Saturday, 10th May 2025

Robot Technology: ಬೆಂಗಳೂರಿನ ಗಿರಿನಗರದ ಆಡೆನ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಗಳಿಂದ‘ವಿದ್ಯೋತ್ಸವ’ -ಅಪರೂಪದ ವೈಜ್ಞಾನಿಕ, ತಾಂತ್ರಿಕ ಮತ್ತು ಸಾಂಸ್ಕೃತಿಕ ಪ್ರದರ್ಶನ

ಕಣ್ಮನ ಸೆಳೆದ ವಿದ್ಯಾರ್ಥಿಗಳು ತಯಾರಿಸಿದ ರೋಬೋಟ್ ತಂತ್ರಜ್ಞಾನ

ಬೆಂಗಳೂರು: ಬೆಂಗಳೂರು ನಗರದ ಪ್ರತಿಷ್ಠಿತ ಗಿರಿನಗರದ ಆಡೆನ್ ಪಬ್ಲಿಕ್ ಶಾಲೆಯು ಸುಮಾರು ವರ್ಷಗಳಿಂದ ಗುಣಮಟ್ಟದ ಶಿಕ್ಷಣ ಮತ್ತು ಕೌಶಲ್ಯಗಳೊಂದಿಗೆ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣವನ್ನು ಸಂಸ್ಥಾಪಕರಾದ ರಾಮಣ್ಣ ನವರ ಮಾರ್ಗದರ್ಶನದಲ್ಲಿ ನೀಡುತ್ತಾ ಬಂದಿದೆ. ಇದಕ್ಕೆ ಸಹಕಾರಿ ಎಂಬಂತೆ ಶಾಲೆಯ ನಿರ್ದೇಶಕರಾದ ಶ್ರೀಮತಿ ಮೀನಾ ಎನ್. ಆರ್. ರವರ ದೂರದೃಷ್ಟಿ ಹಾಗು ಆಧುನಿಕ ಶಿಕ್ಷಣ ವ್ಯವಸ್ಥೆಯ ಅಳವಡಿಕೆಯಿಂದ ಸಂಸ್ಥೆಯು ತನ್ನದೇ ಆದ ಹೆಜ್ಜೆ ಗುರುತನ್ನು ಹೊಂದಿ ಹೆಮ್ಮರವಾಗಿ ಬೆಳೆದು ನಿಂತಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶಾಲೆಯ 1ನೇ ತರಗತಿಯಿಂದ 10ನೇ ತರಗತಿಯವರೆಗಿನ ಮಕ್ಕಳಿಗಾಗಿ ‘ವಿದ್ಯೋತ್ಸವ’ ಎಂಬ ಹೆಸರಿನಲ್ಲಿ ವೈಜ್ಞಾನಿಕ, ತಾಂತ್ರಿಕ ಮತ್ತು ಸಾಂಸ್ಕೃತಿಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಜೊತೆಗೆ ಇಂಗ್ಲೀಷ್ ಮತ್ತು ಕನ್ನಡದ ನಾಟಕಗಳು, ಶಾಸ್ತ್ರೀಯ ಮತ್ತು ಪಾಶ್ಚಾತ್ಯ ನೃತ್ಯ, ವಾದ್ಯ ಸಂಗೀತ, ಯೋಗ ವನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳ ಜೊತೆಗೆ ಅವರ ಪೋಷಕರು ಸಹ ಭಾಗಿಯಾಗಿದ್ದು ಕಾರ್ಯಕ್ರಮಕ್ಕೆ ಹೊಸ ಹೊಳಪು ನೀಡಿತ್ತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆರ್ ಎನ್ ಎಸ್ ಸಮೂಹ ಸಂಸ್ಥೆಯ ಕೆ. ಮುರಳೀಕೃಷ್ಣ ಭಾಗವಹಿಸಿ ದ್ದರು ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀ ರಾಮಣ್ಣನವರು ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ನಿರ್ದೇಶಕಿಯಾದ ಶ್ರೀಮತಿ ಮೀನಾ ಎನ್.ಆರ್. ಮತ್ತು ಶಾಲೆಯ ಸಿಬ್ಬಂದಿ ವರ್ಗ ಭಾಗವಹಿಸಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಅತಿಥಿ ಕೆ. ಮುರಳೀಕೃಷ್ಣರವರು ‘ಆಡೆನ್ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರು ಭೋದಿಸುವ ರೀತಿ ನಿಜಕ್ಕೂ ಶ್ಲಾಘನೀಯ. ಈ ಪ್ರದರ್ಶನ ಕಾರ್ಯಕ್ರಮವು ವಿಜ್ಞಾನ, ತಾಂತ್ರಿಕತೆ ಮತ್ತು ಸಂಸ್ಕೃತಿ ಯ ಮಿಶ್ರಣವಾಗಿದೆ. ಭಾರತೀಯ ಸಂಸ್ಕೃತಿಯ ಬಗ್ಗೆ ವಿಧವಿಧವಾಗಿ ಈ ಪ್ರದರ್ಶನದ ಮೂಲಕ ವಿವರಿಸಲಾಗಿದೆ. ಇದು ಮರೆಯಲಾಗದ ಒಂದು ಅನುಭವ. ಅದರಲ್ಲಿಯೂ ಮಕ್ಕಳು ತಯಾರಿಸಿರುವ ರೋಬೋಟ್ ಇವರ ಬುದ್ಧಿಶಕ್ತಿಗೆ ಒಂದು ಸವಾಲಾಗಿದೆ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಶ್ರೀ ರಾಮಣ್ಣನವರು ಮಾತನಾಡಿ ‘ವಿದ್ಯೋತ್ಸವ’ ಕಾರ್ಯಕ್ರಮವು ಮಕ್ಕಳ ಪ್ರತಿಭೆಗೆ ಸಾಕ್ಷಿ ಯಾಗಿದೆ. ಇಲ್ಲಿ ಪ್ರತಿಯೊಂದು ಮಗುವು ತನ್ನದೇ ಆದ ಪ್ರತಿಭೆಯನ್ನು ಪ್ರದರ್ಶನದ ಮೂಲಕ ತೋರಿಸಿ ಸಮಾಜಕ್ಕೆ ತಿಳಿಹೇಳಿದಂತಿದೆ. ಪ್ರತಿಯೊಂದು ಮಗುವಿನ ಇಚ್ಛಾ ಶಕ್ತಿಯ ಮೇರೆಗೆ ಆ ಮಕ್ಕಳಿಗೆ ಅದರಲ್ಲಿ ನಾವು ತರಬೇತಿ ನೀಡಿ ಮುಂದಿನ ಒಳ್ಳೆಯ ಪ್ರಜೆಯಾಗಲು ನಮ್ಮ ಶಾಲೆಯ ಮುಖಾಂತರ ಸಹಕಾರ ನೀಡುತ್ತಿದ್ದೇವೆ. ಅದರಂತೆಯೇ ಪೋಷಕರು ಸಹ ತಮ್ಮ ಮಕ್ಕಳಿಗೆ ಸಹಕಾರವನ್ನು ನೀಡಿರುವ ಕಾರಣ ಈ ಪ್ರದರ್ಶನವು ತುಂಬಾ ಉನ್ನತ ಮಟ್ಟದಲ್ಲಿ ಗೆಲುವು ಸಾಧಿಸಿದೆ ಎಂದು ಅಭಿಪ್ರಾಯ ಪಟ್ಟರು.

ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಮೀನಾ ರವರು ಮಾತನಾಡಿ ಮಾತನಾಡಿ ಶಾಲೆಯು ನಡೆದು ಬಂದ ಹಾದಿ, ಶಾಲೆಯಲ್ಲಿನ ಒಳ್ಳೆಯ ಶಿಕ್ಷಕ ಮತ್ತು ಶಿಕ್ಷಕಿಯರು, ಆಧುನಿಕ ತಂತ್ರಜ್ಞಾನದ ಶಿಕ್ಷಣ, ಶಾಲೆಯಲ್ಲಿ ಮಕ್ಕಳಿಗೆ ನೀಡುತ್ತಿರುವ ಕ್ರೀಡಾ ತರಬೇತಿ, ಯೋಗ ಇತ್ಯಾದಿಗಳ ಬಗ್ಗೆ ಬೆಳಕು ಚೆಲ್ಲಿದರು. ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದು ಪೋಷಕರ ಮತ್ತು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಜೊತೆ ಸೇರಿ ವಿದ್ಯಾರ್ಥಿಗಳ ಭವಿಷ್ಯವನ್ನು ಪ್ರಜ್ವಲಗೊಳ್ಳುವಂತೆ ಮಾಡುವುದು ಅವಶ್ಯ ವಾಗಿದೆ ಎಂದರು.

ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಪ್ರತಿಮಾ ಶ್ರೀವತ್ಸವಾ ರವರು ಪ್ರದರ್ಶನಕ್ಕೆ ಶ್ರಮಿಸಿದ ಎಲ್ಲ ವಿದ್ಯಾರ್ಥಿಗಳು, ಪೋಷಕರು, ಶಾಲೆಯ ಸಿಬ್ಬಂದಿ ವರ್ಗ ಮತ್ತು ಸಹೋದ್ಯೋಗಿಗಳಿಗೆ ನಮನ ಸಲ್ಲಿಸಿದರು.

ಪ್ರದರ್ಶನದ ಜೊತೆಗೆ ಮಕ್ಕಳ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಕನ್ನಡ ಮತ್ತು ಇಂಗ್ಲೀಷ್ ನಾಟಕ, ಯೋಗ ತರಬೇತಿ, ನೃತ್ಯ ಎಲ್ಲರ ಮನಸೂರೆಗೊಂಡವು