ಮೈಸೂರು: ನಾಳೆಯಿಂದ 21ರವರೆಗೆ ಮೈಸೂರು ಅರಮನೆಗೆ ಪ್ರವೇಶವಿಲ್ಲ…ಜೂ.19ರಿಂದ ಜೂ.21 ಅಂದರೆ ಮಂಗಳವಾರ ದವರೆಗೆ ಮೈಸೂರಿನ ಅರಮನೆಗೆ ಯಾವುದೇ ಪ್ರವಾಸಿಗರಿಗೆ ಒಳಗಡೆ ಪ್ರವೇಶ ಇರುವುದಿಲ್ಲ. ಜೂ.21ರಂದು ವಿಶ್ವದ ಎಲ್ಲೆಡೆ ವಿಶ್ವ ಯೋಗ ದಿನಾಚರಣೆ ಆಚರಿಸಲಾಗುತ್ತದೆ.

ಈ ಬಾರಿ ಮೈಸೂರು ಅರಮನೆ ಆವರಣದಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಅದಕ್ಕಾಗಿ ಪೂರ್ವ ಸಿದ್ಧತೆ ಕೈಗೊಳ್ಳಬೇಕಿರುವುದರಿಂದಾಗಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಅರಮನೆ ಆವರಣದಲ್ಲಿ ನಡೆಯುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನೂ ಜೂ.22ರವರೆಗೆ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ಅರಮನೆ ಆಡಳಿತ ಮಂಡಳಿ ತಿಳಿಸಿದೆ.
ಯೋಗಾಭ್ಯಾಸದ ನಂತರ ಅರಮನೆಯಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಯಲಿದ್ದು, ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅರಮನೆಗೆ ಭೇಟಿ ನೀಡಲಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಅರಮನೆ ಯಲ್ಲಿ ರಾಜ ವಂಶಸ್ಥರ ಜೊತೆ ಪ್ರಧಾನಿ ಮೋದಿ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವೇಳೆ ಅರಮನೆ ಆವರಣದಲ್ಲಿ ನಡೆಯಲಿರುವ ಬೃಹತ್ ಯೋಗ ಪ್ರದರ್ಶನ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪಾಲ್ಗೊಳ್ಳಲು ಮೈಸೂರು ರಾಜವಂಶಸ್ಥರಿಗೆ ಆಹ್ವಾನ ನೀಡಲಾಗಿದೆ.
ಪ್ರಧಾನಮಂತ್ರಿ, ಸಿಎಂ, ರಾಜ್ಯಪಾಲರು, ಜಿಲ್ಲಾ ಉಸ್ತುವಾರಿ ಹಾಗೂ ಕೇಂದ್ರ ಆಯುಷ್ ಮಂತ್ರಿಗಳು ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದು, ಇದೀಗ ರಾಜ್ಯ ಸರ್ಕಾರ ಗಣ್ಯರ ಪಟ್ಟಿಯಲ್ಲಿ ಮೈಸೂರು ಮಹಾರಾಜ ಯದುವೀರ್ ಒಡೆಯರ್ ಹಾಗೂ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರ ಹೆಸರನ್ನೂ ಸೇರಿಸಿದೆ.