ಗುಬ್ಬಿ: ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರೈತ ಸಂಘದ ಸದಸ್ಯರು ತಾಲ್ಲೂಕಿನ ನಿಟ್ಟೂರು ಗ್ರಾಮದಿಂದ ಗುಬ್ಬಿ ತಾಲ್ಲೂಕು ಕಚೇರಿಯವರೆಗೆ ಪಾದಯಾತ್ರೆ ನಡೆಸಿ ಬೃಹತ್ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರು. ತಹಶೀಲ್ದಾರ್ ಬಿ.ಆರತಿ ಅವರಿಗೆ ಸಲ್ಲಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರಪ್ಪ ಮಾತನಾಡಿ ತಾಲ್ಲೂಕಿನಲ್ಲಿ ನಡೆದ ಭೂ ಹಗರಣದಲ್ಲಿ ಅಕ್ರಮ ದಾಖಲೆ ಸಿಕ್ಕಿದೆ. ಇದನ್ನು ಕೂಡಲೇ ರದ್ದು ಪಡಿಸಿ ವಾಸ್ತವ ಅಲ್ಲಿ ಅನುಭವದಲ್ಲಿರುವ ಬಡ ರೈತನಿಗೆ ನೀಡಬೇಕು. ಬಗರ್ ಹುಕುಂ ಸಮಿತಿಯ ಸದಸ್ಯರಿಗೂ ಶಾಸಕರಿಗೂ ನಡುವಿನ ಮುಸುಕಿನ ಗುದ್ದಾಟಕ್ಕೆ ಅಮಾಯಕ ಬಡ ರೈತ ಅರ್ಜಿ ಸಲ್ಲಿಸಿ ಪರದಾಡುತ್ತಿದ್ದಾರೆ. ಇನ್ನೂ ಕೆಲವರಿಗೆ ಖಾತೆ ಪಹಣಿ ಆಗದೆ ಪೇಚಾಡುತಿದ್ದಾರೆ. ಇವೆಲ್ಲಾ ಅವಾಂತ ರಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್. ವೆಂಕಟೇಗೌಡ ಮಾತನಾಡಿ ರೈತರ ದೃಷ್ಠಿಯಲ್ಲಿ ಕಂದಾಯ ಇಲಾಖಾ ಸಿಬ್ಬಂದಿಗಳೇ ಭಯೋತ್ಪಾದಕ ರೀತಿ ಆಗಿದ್ದಾರೆ. ಸರ್ಕಾರ ಒಂದು ಕಡೆ ಹೊಣೆ ಮತ್ತೊಂದು ಕಡೆ ಅಧಿಕಾರಿಗಳು ಹೊಣೆ ಆದರೆ ಚುನಾಯಿತ ಪ್ರತಿನಿಧಿಗಳ ಜವಾಬ್ದಾರಿ ಇಲ್ಲಿ ತಿಳಿಯುತ್ತಿಲ್ಲ. ಶಾಸಕರು, ಸಂಸದರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ರೈತರ ಕಷ್ಟ ಆಲಿಸುತ್ತಿಲ್ಲ ಎಂದು ಕಿಡಿಕಾರಿದರು.
ದಲಿತ ಮುಖಂಡರಾದ ಎನ್ಎ ನಾಗರಾಜ್, ಜಿ.ಹರುವೇಸಂದ್ರ ಕೃಷ್ಣಪ್ಪ ಮಾತನಾಡಿ ಕರಡಿ ಕಲ್ಲು ಗ್ರಾಮದಲ್ಲಿ ಸಾಗುವಳಿ ಚೀಟಿ ನೀಡದೆ ರೈತರಿಗೆ ಅನ್ಯಾಯ ಆಗುತ್ತಿದ್ದು ತಾಲೂಕ್ ಆಡಳಿತ ಕೂಡಲೇ ಗಮನ ಹರಿಸಿ ಸಾಗುವಳಿ ಚೀಟಿಗಳನ್ನು ವಿತರಿಸಬೇಕು ಎಂದರು.
ಗೊಲ್ಲಹಳ್ಳಿ ಮಠದ ಶ್ರೀ ವಿಭವ ವಿದ್ಯಾ ಶಂಕರ ಸ್ವಾಮೀಜಿ ಮಾತನಾಡಿ ರೈತರು ದೇಶದ ಬೆನ್ನೆಲುಬು. ಯಾವುದೇ ರಂಗ ಇಲ್ಲವಾದರೂ ಸಮಾಜ ನಡೆಯುತ್ತದೆ. ಆದರೆ ಕೃಷಿಕರು ಇಲ್ಲವಾದರೆ ಇಡೀ ಮನುಕುಲವೇ ನಾಶವಾಗುತ್ತದೆ. ದೇಶವೇ ಸರ್ವನಾಶವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ರೈತರ ಬಗ್ಗೆ ಅಸಡ್ಡೆ ತೋರದೆ ಕೃಷಿಕರ ಸಂಕಷ್ಟ ಆಲಿಸಬೇಕು. ಈ ಜೊತೆಗೆ ಅಗತ್ಯ ಬೆಂಬಲ ಬೆಲೆ, ವಿದ್ಯುತ್ ಮತ್ತು ನೀರು ಸಮರ್ಪಕ ರೀತಿ ನೀಡಿದರೆ ರೈತ ಸ್ವಾಭಿ ಮಾನ ಬದುಕು ಕಟ್ಟಿ ದೇಶದ ಉನ್ನತಿಗೆ ಕಾರಣವಾಗುತ್ತಾನೆ ಎಂದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್, ಶಂಕರಲಿಂಗೇಗೌಡ, ಸಿ.ಟಿ.ಕುಮಾರ್, ಕುಮಾರಸ್ವಾಮಿ, ಗಂಗ ರೇವಣ್ಣ, ಶಿವಕುಮಾರ್, ಲೋಕೇಶ್, ದಲಿತ ಮುಖಂಡರಾದ ಎನ್.ಎ.ನಾಗರಾಜು, ಕೃಷ್ಣಪ್ಪ, ಕಿಟ್ಟದಕುಪ್ಪೆ ನಾಗರಾಜು ಜೊತೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಶ್ರೀನಿವಾಸ್ ಹಾಗೂ ಪ್ರಾಂತ ರೈತ ಸಂಘ ಸದಸ್ಯರು ಇದ್ದರು.