Sunday, 11th May 2025

Physical abuse: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಮೂವರಿಗೆ ಜೀವಾವಧಿ ಸಜೆ

ತುಮಕೂರು: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ (Physical abuse) ಎಸಗಿದ್ದ ಮೂವರು ಆರೋಪಿಗಳಿಗೆ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿ, ಎಸ್‌ಸಿ (ಪೋಕ್ಸೋ) ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.

ಮೊದಲನೇ ಆರೋಪಿ ತುರುವೇಕೆರೆಯ ನಾಗೇಂದ್ರನಿಗೆ ಶಿಕ್ಷೆಯ ಜತೆಗೆ 6 ಲಕ್ಷ ರೂ, ಎರಡನೇ ಆರೋಪಿ ರತ್ನಮ್ಮ ಹಾಗೂ ಮೂರನೇ ಆರೋಪಿ ನಾಗರತ್ನಗೆ ತಲಾ 1 ಲಕ್ಷ ರೂ. ದಂಡ ವಿಧಿಸಲಾಗಿದೆ.

2016ರ ಮಾ.5 ರಂದು ಬಾಲಕಿಯು ರೇಷನ್ ತರಲು ಹೋದಾಗ ಆರೋಪಿ ರತ್ನಮ್ಮ ಆಕೆಯನ್ನು ಪರಿಚಯ ಮಾಡಿಕೊಂಡು ಏ. 5 ರಂದು ತನ್ನ ಮನೆಗೆ ಕರೆದುಕೊಂಡು ಹೋಗಿ, ನಂತರ ಕುರುಬರ ಬೀದಿಯ ಮನೆಯೊಂದರಲ್ಲಿ ಕೂಡಿಹಾಕಿ ಕೊಲೆ ಬೆದರಿಕೆ ಹಾಕಿದ್ದಳು. ಮೂರನೇ ಆರೋಪಿ ನಾಗರತ್ನ ಅವರನ್ನು ಮನೆಗೆ ಕರೆಸಿಕೊಂಡು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಆರೋಪಿ ನಾಗೇಂದ್ರಗೆ ಸಹಕರಿಸಿದ್ದಳು. ಈ ಸಂಬಂಧ ತನಿಖಾಧಿಕಾರಿ ಚಂದ್ರಶೇಖರ್ ದೋಷರೋಪಣ ಪಟ್ಟಿ ಸಲ್ಲಿಸಿದ್ದರು.

ದಂಡದ ಮೊತ್ತ 8 ಲಕ್ಷ ರೂ.ಗಳನ್ನು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಬಾಲಕಿಗೆ 5 ಲಕ್ಷ ರೂ.ಗಳನ್ನು ಒಟ್ಟಾರೆ 13 ಲಕ್ಷ ರೂ.ಗಳನ್ನು ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಆಶಾ ಕೆ.ಎಸ್. ವಾದ ಮಂಡಿಸಿದ್ದರು.

ಈ ಸುದ್ದಿಯನ್ನೂ ಓದಿ | IRCTC Super App: ಶೀಘ್ರದಲ್ಲೇ ಬರಲಿದೆ ರೈಲ್ವೆ ಇಲಾಖೆಯ ಸೂಪರ್ ಆ್ಯಪ್‌; ಏನಿದರ ವಿಶೇಷ?

ಇಡಿ ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ರದ್ದು ಮಾಡಿದ ಹೈಕೋರ್ಟ್‌

ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣಕ್ಕೆ (Valmiki corporation Scam) ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಇಡಿ ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಇಬ್ಬರು ಇಡಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಕೇಸ್‌ ಅನ್ನು ರದ್ದುಗೊಳಿಸಲು ಉಚ್ಚ ನ್ಯಾಯಾಲಯ ಆದೇಶಿಸಿದೆ.

ತಮ್ಮ ವಿರುದ್ಧದ ಕೇಸ್ ರದ್ದುಗೊಳಿಸುವಂತೆ ಇಡಿ ಅಧಿಕಾರಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ದೂರು ದಾಖಲಿಸಿದ್ದ ಅಧಿಕಾರಿ ಕೇಸ್ ಹಿಂಪಡೆದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವಂತೆ ಆದೇಶ ನೀಡಿ ಪ್ರಕರಣ ಇತ್ಯರ್ಥ ಗೊಳಿಸಿದೆ.

ವಿಚಾರಣೆ ವೇಳೆ ಇಡಿ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಸಮಾಜಕಲ್ಯಾಣ ಇಲಾಖೆ ನಿರ್ದೇಶಕ ಕಲ್ಲೇಶ್ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇಡಿ ಅಧಿಕಾರಿಗಳಾದ ಮನೋಜ್ ಮಿತ್ತಲ್ ಹಾಗೂ ಮುರಳಿ ಕಣ್ಣನ್ ವಿರುದ್ಧ ಎಫ್‌ಐಆ‌ರ್ ದಾಖಲಾಗಿತ್ತು. ಬಳಿಕ ಕಲ್ಲೇಶ್ ತಾವೇ ಕೇಸ್ ಹಿಂಪಡೆದಿದ್ದರು. ಇದೀಗ ಹೈಕೋರ್ಟ್ ಪ್ರಕರಣವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.