Tuesday, 13th May 2025

Physical abuse: ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ, ಗರ್ಭಪಾತ: ಬಿಲಾಲ್ ರಫೀಕ್‌ ಅರೆಸ್ಟ್‌

Physical abuse

ಬೆಂಗಳೂರು: ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಯುವತಿಯನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಎರಡು ಬಾರಿ ಅತ್ಯಾಚಾರ (Physical abuse) ಮಾಡಿ, ಯುವತಿ ಗರ್ಭಿಣಿಯಾದ ಬಳಿಕ ಗರ್ಭಪಾತ ಮಾಡಿಸಿದ ಆರೋಪದಲ್ಲಿ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಗೋವಿಂದಪುರ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಛತ್ತೀಸ್​ಗಢ ಮೂಲದ ಯುವತಿ ಬೆಂಗಳೂರಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. 2021ರಲ್ಲಿ ಇನ್‌ಸ್ಟಾಗ್ರಾಂನಲ್ಲಿ ಕೇರಳ ಮೂಲದ ಬಿಲಾಲ್ ರಫೀಕ್‌ ಎಂಬಾತನ ಪರಿಚಯವಾಗಿತ್ತು. ನಂತರ ಪರಸ್ಪರ ಪ್ರೀತಿಸಿದ್ದರು. ಈ ಸಂದರ್ಭದಲ್ಲಿ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಬಿಲಾಲ್ ರಫೀಕ್, 2 ಬಾರಿ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ಎರಡೂ ಬಾರಿಯೂ ಗರ್ಭಿಣಿಯಾದಾಗ ಗರ್ಭಪಾತ ಮಾಡಿಸಿದ್ದ ಎಂದು ಯುವತಿ ಆರೋಪಿಸಿದ್ದಾಳೆ.

2024ರಲ್ಲಿ ಆರೋಪಿಯಿಂದ 3ನೇ ಬಾರಿ ಗರ್ಭಿಣಿಯಾದಾಗ ತನ್ನ ಒತ್ತಾಯದ ಕಾರಣಕ್ಕೆ ಆರೋಪಿ ಮದುವೆಗೆ ಸಮ್ಮತಿಸಿದ್ದ. ಎರಡೂ ಕುಟುಂಬಸ್ಥರು ಮದುವೆ ಮಾಡಿಕೊಳ್ಳಲು ಒಪ್ಪಿಗೆ ನೀಡಿದ್ದರು. ಬಳಿಕ ಆರೋಪಿಯ ಪೋಷಕರು ಹಾಗೂ ಸಹೋದರಿ ಕರೆ ಮಾಡಿ, ತಾವು ಮದುವೆಗೆ ಒಪ್ಪುವುದಿಲ್ಲ ಎನ್ನುತ್ತಾ ತನಗೆ ಅಸಭ್ಯವಾಗಿ ನಿಂದಿಸಿ, ಜಾತಿನಿಂದನೆ ಮಾಡಿದ್ದಾರೆ. ಮದುವೆಗೆ ಯತ್ನಿಸಿದರೆ ಪ್ರಾಣ ತೆಗೆಯುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ನೊಂದ ಯುವತಿ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಈ ಸುದ್ದಿಯನ್ನೂ ಓದಿ | Physical Abuse : ಅತ್ಯಾಚಾರ ಕೇಸ್‌ ವಾಪಸ್‌ ಪಡೆಯದ್ದಕ್ಕೆ ಸಂತ್ರಸ್ತೆಯ ಅಜ್ಜನನ್ನೇ ಗುಂಡು ಹಾರಿಸಿ ಕೊಂದ ಆರೋಪಿ

ಸಂತ್ರಸ್ತ ಯುವತಿಯ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಗೋವಿಂದಪುರ ಠಾಣೆ ಪೊಲೀಸರು, ಸದ್ಯ ಆರೋಪಿ ಬಿಲಾಲ್ ರಫೀಕ್‌ನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.