲ್ಲಿ ಸಾಮಾಜಿಕ ಹೊಣೆಗಾರಿಕೆಯಿಂದ ದುಡಿದು ಸೋಂಕಿನಿAದ ಮೃತಪಟ್ಟ ರಾಜ್ಯದ ಪತ್ರಕರ್ತ ಕುಟುಂಬ ಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ೫ಲಕ್ಷ ರೂ.ಗಳ ಪರಿಹಾರ ನೀಡಲಾಗಿದೆ ಎಂದರು. ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಪತ್ರಕರ್ತರ ಲೇಖನಗಳಿಗೆ ಸರ್ಕಾರಗಳೇ ಉರುಳಿ ಹೋದ ನಿದರ್ಶನಗಳಿವೆ. ಪತ್ರಕರ್ತನು ಪ್ರಜೆಗಳ ದನಿಯಾಗಿ ಅವರ ತುಡಿತಗಳನ್ನು ಸರ್ಕಾರಕ್ಕೆ ಮುಟ್ಟಿಸುವ ಕೆಲಸ ಮಾಡಬೇಕಾಗುತ್ತದೆ.
ಪತ್ರಿಕಾ ವೃತ್ತಿಯಲ್ಲಿ ಹಣ ಮಾಡಲು ಬರುವವರು ಕ್ಷಣಿಕ ಆನಂದವನ್ನಷ್ಟೆ ಹೊಂದಬಹುದು. ಆದರೆ ಉತ್ತಮ ಧ್ಯೇಯೋದ್ದೇಶ ಗಳನ್ನಿಟ್ಟುಕೊಂಡ ವೃತ್ತಿಧರ್ಮ ಪಾಲಿಸುವ ಪತ್ರಕರ್ತ ಮಾತ್ರ ಯಶಸ್ವಿ ಕಾಣುತ್ತಾನೆ ಎಂದರು. ಸ್ವಂತ ಕಟ್ಟಡಕ್ಕೆ ನಿವೇಶನ ಒದಗಿಸಲು ತುಮಕೂರು ಜಿಲ್ಲೆಯ ಪತ್ರಕರ್ತರ ಸಂಘದ ಬೇಡಿಕೆಯಂತೆ ಶಾಸಕರು, ಸಂಸದರು, ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಕೋವಿಡ್‌ನಲ್ಲಿ ಮೃತಪಟ್ಟ ರಾಜ್ಯದ ಸುಮಾರು ೫೫ ಪತ್ರಕರ್ತ ಕುಟುಂಬಗಳಿಗೆ ತಲಾ ೫ಲಕ್ಷ ರೂ. ಪರಿಹಾರ ನೀಡಲು ಮುಖ್ಯಮಂತ್ರಿಯಾಗಿದ್ದ ಯಡಿಯೂ ರಪ್ಪ ಅವರಿಂದ ಸಾಧ್ಯವಾಯಿತು. ಅಲ್ಲದೆ ಮಾಧ್ಯಮಗಳಿಗೆ ಒಂದೂವರೆ ವರ್ಷಗಳಿಂದ ಬಾಕಿ ಬರಬೇಕಿದ್ದ ೫೬ ಕೋಟಿ ರೂ.ಗಳ ಜಾಹೀರಾತು ವೆಚ್ಚವನ್ನು ಬಿಡುಗಡೆ ಮಾಡಲು ತಕ್ಷಣವೇ ಆದೇಶ ಮಾಡುವ ನಿರ್ಣಯ ಕೈಗೊಂಡರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ತಲಾ ೨೫ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದ ಕೀರ್ತಿ ಯಡಿಯೂ ರಪ್ಪ ಅವರದು ಎಂದರು. ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಹೇಮಾವತಿ ನೀರು ತುಮಕೂರಿಗೆ ಬರಲು ಯಡಿಯೂ ರಪ್ಪ ಅವರೇ ಮುಖ್ಯ ಕಾರಣ. ಮುಖ್ಯಮಂತ್ರಿಯಾದ ಕೂಡಲೇ ಹೇಮಾವತಿ ನಾಲೆ ಆಧುನೀಕರಣಕ್ಕಾಗಿ ೪೫೦ ಕೋಟಿ ರೂ. ಮಂಜೂರು ಮಾಡಿದರು. ಹೇಮಾವತಿ ನೀರು ಒದಗಿಸಿದ ಪರಿಣಾಮ ಅತಿ ಹಿಂದುಳಿದ ತಾಲೂಕಿನ ಪಟ್ಟಿಯಲ್ಲಿದ್ದ ಜಿಲ್ಲೆಯ ಗುಬ್ಬಿ ತಾಲೂಕು ಇಂದು ಸಂಪದ್ಭರಿತ ತಾಲೂಕು ನೆಸಿಕೊಂಡಿದೆ ಎಂದು ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದರು.
ಕೊರಟಗೆರೆ ತಾಲೂಕು ಶ್ರೀ ಕ್ಷೇತ್ರ ಸಿದ್ಧರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪತ್ರಕರ್ತರ ಸಂಘವು ಗ್ರಾಮೀಣ ಭಾಗದ ಪತ್ರಕರ್ತರ ಶ್ರೇಯೋಭಿವೃದ್ಧಿಯತ್ತ ಗಮನಹರಿಸಬೇಕು ಎಂದರಲ್ಲದೆ ಪತ್ರಕರ್ತರು ನಕರಾತ್ಮಕ ವಿಷಯವನ್ನಷ್ಟೆ ಅಲ್ಲದೆ ಉತ್ತಮ ವಿಷಯ, ಸಾಧನೆಗಳ ಬಗ್ಗೆ ವರದಿ ಮಾಡುವತ್ತ ಒಲವು ತೋರಬೇಕು.
ಇಂತಹ ವರದಿಗಳು ಇತರರಿಗೆ ಮಾದರಿಯಾಗುತ್ತದೆ ಎಂದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನೀ. ಪುರುಷೋತ್ತಮ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಐ.ಎಫ್.ಡಬ್ಲೂ.ಜೆ.ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ನೂತನ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಶಾಸಕ ಜಿ.ಬಿ. ಜ್ಯೋತಿಗಣೇಶ್, ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಗಂಗಹನುಮಯ್ಯ, ಮೇಯರ್ ಬಿ.ಜಿ. ಕೃಷ್ಣಪ್ಪ, ಟೂಡಾ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ, ಮಾಜಿ ವಿಧಾನ ಪರಿಷತ್ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್, ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.