Sunday, 11th May 2025

Protest: ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ಡಿ.23 ರಂದು ಬೃಹತ್ ಪ್ರತಿಭಟನೆ

ಗುಬ್ಬಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಲಘುವಾಗಿ ಮಾತನಾಡಿದ್ದಲ್ಲದೆ ಅಂಬೇಡ್ಕರ್ ಅನುಯಾಯಿಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಸಂಸತ್ತಿ ನಲ್ಲಿ ನೀಡಿರುವುದು ಖಂಡಿಸಿ ದಲಿತ ಪರ ಸಂಘಟನೆಗಳು ಹಾಗೂ ಅಲ್ಪಸಂಖ್ಯಾತ, ಹಿಂದುಳಿದ ವರ್ಗದ ಸಂಘಟನೆ ಗಳು ಇದೇ ತಿಂಗಳ 23 ರಂದು ಉಗ್ರ ಹೋರಾಟಕ್ಕೆ ಕರೆ ನೀಡಲು ಪೂರ್ವಬಾವಿ ಸಭೆಯಲ್ಲಿ ನಿರ್ಧರಿಸ ಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಸಂವಿಧಾನ ಪವಿತ್ರ ಗ್ರಂಥ ರಚಿಸಿದ ಅಂಬೇಡ್ಕರ್ ಅವರು ದೈವಿ ಸ್ವರೂಪ. ಇವರ ಸ್ಮರಣೆ ಮಾಡುವುದು ಸಹಿಸದ ಅಸಹಿಷ್ಣುತೆ ವಾದ ಅಮಿತ್ ಷಾ ಅವರಿಂದ ಬಯಲಾಗಿದೆ. ಅಂಬೇಡ್ಕರ್ ಬಗ್ಗೆ ಹಗುರ ಮಾತು, ಅವರ ಸ್ಮರಣೆ ಮಾಡುವುದಕ್ಕಿಂತ ದೇವರ ಸ್ಮರಣೆ ಮಾಡಿ ಎಂದಿರುವುದು ಖಂಡ ನೀಯ. ಅವರ ದೃಷ್ಟಿಯಲ್ಲಿ ಅಂಬೇಡ್ಕರ್ ಏನೆಂದು ಭಾಸವಾಗಿದೆ ಎಂದು ಎಲ್ಲಾ ಮುಖಂಡರು ಒಕ್ಕೊರಲಿನ ಆಕ್ರೋಶ ವ್ಯಕ್ತಪಡಿಸಿದರು.

ದಸಂಸ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಮಾತನಾಡಿ ರಾಜ್ಯಸಭೆಯಲ್ಲಿ ಕೆಟ್ಟ ಮಾತುಗಳಲ್ಲೇ ಅಂಬೇಡ್ಕರ್ ಪೂಜಿಸುವ ಅನುಯಾಯಿಗಳ ಬಗ್ಗೆ ಅವಹೇಳನ ಮಾಡಿರುವುದು ಖಂಡನೀಯ. ಅಂಬೇಡ್ಕರ್ ರಚಿಸಿದ ಸಂವಿಧಾನ ಅಡಿಯಲ್ಲಿ ರಾಜಕೀಯ ಮಾಡುತ್ತಾ ಅಧಿಕಾರ ನಡೆಸುತ್ತಿರುವ ಅಮಿತ್ ಷಾ ಅವರು ಗೃಹ ಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಯೋಗ್ಯರಲ್ಲ. ಕೂಡಲೇ ರಾಜೀನಾಮೆ ಸಲ್ಲಿಸಬೇಕು. ಇಲ್ಲವಾದಲ್ಲಿ ರಾಷ್ಟ್ರಪತಿಗಳು ಅವರ ಸ್ಥಾನದ ಕೆಳಗಿಳಿಸಬೇಕು ಎಂದು ಒತ್ತಾಯಿಸಿ ಇದೇ ವಿಚಾರವಾಗಿ ಡಿ.23 ಸೋಮವಾರ ಗುಬ್ಬಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತಿದೆ. ಎಲ್ಲಾ ಅಂಬೇಡ್ಕರ್ ಅಭಿಮಾನಿಗಳು ಆಗಮಿಸಲು ಮನವಿ ಮಾಡಿದರು.

ಜಿಪಂ ಮಾಜಿ ಸದಸ್ಯ ಜಿ.ಎಚ್.ಜಗನ್ನಾಥ್ ಮಾತನಾಡಿ ಜವಾಬ್ದಾರಿ ಸ್ಥಾನದಲ್ಲಿದ್ದು ಅಮಿತ್ ಷಾ ಅಂಬೇಡ್ಕರ್ ಅವರ ಸ್ಮರಣೆ ಮಾಡುವ ದೀನ ದಲಿತರಿಗೆ ವ್ಯಸನಿ ಎಂಬ ಪದ ಬಳಕೆ ತೀವ್ರ ಖಂಡನೀಯ. ಅಧಿಕಾರ ನಡೆಸಲು ಅಂಬೇಡ್ಕರ್ ಅವರ ಸಂವಿಧಾನ ಬೇಕು. ಆದರೆ ಅಂಬೇಡ್ಕರ್ ವ್ಯಕ್ತಿತ್ವ, ತತ್ವ ಆದರ್ಶ ಮಾತ್ರ ಬೇಕಿಲ್ಲ. ಇದು ಜಾತೀಯತೆಯ ಮನಸ್ಥಿತಿ ಜೀವಂತ ಎಂಬುದು ಬಿಂಬಿಸುತ್ತದೆ. ಅಂಬೇಡ್ಕರ್ ಬಗ್ಗೆ ಮಾತನಾಡಿಲ್ಲ. ಮಾಧ್ಯಮ ತಿರುಚಿದೆ ಎಂದು ಕ್ಷಮೆ ಕೇಳಿದರೂ ನಾವು ಹೋರಾಟ ಮುಂದುವರೆಸಿ ರಾಜೀನಾಮೆ ಸಲ್ಲಿಸಲು ಆಗ್ರಹಿಸೋಣ ಎಂದು ಕರೆ ನೀಡಿದರು.

ಮುಖಂಡ ಚೇಳೂರು ಶಿವನಂಜಪ್ಪ ಮಾತನಾಡಿ ವ್ಯಸನಿಗಳ ಎಂಬ ಪದ ಬಳಕೆ ಅವರ ಜಾತಿ ಮನಸ್ಥಿತಿ ತೋರಿಸಿದೆ. ಇಡೀ ದೇಶಕ್ಕೆ ಆಗಿರುವ ಅವಮಾನ ಇದಾಗಿದೆ. ಸಾಮಾಜಿಕ ನ್ಯಾಯ ಪಡೆದ ಎಲ್ಲಾ ನಾಗರೀಕರಿಗೂ ಆಗಿರುವ ಅಪಮಾನಕ್ಕೆ ತಕ್ಕ ಪಾಠ ಕಲಿಸಬೇಕಿದೆ. ಎಲ್ಲಾ ಅಂಬೇಡ್ಕರ್ ಭಕ್ತರು, ಅಭಿಮಾನಿಗಳು, ಅನುಯಾಯಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕರೆ ನೀಡಿದರು.

ಭಾರತ್ ಭೀಮ್ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಸಚಿನ್ ಮಾತನಾಡಿ ಅಮಿತ್ ಷಾ ಮಾತುಗಳು ಇಡೀ ದೇಶಕ್ಕೆ ಆಗಿರುವ ಅಪಮಾನ. ಅಂಬೇಡ್ಕರ್ ಪೂಜಿಸುವ ಕೋಟ್ಯಾಂತರ ಮಂದಿಗೆ ಈ ರೀತಿ ಹೀಯಾಳಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು. ಕೇಂದ್ರ ಸರ್ಕಾರ ಯೋಜಿಸಬೇಕು. ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿ ಸೋಮವಾರ ನಡೆಯುವ ಬೃಹತ್ ಪ್ರತಿಭಟನೆಗೆ ಅಹಿಂದ ವರ್ಗದ ಎಲ್ಲರೂ ಒಗ್ಗೂಡಿ ಬರಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದಸಂಸ ತಾಲ್ಲೂಕು ಸಂಚಾಲಕ ಕಡಬ ಶಂಕರ್, ಮುಖಂಡರಾದ ಕುಂದರನಹಳ್ಳಿ ನಟರಾಜ್, ಲಕ್ಕೇನಹಳ್ಳಿ ನರಸಿಯಪ್ಪ, ರಾಜಪ್ಪ, ಮಧು, ಇಮ್ರಾನ್, ರಿಜ್ವಾನ್ ಇತರರು ಇದ್ದರು.